Sunday 13 July 2014

ಕಿನ್ನರಿ

 
         ಬಾಲ್ಯ ಕಾಲದ ಕಿನ್ನರಿಯು ನವಿಲುಗರಿಯ ಬಣ್ಣಗಳನು
        ಎರಚಾಡುತ್ತ , ಬೆಳ್ಳಿಯ ಅಂಚು ಬಂಗಾರದ ಚುಕ್ಕಿಯ
        ನೊರೆಯಂತಹ ಬಿಳಿಯ ಗೌನಿನಲಿ ಅಚಾನಕವಾಗಿ
        ಬಂದು ಎದುರಿಗೆ ಕುಳಿತಾಗಸಂತೋಷವೆನಿಸಿದರೂ

        ಅವಳ ಕಣ್ಣಂಚಿನಲಿ ಮಡುಗಟ್ಟಿದ್ದು ತೊಟ್ಟಿಕ್ಕುವಂತಿತ್ತು
        ಮೊದಲಿನಂತಾಗಿದ್ದರೆ ನಾನೂ ಅಳ ಬಹುದಿತ್ತು.
        ಆದರೆ ಇಂದು. . .. .

        ಕರಿಕೋಟು,ಬಿಳಿ ಬ್ಯಾಂಡು ಮೇಲೆ ಧಿಮಾಕು
        ನೆತ್ತಿಯವರೆಗೇರಿದ್ದ ತಿರುಗು ಕುರ್ಚಿಯ ಸನ್ನದು
         ಪೆನ್ಸಿಲನು ಬೆರಳುಗಳಲಾಡಿಸುತ ಹೇಗೆ
         ಸಂಬೋಧಿಸುವುದೆಂದುಲೆಕ್ಕಚಾರ ಮಾಡುತಾ
         ಕ್ಯಾಷುಯೆಲ್ಲಾಗಿ “ಯೆಸ್ ಮೇಡಮ್’’ ಎಂದೆ

         ನೋಡನೋಡುತ್ತಿದ್ದಂತೆಯೇ ಅವಳು
        ಅಣೆಕಟ್ಟು ಮುರಿದ ಪ್ರವಾಹದಂತೆ ಭೋರ್ಗರೆದಳು
         ನಾನೇನು ಮಾಡಿದೆ ? ಗಾಬರಿಯಾದರೂ ತೋರದೆ
        ಒಂಚೂರು ಆತ್ಮೀಯತೆಯಿಂದ

        ಗಂಡ ತೊರೆದಿರುವನೇ,ಡೈವೋರ್ಸ್
        ಮೇನ್‍ಟೇನೆನ್ಸ್ ,ಡೌರಿ ಕೇಸ್ ?
        ಅವಳಿಗೆ ಪದಗಳನ್ನೊದಗಿಸಿದೆ .
        ತೀರಾ ಸೋತು ಗೌನನ್ನು
         ಕಣ್ಣಿಗೊತ್ತಿಕೊಂಡುಬಿಕ್ಕಳಿಸಿದಳು

        ಈಗ ಮಾತ್ರ ಇಡೀ ಆಫೀಸ್ ಮೌನ ಸಿಪಿಸಿ
        ಸಿಆರ್‍ಪಿಸಿ ಡೌರಿ ಆಕ್ಟ್‍ಗಳೆಲ್ಲಾ ನಿಂತಲ್ಲಿಯೇ
        ಬಣ್ಣ ಕಳೆದು ಮುದುರಿಕೊಂಡವು.ನೀರವತೆಯ
        ಮಧ್ಯೆ ಕ್ಷೀಣ ದನಿಯಲಿ ನುಡಿದೆ `ಫೀ’ಬಗ್ಗೆ
        ಚಿಂತೆ ಬೇಡ. ನಿ ನನ್ನ ಬಾಲ್ಯ ಸಖಿ
        
        ಈ ಪರಿಚಯದಿಂದಾಕೆ ದೀಪದಂತೆ ಮಿನುಗಿದಳು
        `ಹಾಗಿದ್ದರೆ ’ಸಂಕೋಚದಿಂದ ನುಡಿದಳು ‘ನನ್ನೊಡನೆ
         ಆಟವಾಡಲು ಸಾಧ್ಯವೇ’ ನನಗೆ ಶಾಕ್ ಆದಂತಾಯಿತು
         ಅವಳು ಕಾದಳು. . ..ಕಾದಳು

        ತನ್ನ ಗೌನನೆತ್ತಿ ಪುಟ್ಟ ಗುಲಾಬಿ ಪಾದಗಳನು
        ಮಿನುಗಿಸುತಾ ನಿಧಾನವಾಗಿ ಮೆಟ್ಟಲಿಳಿದು
         ಕರಗಿದಳು ಬಹುಶಃ ನನ್ನ ಅಪರಿಚಿತ
        ಕಣ್ಣುಗಳು ಹೆದರಿಸಿರಬೇಕು ಅವಳನು


No comments:

Post a Comment