Sunday 20 July 2014

ಸುರಯ್ಯ ಎಂಬ ನತದೃಷ್ಟೆ

     
  ಇತ್ತೀಚೆಗೆ ನಮ್ಮೂರಿನಲ್ಲಿ ನಡೆದ ಒಂದು ಪ್ರಸಂಗ . ನೆರೆ ಮನೆಯ ನಾಲ್ಕು ವರ್ಷದ ಎಳೆಯ  ಬಾಲೆಗೆ ಚಾಕೊಲೇಟ್ ನೀಡುತ್ತಿದ್ದ ಒಬ್ಬ ಯುವಕ, ಸಮಯ ಕಾದು  ಆ ಮಗುವನ್ನು  ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ. ಈಗ ಅವನು ಜೈಲಿನಲ್ಲಿದ್ದಾನೆ. ಈ ಬಗ್ಗೆ ಕವಿಹೃದಯದ ಸ್ನೇಹಿತರಾದ ನವಾಬ್ ಬೇಲೂರು ದಿನಪತ್ರಿಕೆಗೆ  ಲೇಖನವೊಂದನ್ನು ಬರೆದರು .  ಲೇಖನದಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತ ಪಡಿಸಿದ್ದಾರೆ “ಇಸ್ಲಾಮಿನಲ್ಲಿ ಇಂತಹ ಅತ್ಯಾಚಾರಿಗಳಿಗಿರುವ  ಒಂದು ಘೋರ ಶಿಕ್ಷೆಯ ಬಗ್ಗೆ ಓದಿದ ನೆನಪಿದೆ. ಅತ್ಯಾಚಾರಿ ಯಾರೇ ಆಗಿರಲಿ ಅವನನ್ನು ಸಾರ್ವಜನಿಕ ಸ್ಥಳದಲ್ಲಿ ಹೂತು ಜನರಿಗೆ ಕೈಗೆ  ಕಲ್ಲು ನೀಡಿ ಹೊಡೆಸ ಬೇಕಂತೆ. ಅಲುಗಾಡದ ಸ್ಥಿತಿಯಲ್ಲಿ ಬೀಳುವ ಒಂದೊಂದು ಕಲ್ಲು  ಅವನನ್ನು ಚೀತ್ಕರಿಸುವ ಅವಕಾಶವನ್ನೂ ನೀಡದೆ ನರಳಿಸಿ ಬಿಡುತ್ತದೆ.ಇದನ್ನು ನೋಡಿದವರ ಮೈ ಮನಸ್ಸುಗಳು ಕಂಪಿಸಿ ಅಂತಹ ಅಪರಾಧ ಮಾಡುವುದು ಹಾಗಿರಲಿ ಅದರ ಬಗ್ಗೆ ಯೋಚಿಸುವುದು ದುಸ್ತರವಾಗಿಬಿಡುತ್ತದೆ. ನಿಜ , ಇಂತಹ ರಾಕ್ಷಸರಿಗೆ ಈ ಶಿಕ್ಷೆಯೂ ಕಡಿಮೆಯೇ. ಆಗಬೇಕು ನೋಡಿ ಒಬ್ಬನಿಗಾದರೂ ಇಂತಹ ಶಿಕ್ಷೆಯಾದರೆ ನೂರಾರು ಕಾಮುಕರ ನರ ಕತ್ತರಿಸಿದಂತಾಗುತ್ತದೆ. ಆ ಶಿಕ್ಷೆಗೆ ಹೆದರಿ ಅವರ ನರ ಉದ್ರೇಕವೇ ನಿಂತು ಹೋಗುತ್ತದೆ .ಆದರೆ ಏನು ಮಾಡುವುದು?ಹಾಗಾಗುವುದಿಲ್ಲವಲ್ಲ ಜಗತ್ತಿಗೆ ಮಾದರಿಯಾಗಿರುವ ನಮ್ಮ ಸಂವಿಧಾನದಲ್ಲಿ ಇಂತಹ ಕಠೋರ ವಿಧಿಯೊಂದು ಅದೇಕೆ ಸೇರ್ಪಡೆಯಗಿಲ್ಲವೋ”
     ನವಾಬ್‍ರವರ ಲೇಖನವನ್ನು ಓದಿದ ಕೂಡಲೇ ನನಗೆ ನೆನಪಾದದ್ದು “ ದಿ ಸ್ಟೋನಿಂಗ್ ಆಫ್ ಸುರಯ್ಯಾ .ಎಮ್” ಎಂಬ ಚಲನಚಚಿತ್ರದ ಡಿವಿಡಿ . ನಮ್ಮ ಸ್ನೇಹಿತರ್ಯಾರೋ  ಈ ಡಿವಿಡಿಯನ್ನು ನನಗೆ ಕಳುಹಿಸಿದ್ದು, ‘ ನೀವು ನೋಡಲೇ ಬೇಕಾದ ಫಿಲಮ್ ’ ಎಂದು ಒತ್ತಿ ಒತ್ತಿ ಹೇಳಿದ್ದರು . ಆ ಫಿಲಮನ್ನು ಅವರ ಆದೇಶದ ಪ್ರಕಾರ ನಾನು ಈಗಾಗಲೇ  ನೋಡಿರಬಹುದೆಂದು ಭಾವಿಸಿ  ನನ್ನ ಅಭಿಪ್ರಾಯವನ್ನು ಕೋರಿ ಅನೇಕ ಸಲ ಫೋನ್ ಕೂಡ ಮಾಡಿದ್ದರು . ಪ್ರತಿ ಸಲವೂ ‘ ನಾನಿನ್ನೂ ನೋಡಿಲ್ಲಾ ’ ಎಂಬ ನನ್ನ ಅಭಿಪ್ರಾಯವನ್ನು ಕೇಳಿ ಫೋನ್ ಮಾಡುವುದನ್ನೇ ಬಿಟ್ಟಿದ್ದರು . ಅದರ ಟೈಟಲನ್ನು ನೋಡಿಯೇ ಅದನ್ನು ನಾನು ನೋಡಿರಲಿಲ್ಲ ; ಇನ್ನೇನು  ಇರುತ್ತೆ ಹೇಳಿ ಅದರಲ್ಲಿ ? ಸುರಯ್ಯಾ ಖಂಡಿತವಾಗಿಯೂ ಒಬ್ಬ ಹೆಣ್ಣಿನ ಹೆಸರು . .  .. ಅವಳನ್ನು ಕಲ್ಲು ಹೊಡೆದು ಸಾಯಿಸುವ ಪ್ರಸಂಗ . . .. ನನ್ನ ಮನಸ್ಸು ಆ ಫಿಲಮ್ ನೋಡಲು ಸಿದ್ಧವಾಗಿಯೇ ಇರಲಿಲ್ಲ .ನವಾಬ್ ರವರ ಲೇಖನವನ್ನು  ನೋಡಿದ ಮೇಲೆ ಅದನ್ನು ನೋಡಬೇಕೆನ್ನಿಸಿತು . ಕೂಡಲೇ ಹುಡುಕತೊಡಗಿದೆ. ಅಂತೂ ಕೊನೆಗೆ ಆ ಡಿವಿಡಿ ಸಿಕ್ಕಿತು. ಅದರೆ  ನೋಡುವ ಮೊದಲು ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆನಿಸಿತು . ಮೊದಲಿಗೆ ನಾನು ಏಕಾಂಗಿಯಾಗಿ ಆ ಚಲನಚಿತ್ರವನ್ನು ನೋಡಬೇಕೆಂದು ನಿರ್ಧರಿಸಿದೆ. ಹೃದಯ ದ್ರವಿಸಿದಾಗ ಎಷ್ಟು ಬೇಕಾದರೂ ಕಣ್ಣೀರು ಹರಿಸಬಹುದಲ್ಲಾ, ಆದರೆ ಬೇರೆಯವರು ನೋಡದಿದ್ದರೆ ಸಾಕು. ಎರಡನೆಯದಾಗಿ ಯಾವ ಹೊತ್ತಿನಲ್ಲಿ ನೋಡಬೇಕು? ಬೆಳಬೆಳ್ಳಗ್ಗೆಯೇ ನೋಡಿದರೆ ಇಡೀ ದಿನ ಆವರಿಸುವ ಆ ದಟ್ಟ ವಿಶಾದ ಭಾವವನ್ನು ಶಿಲುಬೆಯಂತೆ ಹೊತ್ತು ಕೋರ್ಟಿನ ಕೆಲಸಗಳನ್ನು ಹೇಗೆ ನಿರ್ವಹಿಸುವುದು. . . . ರಾತ್ರಿ ಹೊತ್ತು ನೋಡಿದಲ್ಲಿ ಎದೆ ಭಾರವಾಗಿ ನಿದ್ರೆ ಇಲ್ಲದೇ ಕಳೆವ ರಾತ್ರಿಯ ಯಮಯಾತನೆ ಯಾಕೆ ಬೇಕು,ಹೀಗೆಲ್ಲಾ ಆಲೋಚನೆಯನ್ನು ಮಾಡುತ್ತಾ ಡೋಲಾಯಮಾನ ಮನಃಸ್ಥಿತಿಯಲ್ಲಿ ಸ್ವಲ್ಪಕಾಲ ತೊಳಲಾಡಿ  ಕೊನೆಗೂ ಗಟ್ಟಿ ಮನಸ್ಸು ಮಾಡಿದೆ. ಈ ಚಲನಚಿತ್ರವನ್ನು ನೋಡಲು ಅವಳ ಅಸಹಾಯಕತೆಯ ಒಂದು ಭಾಗವನ್ನು ಅನುಭವಿಸಲು ನನಗೆ ಇಷ್ಟೊಂದು ಕಷ್ಟವಾಗುತ್ತಿರುವಾಗ ಪುರುಷಶಾಹಿಯ ಆಕ್ರಮಣಕ್ಕೆ ಬಲಿಯಾದ ಅವಳ ನೋವು ಎಂತಹದಿರಬೇಕು. ನಾನು ಆ ಕ್ಷಣದಲ್ಲಿಯೇ ಆ ಚಲನಚಿತ್ರವನ್ನು ನೋಡಲು ತೀರ್ಮಾನಿಸಿದೆ.
     ಚಲನಚಿತ್ರದ ಟೈಟಲ್ ಕಾರ್ಡ್‍ನಲ್ಲಿಯೇ ಅನಿರೀಕ್ಷಿತವಾದ ಎದೆ ಬಿರಿಯುವ    ಸಂದೇಶ. ಇದೊಂದು ಸತ್ಯಕಥೆ ಆಧಾರಿತ ಚಲನಚಿತ್ರ. ನನ್ನ ಕಣ್ಣುಗಳು ತಂತಾನೆ ತುಂಬತೊಡಗಿದವು. ಇರಾನಿನಲ್ಲಿ ಶಾಹನ ಆಡಳಿತ ಕೊನೆಗೊಂಡಿತ್ತು, ಆಯತುಲ್ಲಾ ಖೊಮೈನಿಯ ಆಳ್ವಿಕೆ ಆರಂಭವಾಗಿತ್ತು . ಒಬ್ಬ ್ಬಫ್ರೆಂಚ್ ಇರಾನಿ ಸಂಜಾತ ಪತ್ರಕರ್ತ ಫ್ರೈದುನ್ ಸಾಹೇಬ್‍ಜಾಮ್  ತನ್ನ ಕೆಲಸದ ನಿಮಿತ್ತ ಇರಾನ್‍ನಿಂದ ತನ್ನ ಕಾರಿನಲ್ಲಿ ಫ್ರಾನ್ಸ್‍ಗೆ ಪ್ರಯಾಣ ಮಾಡುತ್ತಿದ್ದ. ಆ ಎರಡು ದೇಶಗಳ ಗಡಿಯಲ್ಲಿ ಪುಟ್ಟದಾದ ಸುದರವಾದ ಒಂದು ಪಟ್ಟಣ ‘ಕುಫಾಯೆ’. ಕುಫಾಯೆಯ ಸಮೀಪ ಪತ್ರಕರ್ತನ ಕಾರು ಕೆಟ್ಟು ಹೋಗುತ್ತದೆ. ಮುಂದೇನೂ ದಾರಿ ಕಾಣದೆ ಅವನು ಇನ್ನೊಂದು ದೊಡ್ಡ ವಾಹನಕ್ಕೆ ತನ್ನ ಕಾರನ್ನು ಹಗ್ಗದಿಂದ ಕಟ್ಟಿ ಆ ಪಟ್ಟಣಕ್ಕೆ ತರುತ್ತಾನೆ .ಅಲ್ಲಿನ ಗ್ಯಾರೇಜ್ ಮಾಲೀಕ ಹಾಶಿಮ್ ಎಂಬುವಾತ . ಹಾಶಿಮ್‍ಗೆ ಮದುವೆಯಾದ ಮುವತ್ತು ವರ್ಷಗಳ ನಂತರ ಒಬ್ಬ ಮಗ ಮೊಹಿಸಿನ್ ಹುಟ್ಟಿರುತ್ತಾನೆ . ಆ ಮಗನಿಗೆ ಈಗ ಸುಮಾರು ಹದಿನಾರು ವರ್ಷ.ಆ ಪತ್ರಕರ್ತ ತನ್ನ ಕಾರನ್ನು ಹಾಶಿಮ್‍ಗೆ ಒಪ್ಪಿಸುವಷ್ಟರಲ್ಲಿಯೇ ಆತನೊಬ್ಬ ಪತ್ರಕರ್ತ ಎಂದು ಆ ಪಟ್ಟಣದ ಹಲವಾರು ಜನರಿಗೆ ತಿಳಿಯುತ್ತದೆ . ಒಬ್ಬ ಎತ್ತರದ ನಿಲುವಿನ ಹೆಂಗಸು . . . ಆಕೆಯ ಹೆಸರು ಝೊಹ್ರಾ ಎಂದು  ಕಪ್ಪು ಚಾದರವನ್ನು ತನ್ನ ಸುತ್ತಲೂ ಆವರಿಸಿಕೊಂಡು ಅ ಪತ್ರಕರ್ತನೊಡನೆ ಮಾತನಾಡಲು ಪ್ರಯತ್ನಿಸುತ್ತಾಳೆ . ಕೂಡಲೇ ಅಲ್ಲಿಗೆ ಬಂದವರು  ಕುಫಾಯೆ ಪಟ್ಟಣದ  ಮೇಯರ್ ಇಬ್ರಾಹಿಂ ಮತ್ತು ಆ ಪಟ್ಟಣದ ಮುಲ್ಲಾ ಮತ್ತು ಮುಖ್ಯ ನ್ಯಾಯಾಧೀಶ ಶೇಖ್ ಹಸನ್. .. ... ಸದಾ ಜಪಮಣಿ ತಿರುಗಿಸುತ್ತಾ ಅಲ್ಲಾಹನ ಭಯದಲ್ಲಿ ಬದುಕುತ್ತಿದ್ದೇನೆ ಎಂದುಕೊಂಡವ.ಅವರಿಬ್ಬರೂ ಸೇರಿ  .ಝೊಹರಳನ್ನು ಅಲ್ಲಿಂದ ಓಡಿಸುತ್ತಾರೆ . ಅವಳೊಬ್ಬಹುಚ್ಚಿ . . .ಆಕೆಯೊಡನೆ ಮಾತನಾಡಬೇಡವೆಂದು ಪತ್ರಕರ್ತನನ್ನು ಎಚ್ಚರಿಸುತ್ತಾರೆ . ತಮ್ಮ ಆತಿಥ್ಯವನ್ನು ಸ್ವೀಕರಿಸಬೇಕೆಂದು  ಆತನಿಗೆ ಆಹ್ವಾನವನ್ನು ನೀಡುತ್ತಾರೆ . ಅವರ ಆತಿಥ್ಯವನ್ನು ನಯವಾಗಿಯೇ ನಿರಾಕರಿಸಿದ ಆ ಪತ್ರಕರ್ತ ಸಮೀಪದ ಕಾಫಿ ಶಾಪ್‍ನಲ್ಲಿ ಕಾಫಿ ಕುಡಿಯುತ್ತಿರುತ್ತಾನೆ . ಆಗ ಅವನ ಬಳಿ ಕಲ್ಲಿನಲ್ಲಿ ಸುತ್ತಿದ್ದ ಒಂದು ಚೀಟಿಬಂದು ಬೀಳುತ್ತದೆ.  ದಿಗಿಲುಗೊಂಡ ಅವನು ತಿರುಗಿ ನೋಡಿದಾಗ  ಝೊಹ್ರಾ ನಿಂತಿದ್ದು ಆ ಚೀಟಿಯನ್ನು ಬಿಡಿಸಿ ನೋಡುವಂತೆ ಸಂಜ್ಞೆ ಮಾಡುತ್ತಾಳೆ. ತನ್ನ ಮನೆಯ ಹಾದಿಯನ್ನು ಆಕೆ ಚಿತ್ರ ಸಮೇತ ಆ ಚೀಟಿಯಲ್ಲಿ ನಿರೂಪಿಸಿರುತ್ತಾಳೆ . ತುಸು ಭಯವಾದರೂ ತೋರಗೊಡದೆ ಪತ್ರಕರ್ತನ ಎಂದಿನ ಕುತೂಹಲದಿಂದ ಅವನು ಆಕೆಯ ಮನೆಯತ್ತ ಧಾವಿಸುತ್ತಾನೆ
     ಆಕೆ . ..  ಅಂದರೆ ಝೊಹ್ರಾ ತನ್ನ ಮನೆಯಲ್ಲಿದ್ದ ಪುಟ್ಟ ಬಾಲಿಕೆಯರನ್ನು ಆಟವಾಡಿಕೊಳ್ಳುವಂತೆ ಹೇಳಿ , ಪತ್ರಕರ್ತನಿಗೆ ಚಹಾದ ಬಟ್ಟಲಿನೊಡನೆ ಒಂದು ಕಥೆಯನ್ನೂ ನೀಡುತ್ತಾಳೆ.
 ಆ ಪಟ್ಟಣದಲ್ಲಿ ಒಂದು ಕುಟುಂಬ. ಅದರ ಯಜಮಾನ ಅಲಿ.  ಆತನ ಪತ್ನಿ ಸುರಯ್ಯಾ. ಅವರಿಬ್ಬರಿಗೆ ನಾಲ್ವರು ಮಕ್ಕಳು. ಸುಮಾರು ಹದಿನಾರು ವರ್ಷವಿರಬಹುದಾದ ತಂದೆಯ ಪಿತೃ ಪ್ರಾಧಾನ್ಯತೆಯನ್ನು ಅಕ್ಷರಶಃ ಮೈಗೂಡಿಸಿಕೊಂಡಿರುವ ರಝಾ ಆ ಕುಟುಂಬದ ಹಿರಿಯ ಮಗ. ಇನ್ನೂ ತಂದೆ ಮತ್ತು ಅಣ್ಣನಷ್ಟು ಕಠೋರತನವಿಲ್ಲದ ಹೆಂಗರುಳಿನ ಎರಡನೆಯ ಮಗ. ಅಗಲಗಣ್ಣುಗಳ ಗುಂಗುರು ಕೂದಲಿನ ಸುಮಾರು ಹತ್ತು ಮತ್ತು ಎಂಟು ವರ್ಷ ವಯಸ್ಸಿನವರು ಇಬ್ಬರು ಹೆಣ್ಣು ಮಕ್ಕಳು. ಸುರಯ್ಯಾ ಸಹಜವಾಗಿಯೇ ತನ್ನ ಕುಟುಂಬಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದಾಕೆ. ತನ್ನ ಕುಟುಂಬದ ವಿನಃ ಆಕೆಗೆ ಬೇರೆ ಯಾವ ವಿಷಯವೂ ಮುಖ್ಯವಲ್ಲ. ಆದರೆ ಅಲಿ ಇದಕ್ಕೆ ತದ್ವಿರುದ್ಧ. ಆತ ಲಂಪಟ. ನಗರದಿಂದ ಕರೆತಂದ ಬೆಲೆವೆಣ್ಣುಗಳೊಡನೆ ರಾಜಾರೋಷವಾಗಿ ತನ್ನ ಕಾರಿನಲ್ಲಿ ಪಟ್ಟಣದ ಬೀದಿಗಳಲ್ಲಿ ಸುತ್ತಾಡುವವ. ಇಷ್ಟೆಲ್ಲಕ್ಕೂ ಕುಮ್ಮಕ್ಕು ನೀಡುವಂತೆ ಅವನ ಶ್ರೀಮಂತಿಕೆ ಬೇರೆ. ಆಗತಾನೇ ನಗರದಲ್ಲಿ ಮೆಹ್ರಿ ಎಂಬ ಹದಿನಾಲ್ಕರ ಬಾಲೆಯನ್ನು ನೋಡಿದ್ದ ಅಲಿ ಅವಳ ಮೋಹದಲ್ಲಿ ಪರವಶನಾಗಿರುತ್ತಾನೆ . ಮೆಹ್ರಿಯನ್ನು ಪಡೆಯ ಬೇಕಾದಲ್ಲಿ ಅಲಿ  ವೈದ್ಯನಾಗಿದ್ದು ಹಾಲಿ ಸೆರೆಮನೆಯಲ್ಲಿರುವ ಆಕೆಯ ತಂದೆಯನ್ನು ಹೇಗಾದರೂ ಮಾಡಿ ಬಿಡುಗಡೆಗೊಳಿಸಬೇಕು ; ಎರಡನೆಯದಾಗಿ ತನ್ನಹೆಂಡತಿಯಾದ ಸುರಯ್ಯಾಳಿಂದಲೂ ಬಿಡುಗಡೆ ಪಡೆಯಬೇಕು . ಸುರಯ್ಯಾ ಇದ್ದಂತೆಯೇ ಅವನು ಇನ್ನೊಂದು ಮದುವೆ ಯನ್ನು ಮಾಡಿಕೊಳ್ಳಬಹುದಾದರೂ  ಎರಡು ಸಂಸಾರಗಳ ಹೊರೆಯನ್ನು ಹೊರಲು ಅವನು ಸಿದ್ಧನಿಲ್ಲ .ಈ ಎಲ್ಲಾ ವಿಷಯವು ಸುರಯ್ಯಾಳಿಗೆ ತಿಳಿದಿದ್ದರಿಂದ ಅಲಿಯೊಂದಿಗೆ ಅವಳಿಗೆ ಸದಾ ಜಗಳ.ಈ ಜಗಳಗಳು ಅನೇಕ ಸಾರಿ ವಿಕೋಪಕ್ಕೆ ಹೋಗಿದ್ದು ಅವಳಿಗೆ ಹೊಡೆತ ಬಡಿತಗಳೂ ನಡೆದು ಹೋಗಿವೆ . ನೋಡಲು ಸುಂದರವಾಗಿದ್ದು, ತೆಳು ಮೈಕಟ್ಟಿನ ಸುರಯ್ಯಳದ್ದು ಈ ವಿಷಯದಲ್ಲಿ ಮಾತ್ರ ಧೃಡ ನಿರ್ಧಾರ.
    ಕೊನೆಗೆ ಅಲಿ ತನ್ನೊಡನೆ ವಿಚ್ಛೇದನಕ್ಕೆ   ಸುರಯ್ಯಾಳ ಮನ ಒಲಿಸುವಂತೆ ಮುಲ್ಲಾನನ್ನು ಕೇಳಿಕೊಳ್ಳುತ್ತಾನೆ .  ಆ ಮೇರೆಗೆ ಸುರಯ್ಯಾಳ ಮನೆಗೆ ಹೋದ ಮುಲ್ಲಾನನ್ನು ಕಂಡು ಗಾಬರಿಯಾದ ಸುರಯ್ಯಾಳ ಚಿಕ್ಕಮ್ಮ ಝೊಹ್ರಾ   ಕೂಡ ಆತಂಕದಿಂದ ಅಲ್ಲಿಗೆ ಧಾವಿಸುತ್ತಾಳೆ . ಮುಲ್ಲಾ ಹಸನ್ ಆಲಿಯ ವಿಚ್ಛೇದನದ ಪ್ರಸ್ತಾವವನ್ನು ಸುರಯ್ಯಾಳ ಮುಂದಿಟ್ಟು ಗಂಡು ಮಕ್ಕಳನ್ನು ಪತಿಯ ವಶಕ್ಕೆ ನೀಡಿ ಇಬ್ಬರು ಹೆಣ್ಣು ಮಕ್ಕಳನ್ನು ಆಕೆ ಸಾಕಬೇಕೆಂತಲೂ ,ಅದಕ್ಕೆ ಬದಲಿಗೆ ಒಂದು ತುಂಡು ಜಮೀನನ್ನು ಆಕೆಗೆ ಕೊಡುವುದಾಗಿಯೂ ಹೇಳುತ್ತಾನೆ . ತನ್ನ ಮಕ್ಕಳ ಪೋóಷಣೆಗೆ ಅದು ಸಾಲದೆಂದು ಸುರಯ್ಯಾ ಅವನ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಾಳೆ . ಆಕೆಗೆ ಸಾಂತ್ವನವನ್ನು ನೀಡುವಂತೆ ಮುಲ್ಲಾ ಹಸನ್ ,ಅಲಿ¬ಂದ ಅಕೆ ವಿಚ್ಛೆದನವನನು ಪಡೆದ ನಂತರ ತನು ಆಕೆಯನ್ನು ಸಿಗ್ಹೆ ಅಂದರೆ ತಾತ್ಕಾಲಿಕ ಪತ್ನಿಯಗಿ ಸ್ವೀಕರಿಸುವುದಾಗಿ ನುಡಿಯುತ್ತಾನೆ . ಅವನ ನಿರ್ಲಜ್ಜ ಪ್ರಸ್ತಾವನೆಯಿಂದ ಕೆರಳಿದ ಸುರಯ್ಯಾ ಮತ್ತು ಝೊಹ್ರಾ ಸೇರಿ ಅವನನ್ನು ಮನೆಯಿಂದಾಚೆ ಹೊರಗಟ್ಟುತ್ತಾರೆ .ಸಹಜವಾಗಿಯೇ ಮುಲ್ಲ ಹಸನ್‍ಗೆ ಅವಳ ಮೇಲೆ ದ್ವೇಷವುಂಟಾಗುತ್ತದೆ.
 ತನ್ನ ಘನ ಕಾರ್ಯಗಳಿಂದ ಪರುಸೊತ್ತು ಹೊಂದಿದ ಅಲಿ ಕೆರಳಿ ಕೆಂಡವಾಗಿ     ಸಂಜೆ ಮನೆಗೆ ಮರಳುತ್ತಾನೆ. ಮುಲ್ಲಾ ಹಸನ್ ಗೆ   ಏಕೆ ಅವಮಾನ ಮಾಡಿದೆ ಎಂದು ನಿಂದಿಸುತ್ತಾನೆ . ಮುಲ್ಲಾನಿಂದ ಬಂದ ನಿರ್ಲಜ್ಜ ಪ್ರಸ್ತಾಪವನ್ನು ಆತನ ಮುಂದಿಟ್ಟರೂ ಒಪ್ಪದೆ ಆಕೆಯಮೇಲೆ ಕೈ ಎತ್ತುತ್ತಾನೆ;ಹಾಗೂ ಮೆಹ್ರಿಯ ಸೌಂಧರ್ಯವನ್ನು ತನ್ನ ಗಂಡು ಮಕ್ಕಳೆದುರಿಗೆ ವರ್ಣಿಸುತ್ತಾನೆ .  ಮಗ ರೆಝಾ ತಂದೆಯ ಪರ ವಹಿಸಿ ತಾಯಿಯನ್ನು ದೂಷಿಸುತ್ತಾನೆ. ಈ ಎಲ್ಲಾ ಹಿಂಸೆಯಿಂದ ಬೇಸತ್ತು ಸುರಯ್ಯಾ ತನ್ನ ಚಿಕ್ಕಮ್ಮಝೊಹ್ರಾಳ ಮನೆಗೆ ಹೋಗುತ್ತಾಳೆ .
ಝೊಹ್ರಾ ಇನ್ನೂ ಅವಳಿಗೆ ಒಂದೆರಡು ಸಮಾಧಾನದ ಮಾತನ್ನು ಹೆಳುವಷ್ಟರಲ್ಲಿಯೇ ಪಕ್ಕದ ಮನೆಯ ಗ್ಯಾರೇಜ್ ಮಾಲೀಕನಾದ ಹಾಶಮ್ ಒಡಿ ಬಂದು  ತನ್ನ ಪತ್ನಿ ತೀವ್ರ ಪ್ರಾಣಾಪಾಯದಲ್ಲಿ ಇರುವುದಾಗಿಯೂ ತನಗೆ ನೆರವನ್ನು ನೀಡಬೇಕೆಂತಲೂ ಕೇಳಿ ಕೊಳ್ಳುತ್ತಾನೆ . ಇಬ್ಬರು ಮಹಿಳೆಯರೂ ತಮ್ಮ ದುಃಖವನನು ಬದಿಗೊತ್ತಿ ಅಲ್ಲಿಗೆ ಧಾವಿಸುತ್ತಾರೆ . ಆದರೆ ,ಹಾಶಿಮ್‍ನ  ಪತ್ನಿ ಸಾವನ್ನಪ್ಪುತ್ತಾಳೆ .ಸಾವಿನ ಮನೆಗೆಂದು ಬಂದ ಇತರೆ ಹೆಂಗಸರು ಇನ್ನು ಮುಂದೆ ಹಾಶಮ್‍ಗೆ  ಆತನ ಪತ್ನಿಯ ವಸ್ತುಗಳು ಅನುಪಯುಕ್ತವೆಂದು ತಿಳಿದು ಆತನ ಅನುಮತಿಯನ್ನೂ ಕೋರದೆ ಅನೇಕ ವಸ್ತುಗಳನ್ನು  ತಮಗಾಗಿ ಎತ್ತಿಟ್ಟುಕೊಳ್ಳುತ್ತಾರೆ. ಝೊಹ್ರಾ ಆಕೆಯ ಸಂಸ್ಕಾರದ ಸಿದ್ಧತೆಯಲ್ಲಿ ತೊಡಗಿದಂತೆ , ಸುರಯ್ಯಾ ಆ ಮಹಿಳೆಯರಿಂದ ಮೃತಳಿಗೆ ಸೇರಿದ ವಸ್ತುಗಳನ್ನು ರಕ್ಷಿಸಿ ಹಾಶಿಮ್‍ನ ಕೈಗೆ ನೀಡುತ್ತಾಳೆ . ಆಸಂದರ್ಭದಲ್ಲಿ ಅವರಿಬ್ಬರನ್ನೂ ಒಟ್ಟಿಗೆ ನೋಡಿದ ಅಲಿಯ ಮನದಲಿ ಕುಟಿಲ ಯೋಜನೆಯೊಂದು ಹಾದು ಹೋಗುತ್ತದೆ.ಅದಕ್ಕೆ ಇಂಬಾಗುವಂತೆಅಲ್ಲಿ ಸೇರಿದ್ದ ಮೆಯರ್ ಇಬ್ರಾಹಿಮ್ ಮತ್ತು ಮುಲ್ಲಾ ಹಸನ್ ಮತ್ತು ಊರಿನ ಪ್ರಮುಖರು ಸೇರಿ ಹಾಶಿಮ್‍ನ ಮನೆಗೆಲಸವನ್ನು ಮತ್ತುಅಡಿಗೆ ಕೆಲಸವನ್ನು ಸುರಯ್ಯಾ ಮಾಡಿಕೊಡಬೇಕೆಂತಲೂ  ಮತ್ತು ಅದಕ್ಕೆ ಅತನು ಆಕೆಗೆ ಸಂಭಾವನೆಯನ್ನು ನೀಡಬೇಕೆಂತಲೂ ತೀರ್ಮಾನಿಸುತ್ತಾರೆ .ಆಕೆ ಅದಕ್ಕೊಪ್ಪದಿದ್ದಾಗ ಇದು ಸಮುದಾಯದ ಜವಾಬುದಾರಿಯಾದುದರಿಂದ ಆಕೆ ಪಾಲಿಸಲೇ ಬೇಕೆಂದು ಆದೇಶ ಮಾಡುತ್ತಾರೆ .ಅದರಂತೆ ಆಕೆ ಹಾಶಿಮ್‍ನ ಮನೆಗೆಲಸಕ್ಕೆ ಹೋಗಲಾರಂಭಿಸುತ್ತಾಳೆ . ಅಲಿಯೊಡನೆ ಎಂದಿನಂತೆ ಅವಳ ಘರ್ಷಣೆ ಮುಂದುವರೆದಿರುತ್ತದೆ.
 ಅಲಿ ಅತೃಪ್ತ ಮಹಿಳೆಯರ ನಡುವೆ ಹಾಶಿಮ್ ಮತ್ತು ಸುರಯ್ಯಗೆ ಅಕ್ರಮ ಸಂಬಂಧವಿದೆಯೆಂಬ ಗಾಳಿ ಸುದ್ದಿಯನ್ನು ತೇಲಿ ಬಿಡುತ್ತಾನೆ ಮತ್ತು ಮುಲ್ಲಾನ ಬಳಿಗೆ ಬಂದು ಅದೇ ಸುಳ್ಳು ಸುದ್ದಿಯನ್ನು ಹೇಳಿ ಆಕೆಯ ಮೇಲೆ ಕ್ರಮಕೈಗೊಳ್ಕಬೇಕೆಂದು ಕೊರುತ್ತಾನೆ . ಅದಕ್ಕೆ ಮುಲ್ಲಾಹಸನ್ ಒಪ್ಪುವುದಿಲ್ಲ . ಆಕೆಯ ಚಾರಿತ್ರೈವಧೆಯನ್ನು ಮಡಬೇಡವೆಮದು ಬುದ್ಧಿ ಹೇಳುತ್ತಾನೆ . ಆದರೆ ಅಲಿ ಅವನಿಗೆ ತಿರುಗೇಟನ್ನು ಕೊಟ್ಟು ಅತನ ಕ್ರಮಿನಲ್ಲ ಹಿನ್ನೆಲೆ ತನಗೆ ಗೊತ್ತಿದಯೆಂತಲೂ ಆತನಿಗೆ ನೀರು ನೆಲೆ ಇಲ್ಲದಂತೆ ಮಾಡುವುದಾಗಿಯೂ ಬೆದರಿಸುತ್ತಾನೆ . ಇದರಿಂದ ಅಸಹಾಯಕನಾದ ಮುಲ್ಲ ಅವಲ ವಿವಾಹಬಾಹಿರ ಸಂಬಂಧದ ಬಗ್ಗೆ ತನಗೆ ಇಬ್ಬರ ಸಾಕ್ಷ್ಯವನ್ನು ಒದಗಿಸಬೇಕೆಂದು ಹೇಳಿ ಜಾರಿಕೊಳ್ಳುತ್ತಾನೆ . ತಾನೇ ಒಬ್ಬ ಸಾಕ್ಷಿ ಎಂದು   ಇನ್ನೊಂದು ಸಕ್ಚಿಯನ್ನು ಹಿಡಿಯಲು ಅಲಿ ಉದ್ಯುಕ್ತನದಾಗ ಅವನಿಗೆ ತಟ್ಟನೆ ಹಾಶಿಮ್ ಗೋಚರಿಸುತ್ತಾನೆ . ಹಾಶಿಮ್ ಅವಿದ್ಯಾವಂತ , ಸರಳಜೀವಿ ಮತ್ತು ಭಯಗ್ರಸ್ಥ. ಅಲಿ ತನ್ನ ಯೋಜನೆಯಂತೆ ಮುಲ್ಲನ ಜೊತೆಗೂಡಿ ಹಾಶಿಮ್‍ನ ಗ್ಯಾರೇಜಿಗೆ ಹೋಗಿ , ಹಾಶಿಮ್ ನನ್ನು ಬೆದರಿಸಿ ಅವನ ಮಗನಾದ ಮೊಹಿಸಿನ್ ನನ್ನು ಬೀದಿ ಪಾಲು ಮಾಡುವುದಾಗಿ ಬೆದರಿಸಿ ಅವನಿಂದ ಅಸ್ಪಷ್ಟವಾಗಿ ಸುರಯ್ಯಳ ಬಗ್ಗೆ ಬಾಯಿಮಾತಿನ ಹೇಳಿಕೆಯನ್ನು ಪಡೆಯುತಾನೆ . ನಂತರ ಕೂಡಲೇ ತನ್ನ ಮನೆಗೆ ಬಂದು ಸುರಯ್ಯಾಳ ತಲೆಕೂದಲನ್ನು ಹಿಡಿದೆಳೆದು ತಂದು ಆಕೆಯನ್ನು ಅನಾಮತ್ತಾಗಿ ಕುಕ್ಕಿ ಆಕೆಯ ಅಕ್ರಮ ಸಂಬಂಧವನ್ನು ಜಗಜಾಹೀರುಗೊಳಿಸುತ್ತಾನೆ . ಝೊಹ್ರಾ ಹೌಹಾರಿ ಸುರಯ್ಯಳನ್ನ ತನ್ನ ಮನೆಗೆ ಕರೆತರುತ್ತಾಳೆ ಮತ್ತು ಮೇಯರ್ ಇಬ್ರಾಹಿಮ್‍ನನ್ನು ಕಾಣುತ್ತಾಳೆ . ಇಬ್ರಾಹಿಮ್ ಆಕೆಯ ಬಾಲ್ಯ ಸ್ನೇಹಿತಮತ್ತು ಹಿಂದೊಮ್ಮೆ ಆಕೆಯನ್ನು ಮದುವೆಯಾಗುವ ಇಚ್ಛೆಯನ್ನು ಮುಂದಿಟ್ಟಿದ್ದವ. ಹೀಗಾಗಿ , ಝೊಹ್ರಾ ವಿಶೇಷ ನಿರೀಕ್ಷೆಯೊಂದಿಗೆ ಆತನನ್ನು ಕಾಣಲು ಹೋಗುತ್ತಾಳೆ . ಆದರೆ ಈ ವೇಳೆಗಾಗಲೇ ವಯೋವೃದ್ಧನಾದ ಸುರಯ್ಯಾನ ತಂದೆಯನ್ನು ಕರೆಸಿದ್ದ ಪಟ್ಟಣದ ಮುಖ್ಯಸ್ಥರು ಆಕೆಯ ಬಗ್ಗೆ  ಶೀಘ್ರ ತೀರ್ಮಾನಕ್ಕೆ ಬಂದಿರುತ್ತಾರೆ .   
ಸುರಯ್ಯಳ ಬಳಿಗೆ ಬಂದ ಮೇಯರ್ ಇಬ್ರಾಹಿಮ್ ಕೇಳುತ್ತಾನೆ “ನಿನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸಬಲ್ಲೆಯಾ ?” ಅವಳು ದಿಗ್ಭ್ರಾಂತಳಾಗಿ ಅವನನ್ನೇ ಕೇಳುತ್ತಾಳೆ , “ ಹೇಗೆ . . .ಹೇಗೆ ಸಾಬೀತು ಪಡಿಸಲಿ ನನ್ನ ನಿರಪರಾಧಿತ್ವವನ್ನು ” ಅಲ್ಲಿಗೆ ಅವರಿಗೆಲ್ಲಾ ಖಚಿತವಾಗುತ್ತದೆ ಆಕೆ ಅಪರಾಧಿ ಎಂದು . ಕೂಡಲೇ ಅವಳ ಮರಣದಂಡನೆಗೆ ಎಲ್ಲಾ ವ್ಯವಸ್ಥೆಯಾಗತೊಡಗುತ್ತದೆ. ಪಟ್ಟಣದ ಪ್ರಮುಖ ಸ್ಥಳದಲ್ಲಿ ಸೊಂಟದೆತ್ತರ ಗುಳಿಯನ್ನು ತೋಡಲಾಗುತ್ತದೆ. ಪಟ್ಟಣದ ಮಕ್ಕಳೆಲ್ಲಾ ಸುತ್ತಾಡಿ ಕಲ್ಲುಗಳನ್ನು ಆಯಲಾರಂಭಿಸುತ್ತಾರೆ .ಮಕ್ಕಳು ಕಲ್ಲನ್ನು ಕಲ್ಲಿನಿಂದ ಕುಟ್ಟುವ ಸದ್ದು ಇಷ್ಟೊಂದು ಭೀಭತ್ಸವಾಗಿರಬಲ್ಲದೆಂದು ಮೊದಲ ಬಾರಿ ನನಗರಿವಾಯಿತು.
ಸುರಯ್ಯಾ ತನ್ನ ಕೊರಳಿನಲ್ಲಿದ್ದ ಸರವನ್ನು ಕಿರಿಯ ಮಗಳಿಗೂ ಮತ್ತು ತನ್ನ ಬೆರಳಿನುಂಗುರವನ್ನು ಹಿರಿಯ ಮಗಳಿಗೂ ತೊಡಿಸಿ, ತೀವ್ರ ಭವಾವೇಶಕ್ಕೊಳಗಾಗಿ, ತನ್ನ ಮಕ್ಕಳನ್ನು ಝೊಹ್ರಾಳ ವಶಕ್ಕೆ ಒಪ್ಪಿಸುತ್ತಾಳೆ .ಮತ್ತು ಅವರ ತಾಯಿ ಅವರನ್ನು ಅವಮಾನಿತರನ್ನಾಗಿ ಮಾಡುವ ಯಾವ ಹೇಯ ಕೃತ್ಯವನ್ನೂ ಮಾಡಲಿಲ್ಲವೆಂಬುದನ್ನು ಅವರಿಗೆ ಹೇಳುವಂತೆ ತಿಳಿಸುತ್ತಾಳೆ  .ಝೊಹ್ರಾ ಅವಳ ತಲೆಕೂದಲನ್ನು ಬಾಚಿ ಒಪ್ಪ ಮಾಡುತ್ತ, ಆರ್ತಳಾಗಿ ಕೇಳುತ್ತಾಳೆ ,“ ನಿನಗೆ ಸಾಯಲು ಭಯವಾಗುತ್ತದೆಯೇ ? ”
ಅದಕ್ಕುತ್ತರವಾಗಿ ಆಕೆ ಹೆಲುತ್ತಾಲೆ “ಇಲ್ಲ ಸಾಯುವ ಭಯಕ್ಕಿಂತ ನನಗೆ ಕಲ್ಲಿನ ಭಯ . . . ಯಾತನೆಯ ಭಯ  ”  ಎನ್ನುತ್ತಾಳೆ .
    ಆ ಮನೆಯ ಬಾಗಿಲನ್ನು ತಟ್ಟಿ ಆಕೆಯನ್ನು ಮೆರವಣಿಗೆಯಲ್ಲಿ  ಕರೆದೊಯ್ಯುತ್ತಾರೆ . ಆಕೆಯ ವಧಾಸ್ಥಾನಕ್ಕೆ ಬಂದಾಗ , ಆಕೆ ತನ್ನ ದೇಹವನ್ನು ಸುತ್ತಿದ್ದ ಚಾದರವನ್ನು ತೆಗೆಯುವಂತೆ ಮೇಯರ್ ಆದೇಶಮಾಡುತ್ತಾನೆ. ಝೊಹ್ರಾ ಚಾದರವನ್ನು ತೆಗೆಯುತ್ತಾಳೆ. ಸುರಯ್ಯಾ ನಗ್ನಳಾಗಿ ನಿಂತವಳಂತೆ ಲಜ್ಜಿತಳಾಗುತ್ತಾಳೆ. ಬರಿತಲೆಯ ಆ ಹೆಣ್ಣಿನ ಕೈಗಳನ್ನು ಹಿಂದಕ್ಕೆ ಕಟ್ಟಿ, ಆಕೆಯನ್ನು ಕುಳಿಯೊಳಗೆ ಇಳಿಸಲಾಗುತ್ತದೆ. ಅವಳ ಸೊಂಟದವರೆಗೂ ಮಣ್ಣನ್ನು ತುಂಬಿಸಿ ಅವಳು ಅಲುಗಾಡದಂತೆ ನಿಲ್ಲಿಸಲಾಗುತ್ತದೆ. ಮೊದಲಿಗೆ ಆಕೆಯ ತಂದೆಯ ಕೈಯಲ್ಲಿ ಕಲ್ಲುಗಳನ್ನು ನೀಡುತ್ತಾರೆ. ಆ ತಂದೆ ಬೀಸಿ ಹೊಡೆದ ಕಲ್ಲುಗಳೊಂದೂ ಕೂಡ ಅವಳಿಗೆ ತಗಲುವುದಿಲ್ಲ . ಆನಂತರ ಅವಳ ಗಂಡನ ಸರದಿ . ಅಲಿ ತನ್ನ ಕೈಗೆ ಕಲ್ಲನ್ನು ತೆಗುದುಕೊಂಡು ಎಷ್ಟು ತೀವ್ರ ದ್ವೇಷದಿಂದ ಹೊಡೆಯುತ್ತಾನೆಂದರೆ ಗುರಿಇಟ್ಟಂತೆ ಅವಳ ಹಣೆಗೆ ತಗಲುತ್ತದೆ. ಒಂದು ಹನಿ ಜಿನುಗಿದಂತೆ ಕಂಡು ಬಂದ ರಕ್ತ ಧಾರಾಕಾರವಾಗಿ ಸುರಿಯಲಾರಂಭಿಸುತ್ತದೆ . ಅದುವರೆವಿಗೂ ತಡೆ ಹಿಡಿದಿದ್ದ ಅವಳ ಸಂಯಮದ ಕಟ್ಟೆಒಡೆಯುತ್ತದೆ . ಅವಳ ರೋದನವನ್ನು ಕಲ್ಲುಗಳ ಸದ್ದು ಮುಳುಗಿಸಿಬಿಡುತ್ತದೆ . ಒಂದು ಬೀದಿ ನಾಯಿಯನ್ನು ಕೂಡ ಅಷ್ಟೊಂದು ಕ್ರೌರ್ಯದಿಂದ ಕೊಲೆ ಮಾಡುವುದಿಲ್ಲ .ಆದರೆ , ಒಬ್ಬ ಮಗಳು , ಒಬ್ಬ ಪತ್ನಿ, ಒಬ್ಬ ತಾಯಿಯನ್ನು ಆಕೆಯ ತಂದೆ , ಪತಿ ಹಾಗೂ ಮಕ್ಕಳೇ ನಿರ್ದಯವಾಗಿ ಕಲ್ಲು ಬೀರಿ ಕೊಲೆ ಮಾಡುವ ಆ ದೃಶ್ಯವನ್ನು ನಾನು ನೋಡದಿದ್ದಲ್ಲಿ ಎಷ್ಟೋ ಚೆನ್ನಾಗಿತ್ತು .
    ಕೊಲೆಯಾದ ಕೆಲವೇ ದಿನಗಳ ನಂತರ  ಹಾಶಿಮ್ ಅವಳು ನಿರಪರಾಧಿ ಎಂಬ ವಿಷಯವನ್ನು ಮತ್ತೆ ಮತ್ತೆ ಹೇಳುತ್ತಾ ಹೋಗುತ್ತಾನೆ.
        ಝೊಹ್ರಾ ಳ ಮನೆಯಲ್ಲಿ ಪತ್ರಕರ್ತನಿದ್ದಾನೆ ಎಮಬ ವಿಷಯವು ಮುಲ್ಲಾನಿಗೆ ತಿಳಿಯುತ್ತದೆ. ಅವರೆಲ್ಲಾ ಒಟ್ಟಿಗೆ ಬಂದು  ಅ ಪತ್ರಕರ್ತನನ್ನು ಥಳಿಸಿ .ಅವನ ಟೇಪ್ ರೆಕಾರ್ಡರ್‍ನಲ್ಲಿದ್ದ ಕ್ಯಾಸೆಟ್‍ಗಳನ್ನು ಕಿತ್ತು ಹಾಕಿ ಓಡಿಸುತ್ತಾರೆ . ಅವನು ಪಟ್ಟಣವನ್ನು ದಾಟುವಷ್ಟರಲ್ಲಿ , ಝೊಹ್ರಾ  ಬೀದಿಯ ಕೊನೆಯಲ್ಲಿ ಹೋಗಿ ನಿಂತಿದ್ದು , ತಾನು ಬಚ್ಚಿಟ್ಟುಕೊಂಡಿದ್ದ ಕ್ಯಾಸೆಟನ್ನು ಅವನಿಗೆ ನೀಡುತ್ತಾಳೆ . ಅವರೆಲ್ಲರೂ ಸೇರಿ ಅವಳನ್ನು “ಹುಚ್ಚಿ”ಎನ್ನುತ್ತಾರೆ. ಆದರೆ ಅವಳು  ಸುರಯ್ಯಾಳ ಇಬ್ಬರು ಹೆಣ್ಣುಮಕ್ಕಳ ಕೈಹಿಡಿದುಕೊಂಡು ಆತ್ಮವಿಶ್ವಾಸದ ಹೆಜ್ಜೆಗಳನ್ನಿಡುತ್ತ,ಮನೆಯತ್ತ ಮರಳುತ್ತಾಳೆ . ಪತ್ರಕರ್ತನಾದ ಫ್ರೈದೂನ್ ಸಾಹೆಬ್ ಜಾಮ್  ಸುರಯ್ಯಾಳ ವೃತ್ತಾಂತವನ್ನು ಅಚ್ಚು ಹಾಕಿಸಿದ್ದು , ಆ ನಂತರ ಚಲನಚಿತ್ರವಾಗಿದೆ.  ಅಮಾನುಷವಾಗಿ ಹತ್ಯೆಗೈಯಲಾದ ನಿರಪರಾಧಿ   ಸುರಯ್ಯಾ ಪ್ರತಿಕ್ಷನಕ್ಕೂ ತನ್ನ ಒಡಲ ಬೇಗೆಯನ್ನು ಸಹೃದಯರ ಎದುರಿಗೆ ತೆರೆದಿಡುತ್ತಿದ್ದಾಳೆ.
    ನವಾಬ್‍ರವರ ಪ್ರಶ್ನೆಗೆ ನಾನು ಯಾವ ಉತ್ತರವನ್ನೂ ನೀಡುತ್ತಿಲ್ಲ . ಅಥವ ಅತ್ಯಾಚಾರದ ಆರೋಪಿ ಯುವಕ ನಿರ್ದೋಷಿ ಎಂಬ ತೀರ್ಮಾನವನ್ನು ಕೂಡ ನೀಡುತ್ತಿಲ್ಲ. ಸುರಯ್ಯಾಳ ಬದುಕಿನ ಹಿನ್ನೆಲೆಯಲ್ಲಿ ಪ್ರಸ್ತುತ ನಮ್ಮ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮ್ಮಲ್ಲಿಯೂ ಅಧಿಕಾರ ಪುರೋಹಿತಶಾಹಿ ಮತ್ತು ಕುಟಿಲತೆಯ ಕೌಟುಂಬಿಕ ವ್ಯವಸ್ಥೆಯ ಸಂಚನ್ನು ಕಾಣುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲ ಎಲ್ಲೆಗಳನ್ನು ಮೀರಿದ ಖಾಪ್ ಪಂಚಾಯತಿಗಳ ಆದೇಶಗಳನ್ನು ಕಾಣುತ್ತಿದ್ದೇವೆ; ಈ ಆದೇಶದ ರ್ನಿಯ ಕೊಲೆಗಳನ್ನು ಪ್ರತಿ ದಿನ ಮಾಧ್ಯಮದಲ್ಲಿ ನೋಡುತ್ತಿದ್ದೇವೆ . ಜಾತಿ ಧರ್ಮ ದೇಶಗಳು ಮತ್ತು ಭೌಗೋಳಿಕ ಮಿತಿಯ ಸೀಮಾರೇಖೆಗಳನ್ನು ದಾಟಿದ ಈ ಭ್ರಾತ್ವತ್ವ ಪುರುಷ ಪ್ರಧಾನ ಮನಃಸ್ಥಿತಿ ಹೇಗೆ ಮೂಡಿ ಬಂದಿತು? ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಹೆಣ್ಣಿನ ಜೀವಕ್ಕೆ ಮಾನಕ್ಕೆ ರಕ್ಷಣೆ ಇಲ್ಲದಂತಹ ದುರವಸ್ಥೆ ಯಾಕೆ ಮೂಡಿದೆ ? ವಿಶ್ವದಲ್ಲಿ ಮಹಿಳಾ ಚಳುವಳಿಗಳು ವಿಸ್ತಾರವಾದಷ್ಟು ಕೂಡ ಪುರುಷಪ್ರಧಾನ ನೆಲೆಯ ಕ್ರೌರ್ಯದ ಬಾಹುಗಳು ಯಾಕೆ ವಿಶಾಲವಾಗುತ್ತಿವೆ?  ಮಹಿಳೆಯರ ಪರವಾಗಿ ಧ್ವನಿ ಎತ್ತಿದವರನ್ನು ಈ ಸಮಾಜ ಯಾಕೆ ಹುಚ್ಚಿ ಎಂದು ಲೇಬಲ್ ಅಂಟಿಸಿ ಅಪಮೌಲ್ಯಗೊಳಿಸಲು ಪ್ರಯತ್ನಿಸುತ್ತದೆ ? ಈ ಧ್ವನಿಗಳು ಯಾಕೆ ಬಹಿಷ್ಕಾರಕ್ಕೆ ಒಳಗಾಗುತ್ತವೆ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಾರಾರವರ ಬದುಕು ಮತ್ತು ಬರವಣಿಗೆಯ ಸೂಕ್ತ ವಿಮರ್ಶೆಯಾಗಬೇಕಿದೆ. ಮೇಲಿನ ಎಲ್ಲ ಪ್ರಶ್ನೆಗಳಿಗೆ ನವಾಬ್ ,ನಾನು ಮತ್ತು ನೀವು ಎಲ್ಲರೂ ಆತ್ಮವಿಮರ್ಶೆಯೊಂದಿಗೆ ಸೂಕ್ತ ಉತ್ತರವನ್ನು ಕೂಡ ಕಂಡುಕೊಳ್ಳಬೇಕಾಗಿದೆ.
      ಟಿಪ್ಪಣಿ : ಮೇಲಿನ ನನ್ನ ಲೇಖನಕ್ಕೆ ಈಗ ದಾಖಲಿಸುತ್ತಿರುವ ನನ್ನ ಆಲೋಚನೆಗಳು ಪ್ರಸ್ತುತವಾಗಿಯೋ ಇಲ್ಲವೋ ತಿಳಿಯದು. ಆದರೆ, ಸುರಯ್ಯಾಳ ಸಿನೆಮಾವನ್ನು ನೋಡುವಾಗ ನನಗೆ ಫಕ್ಕನೆ ನೆನಪಾದುದು ಸಾರಾ ಅಬುಬಕ್ಕರ್‍ರವರು. ಸಾರಾರವರು ಈ ಸಿನೆಮಾದ ಪತ್ರಕರ್ತನ ಪಾತ್ರವನ್ನೋ ಅಥವಾ ಝೊಹ್ರಳ ಪಾತ್ರವನ್ನೋ ಹೋಲುವರೆಂದು ನನ್ನ ಒಳಮನಸಿಗೆ ಅನಿಸಿತು. ನಮ್ಮ ಕೆಲವು ಲೇಖಕ ಮಿತ್ರರು ನನ್ನ ಕಿವಿಯಲ್ಲಿ ಆಗಾಗ ಉಸುರುವುದಿದೆ. “ಮೇಡಂ ಇಂತಹ ಲೇಖಕರು (ಹೆಸರು ಹೇಳುವುದಿಲ್ಲ) ಮೊನ್ನೆ ಸಾಹಿತ್ಯಿಕ ಕಾರ್ಯಕ್ರಮವೊಂದರಿಂದ ಹೊರಬಂದಾಗ, ಈ ಸಾರಾ ಮತ್ತು ಬಾನು ಏನೇನೋ  ಬರೆಯುತ್ತಾರೆ. ಅವರಿಗ್ಯಾಕೆ ಬೇಕು. . . .ಎಂದು ಹೇಳ್ತಿದ್ದರು.” ಅಂತ , ಒಬ್ಬರಲ್ಲ ಹಲವಾರು ಮಂದಿ ನನಗೆ ಫೀಡ್ ಬ್ಯಾಕ್ ಕೊಡುತ್ತಿದ್ದರೂ ನಾನು ನಕ್ಕು ಸುಮ್ಮನಾಗುತ್ತೇನೆ. ಮತ್ತು  ಇನ್ನೂ ಕೆಲವರು ನಕ್ಕು ಕೈ ಮುಗಿದು
“ ನಿಮ್ಮ ಚಂದ್ರಗಿರಿಯ ತೀರದಲ್ಲಿ. . . .ಚೆನ್ನಾಗಿದೆ” ಎಂದು ಹೇಳುವುದುಂಟು. ಈ ಹೊಗಳಿಕೆ ಮತ್ತು ತೆಗಳಿಕೆಗಳ ನಡುವೆ ಕೆಲವರು ಥೇಟ್ ಬಾಲಿವುಡ್ ಶೈಲಿಯಲ್ಲಿ ನನ್ನನ್ನು ಮತ್ತು ಸಾರಾರವರನ್ನು ಪರಸ್ಪರ ಪ್ರತಿಸ್ಪರ್ಧಿಗಳನ್ನಾಗಿ ಮಾಡಲು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಏಕೆಂದರೆ, ಸಾರಾರವರಿಗೆ ಈಗ ಎಪ್ಪತ್ನಾಲ್ಕು  ವರ್ಷ ವಯಸ್ಸು, ನನ್ನ ತಾಯಿಗೂ ಅವರಷ್ಟೇ ವಯಸ್ಸು. ನಾನು ನನ್ನ ತಾಯಿಗೆ ಹಿರಿಯ ಮಗಳು ನನಗೆ ಮತ್ತು ನನ್ನ ತಾಯಿಗೆ 14 ವರ್ಷಗಳ ಅಂತರ.  ಹೀಗಾಗಿ, ಸಾರಾರವರ ವ್ಯಕ್ತಿತ್ವ, ಬರವಣಿಗೆ, ಹೋರಾಟದ ಛಲ ಇವುಗಳನ್ನು  ಗಮನಿಸಿದಾಗ, ಅವರು ನನ್ನ ತಾಯಿಯ ಓರಗೆಯವರು ಎಂಬ ಅಭಿಮಾನ ಪೂರ್ವಕ ಗೌರವ ಮೂಡುತ್ತದೆಯೇ ಹೊರತು ಈಷ್ರ್ಯೆಯಲ್ಲ.  ಉನ್ನತ ವಿದ್ಯಾಭ್ಯಾಸದ ಅವಕಾಶ ನಿರಾಕರಣೆ ಮತ್ತು ಬದುಕಿನ ಸೀಮಿತ ಅನುಭವದ  ನಡುವೆ ಅವರು ಕಂಡ ಜಗತ್ತಿನ ಅನಾವರಣವನ್ನು ಸರಳವಾಗಿ ನಿರೂಪಿಸುತ್ತಾರೆ.  ಯಾವ ವಿರೋಧವನ್ನೂ ಲೆಕ್ಕಿಸದೆ, ಈವೊತ್ತಿಗೂ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾರಾರವರ ಸ್ಪಷ್ಟ ನಿಲುವುಗಳು ಮತ್ತು ಹೋರಾಟ  ಅವರ ಸಾಹಿತ್ಯದೊಂದಿಗೆ  ಸಾಮಾಜಿಕ ಸಂದೇಶವನ್ನೂ ನೀಡುತ್ತಿವೆ.


No comments:

Post a Comment