Sunday 20 July 2014

ಅಕ್ಷರ ಸಖಿ

          

      ಲೇಖನಿಯೊಂದಿಗಿನ  ಅವಳ ಪ್ರಣಯ
    ತೊರೆಯಿಸಿತವಳ ಇನಿಯನ
    ದೇಶ ಬಂಧು -ಬಳಗ ಕಳಚಿದವು
    ವಿಧವಾ ರಾತ್ರೆಯ ನಿಟ್ಟುಸಿರಿನೊಡನೆ

    ಕಾರಿರುಳ ಕತ್ತಲುದುರಿಸಿದ ಮಸಿಯನು
    ನೀರಿಲ್ಲದ ಮಾಗಿಯ ಮೋಡದೊಡನೆ ಬೆರೆಸಿ,
       ಕಲ್ಲು ಮುಳ್ಳಿನ ಹಾದಿಯ ಮೊನಚು  ಮೊನೆಯಲಿ
    ಹಾಡುತ್ತಾಳವಳು ಅನಾಮಧೇಯ ರಾಗಗಳನು

    ಎಲ್ಲರಂತೆ ದೋಣಿಯನು ದಡಕೆಳೆಯದೆ
    ಬಿರುಗಾಳಿಯೆದುರು ಬೆಳಗುವ ನೋವಿನ
    ಜ್ವಲಂತ ದೀಪ ! ಅವಳ ಪಾಲಿಗೆ ಸದಾ ಸಿದ್ಧ
    ಹೊಸ ಕುಣಿಕೆಯೊಡನೆ ಹಳೆಯ ಉರುಳು

    ಆಕಾಶದ ಶೋಕ ಅವಳೆದೆಯಲಿ
    ಅಪಮಾನಿತ ಪಂಜುಗಳು ಉರಿದುರಿದು
    ಸುಟ್ಟವು ಅವಳ ಸದ್ದಿಲ್ಲದ ಹೆಜ್ಜೆ ಗುರುತುಗಳ
    ಇದೆಂತಹ ಸಮರ ಕತ್ತಲ ಪ್ರೇತಗಳೊಡನೆ !
   
    ಬೂದಿ ಮುಚ್ಚಿದ ಕೆಂಡಗಳ ಜಾಲಂಧರದಲ್ಲಿಯೂ
     ಅವಳ ಬಿಚ್ಚುಕಣ್ಣೆವೆಗಳ ಇಣುಕು ನೋಟ
    ನವಿರೇಳುವ ಹಾರಾಟಕೆ ರೆಕ್ಕೆಗಳ ಬಡಿತ
    ಪಾದಾಘಾತಕೆ ಸಿಕ್ಕರೂ ಮಣಿಯದ ಪುಟ್ಟ ಗರಿಕೆ

    ಬೇಟೆಗಾರನೊಡನಿರು ಬೇಟೆನಾಯಿಯಾಗು
    ಬಿಲ್ಲುಬತ್ತಳಿಕೆಯಾಗು ಸದ್ದು -ಬಿಕ್ಕುಗಳಿಲ್ಲದೆ ಆತ್ಮದ
       ಕದವನಿಕ್ಕು ಎಂಬ ಕೆಂಗಣ್ಣಿನೆದುರು ಓಡುತ್ತಿರುವ
       ಜಿಂಕೆಯ ಕಣ್ಣೀರ ಹನಿಯಾಗುತ್ತಾಳವಳು

ಕುಂಟಬಿಲ್ಲೆಯ ಹೆಜ್ಜೆಯೊಡನೆ ಗಡಿಗಳ ಅಳಿಸುತಾಳೆ
 ಅವಕುಂಠನದೊಳಗಿನಿಂದಲೇ ಕಹಳೆಯನೂದಿ
ಅಡಿಪಾಯಗಳ ಕೆಡವುತಾಳೆ ನವ ಸಂಜಾತ
ಬೆರಗಿನೊಂದಿಗೆ ಹಸಿ ಓಣಿಯಲಿ ಬಿಸಿ ಪಾದಗಳನಿಕ್ಕಿ
ಅವಳು ಜೇಡವನ್ನು ಜೇಡವೆನ್ನುತ್ತಾಳೆ

No comments:

Post a Comment