Monday 21 July 2014

ರಕ್ತದೋಕುಳಿಯ ಪಾಲುದಾರರು




‘ಹೆಸರೇನು ?’ಎಂದು ಕೇಳಿದನವ
‘ಜಲಜಾ ’ ಎಂದಳು
‘ಜಲ್ ಹೀ ತೋ ಗಯಾ’ಎಂದವನ
ಭಾಷೆ ಅರ್ಥವಾಗಲಿಲ್ಲ .ಭಾವ
 ಅರಿವಾದಲ್ಲಿ ಇನ್ಯಾವ ತೊಡಕು   

ಆಮೇಲೆ . . . .
ಬಿದಿಗೆ ಚಂದ್ರಮ ಕಾವೇರಿಸಿದ
ಮಾಮ ಎಂದರೆ ಸಾಕು ಆದ್ರ್ರವಾಗುವ
ಅವನಿಗೆ ಭೂಗೋಳ , ಕಂದು ,ಬಿಳಿ
ಕೇಸರಿ ಹಸಿರು ಮೇಲು ಕೀಳಿನ ಮೈಲಿಗೆಯಿಲ್ಲ

ಆಶ್ಚರ್ಯ. . ..
ಬೆದೆಯೇರಿದ ಆನೆಯೊಂದು ಸಂಗಾತಿಯ
ಹುಡುಕುತಾ, ಕಾಡಿನಿಂದ ನಾಡಿನ
ಬಾಗಿಲು ಬಡಿಯಿತಂತೆ ! ಅದೀಗ
ನಾಗರಿಕ ಸರಪಳಿಯ ಬಂದಿ

ಅವರಿಬ್ಬರೂ . .. .
ನಾಡಿನಿಂದ ಕಾಡಿಗೆ ಅಡಿ ಇಟ್ಟರು
ಅಲ್ಲಿಯಂತೂ ನಿರಂತರ ವರ್ಷಾಧಾರೆ
ಬೀಜಾಂಕುರವಾಗದೇ . . .ಅಲ್ಲಿ
ಬೇಲಿಗಳು ಬೇರೆ ಇಲ್ಲಾ ಸಂಕರವಾಗದೇ
ಮತ್ತೆ ನಾಡಿಗಡಿ ಇಟ್ಟರು .

ಅಲ್ಲಿ. . ..
ನಾಡತೋಳಗಳು ಹಸಿದಿದ್ದವು
ತೆಳು ನಾಲಿಗೆಯ ಹೊರಚಾಚಿ
ಹೊಕ್ಕಳುಬಳ್ಳಿಯ ಹಸಿರಕ್ತದ
ವಾಸನೆ ಗಮಲು ಬರಿಸಿತ್ತು

ಅವು. . . .
ಹರಿದು ಹಂಚಿ ಹೋಗಿದ್ದರೂ ತಮ್ಮ
ತಮ್ಮ ಮೂತ್ರದ ಗೆರೆಯೊಳಗೆ ಗಡಿ
ಗುರುತಿಸಿ ಗುರ್ರೆನ್ನುತ್ತಿದ್ದವು
ಒಬ್ಬರನ್ನೊಬ್ಬರು ನೋಡಿ

ಅವರಲ್ಲಿ. . . .
ಪೂರ್ಣ ತೋಳಗಳೂ ಇದ್ದವು
ಅರೆ ತೋಳ ಅರೆ ಮನುಷ್ಯರ
ದೇಹದವರೂ ಕೆಲವರಿದ್ದರು
ಮೊದಲನೆಯವರಿಗೆ  ಚೂಪಾದ ನಖಗಳು
ಎರಡನೆಯವರ ಕೈಯಲ್ಲಿ ಕಲ್ಲುಗಳಿದ್ದವು

ಅವರಿಬ್ಬರೂ . . .
ತಮ್ಮ ಮಡಿಲ ಕುಡಿಯೊಡನೆ
ಸುತ್ತುವರೆದ ತೋಳ- ಅರೆತೋಳಗಳ
ರಕ್ತಸಿಕ್ತ ವಲಯದೊಳಗೆ
ಒಬ್ಬರ ಮೂಳೆಯೊಳಗೆ ಮತ್ತೊಬ್ಬರು
ಹುದುಗುವ ಅಜ್ಞಾತ ಭಯದಲಿ

ಅಲ್ಲಿ. . .
ಮತ್ತೊಂದು ಗುಂಪು . . . .
ತಮಾಶಾ ನೋಡುತ್ತಿದ್ದರು ನಮ್ಮನಿಮ್ಮಂತೆ
ನಿರುಪದ್ರವಿ “ಅಯ್ಯೋ ಪಾಪ ”ಅನ್ನುತ್ತಿದ್ದರು
ತುಂಬಾ ಅಮಾಯಕರಾದ ಮತ್ತು ತುಂಬಾ
ಕಾಳಜಿಯುಳ್ಳ ಅವರು  ಈ ಬಗ್ಗೆ ಸಭೆ
ನಡೆಸಿದ್ದರು .ಕತ್ತಲ ಕೋಣೆಗಳ ನಿರ್ನಾಮ
ಮಾಡುವುದರ ಬಗ್ಗೆ ಗುಡುಗಿದ್ದರು
ಅಕ್ಷರಗಳ ಗುತ್ತಿಗೆದಾರರು ಅವರು
ಸಂಗೀತ ನೃತ್ಯ,ಬಣ್ಣದ ಲೋಕದ    
ಸನ್ನದು ಅವರ ಬೆನ್ನಿಗೆ ಹಾರ ತುರಾಯಿ
ಅವರ ಕೊರಳಿಗೆ. . . ಇವರು ನಮ್ಮ ನಿಮ್ಮಂತೆ

ತೋಳಗಳ ಮೂಗಿನಹೊಳ್ಳೆಗಳ ಬಿಸಿ
ಬೂದಿಯಲಿ ಅವರಿಬ್ಬರೂ ಮತ್ತು ಕುಡಿ
ಆವಿಯಾಗಬೇಕು

ಅಷ್ಟರಲ್ಲೇ . . . . .
ಏನೋ ಜರಗುತ್ತಿದೆ
ಅದಮ್ಯ ಬದಲಾವಣೆಯಾಗುತ್ತಿದೆ
ನಮ್ಮ ನಿಮ್ಮ  ರೋಮದುಂಬಿದ ಕೈಗಳಲಿ
ಬಾಗಿದ ನಖಗಳುಮೂಡುತ್ತಿವೆ ,
 ಜೊತೆಗೆ ಚೂಪಾದ ಕಲ್ಲುಗಳು
ಎಷ್ಟೊಂದು ತಡೆದರೂ ತೆಳು ನಾಲಿಗೆ
 ಹೊರಚಾಚುತಿದೆ ರಕ್ತದೋಕುಳಿಯ
 ಪಾಲುದಾರರು ನಾವು ಕೂಡಾ

ಅಯ್ಯೋ. . .
ಯಾಕೆ ಹೀಗಾಯಿತು ?
‘ಮೌನವೂ ಪಕ್ಷ ವಹಿಸಿದಂತೆ ’ಎಂಬ
ಅರಿವು ಇದ್ದೂ ನರ ಬೇಟೆಯಲ್ಲಿ
ಬೆಳಗು ಬೈಗಲ್ಲದ ಹೊತ್ತಿನಲ್ಲಿ   
ಬಂದಳಿಕೆಗಳಿಂದ ಆವೃತವಾದ
ಉನ್ಮತ್ತ ಬೇರಿನ ದಾಹಕೆ
ನೀರವ ಆಹುತಿಗಳು



No comments:

Post a Comment