Monday 28 July 2014

ಮಾತಿಗೆ ಮಾತೆಂದು


                
 ಮಾತು ಆರಂಭವಾದುದು . . . . .
ಚಿಬ್ಬಲು ಬಡಿದಾಗ ಅವರ ಕಣ್ಣಿಗೆ
ಬೆಣ್ಣೆ ನನಗೆ ಸುಣ್ಣ ಬಳಿದಾಗ
ಪಾದ ಬಿಗಿದು ಸುಂದರಿಯೆಂದಾಗ
ಹೊಸಿಲೊಳಗಿನ ರಂಗೋಲಿಯಾದಾಗ

ಮಾತು ಮುಂದುವರೆದುದು . . . .
ಹದಿನೆಂಟು ಮೊಳ ಅಳೆದಾಗ ಕಪ್ಪು
ಬಿಳಿ ತರಹೆವಾರಿ ತೆರೆಗಳು ಬದುಕಾದಾಗ
ನಾಯಿ ಮುಟ್ಟಿದ ಮಡಕೆಯೆಂದಾಗ
ಸಿರಿ ಮುಡಿಯ ಸೌಭಾಗ್ಯವ ಸೂರೆಗೈದಾಗ

ಮಾತು ಶೂಲವಾದುದು . . . .
ಕಣ್ಣಿದ್ದೂ ಕುರುಡಿಯಾಗಿ ಕಾಲಿದ್ದೂ
ಹೆಳವಿಯಾಗಿ,ರೆಕ್ಕೆಗಳ ತರಿದೊಗೆದು
ಮಂದಾಸನವ ತೋರಿ ಶಯ್ಯಾಗಾರದ
ಕಾಲೊರೆಸುವಿನಂತೆ ಬಳಸಿದಾಗ

ಮಾತು ವಿಷವಾದುದು . . . .
ಬಸಿರಲಿ ಮಿಡಿದವ ಪಾದದಲಿ
ನನ್ನ ತಲೆಯ ಮೆಟ್ಟಿದಾಗ
ಅವರ ಅಮಲಿಗೆ ಜೀವಂತ ಎಳೆ
ಹರೆಯ ನಿರ್ಜೀವ ಚಿತೆಯೇರಿದಾಗ

ಮಾತು ಮುಗಿಸದೆ . .. . .
ಮಾತಿಗೆ  ಮಾತೆಂದು ಕೆಂಗಣ ್ಣಬೀರಿ
ಅವಶೇಷವಾಗಿಸಬೇಡಿ ನನ್ನನು ಮಣ್ಣಿನಡಿ
ಏಕೆಂದರೆ  ಮಣ್ಣು ಸೃಷ್ಟಿ
ನಾನೂ ಕೂಡಾ !


No comments:

Post a Comment