Monday 28 July 2014

    ಅವರವರ ಆಕಾಶ

ನನ್ನ ಆಗಸವೆಂದರೆ
ಅದೂ ಇದೂ
ಮೋಡ ಮತ್ತಿನ್ನೊಂದು
ತಾರೆಗಳು ಕೈ ಕುಲುಕಿದ್ದು
ಅಷ್ಟೇ ಅಲ್ಲ

ರವಿಯ ಅಪಾಪೋಲಿತನದಿಂದ
ಪೇಲವವಾದಳು ಇಳೆ
ಅವ ಕೂಡಾ ನಾಚಿ ಕೆಂಪಾಗಿ
ಸರ್ರೆಂದು ಜಾರಿದಾಗ
ನನ್ನ ಮೋರೆಯೂ ರಾಗ ರಂಜಿತ

ಬಿಳಿಯರಳೆ ಗರ್ಭ ಧರಿಸಿ
ಮಂದ ಗಮನೆಯಾಗಿ
ಪ್ರಸವವೆಂದು ಭೋರಿಟ್ಟಾಗ
ವರ್ಷಧಾರೆ ಸಹ್ಯಾದ್ರಿಯ ಸೆರಗಿಗೆ
ಹನಿ ತಂಪು ಎನ್ನ ತನುವಿಗೆ

ನಭದ ವಿಸ್ತಾರಕೆ ಅಂಕಿತವೋ
ಅಗಸದ ಗಲ್ಲಕೆ ದೃಷ್ಟಿ ಬೊಟ್ಟೋ
ರಚ್ಚೆ ಹಿಡಿದ ಕಂದನ ಕೈಯಲಿ
ನಿಹಾರಿಕೆಯ ಆಟಿಗೆಯೋ

ಯಾವ ಭಾವದ ವ್ಯಾಪ್ತಿ
ಯಾರ ನಿಯೋಜನೆಯ
ಆಣತಿ ,ನಿರಂತರ ಅಲೆಗಳಿಗೆ
ನಿಯಮಿತ ಕಕ್ಷೆ

ಬಣ್ಣವೆರಚಿ ಪೊರಕೆ ಬಾಲ
ತೋರಿ ಹೊದಿಸಬಹುದೇ
ಮನದ ತುಂಬಾ ಹೊನ್ನಿನ
ಚಿತ್ತಾರಗಳ ಕೌದಿಯ

No comments:

Post a Comment