Tuesday 29 July 2014

ಕತ್ತಲೆಯ ಪ್ರೇತಗಳ ಸದ್ದಿಲ್ಲದ ಹೆಜ್ಜೆಗಳು

   
  (2013ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ )                   
      ಪುರುಷ ಪ್ರಧಾನ ಸಮಾಜದಲ್ಲಿ ಅತ್ಯಾಚಾರವೆಂಬುದು ಪುರುಷನ ನಿಯಂತ್ರಿಸಲಾಗದ ಕಾಮದ ಅಭಿವ್ಯಕ್ತಿಯ ಬಿಡಿ ಘಟನೆಯಾಗಿ ಉಳಿದಿಲ್ಲ. ಬದಲಿಗೆ ಪುರುಷನ ಅಧಿಕಾರದ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ. ಮಹಿಳೆಯನ್ನು ತಹಬಂದಿಗೆ ತರಲು, ಪ್ರಶ್ನಿಸಲು, ಮಹಿಳೆಯ ಬಾಯಿ ಮುಚ್ಚಿಸಲು, ಸಾಮಾಜಿಕ ಪರಿಧಿಯಿಂದ ಭಿನ್ನವಾದ ಮೌಲ್ಯಗಳನ್ನು ಪ್ರತಿಪಾದಿಸುವ ಮಹಿಳೆಯನ್ನು ಶಿಕ್ಷಿಸಲು ಯಾವುದೇ ಒಂದು ಕುಟುಂಬದ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು-ಅತ್ಯಾಚಾರವನ್ನು ವೈಯಕ್ತಿಕ ಹಾಗೂ ಸಾಮೂಹಿಕ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ.

      ಹೀಗೆ.... ಅತ್ಯಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುವ ಅವಕಾಶ ಆಗ ಇರಲಿಲ್ಲ. ಯಾವಾಗ ಅನ್ನುತ್ತೀರೋ.... ಈಗ್ಯೆ 5 ವರ್ಷದ ಹಿಂದೆ ಕೂಡಾ ಅದರ ಬಗ್ಗೆ ಮಾತನಾಡುವುದು ತೀರಾ ಅಸಭ್ಯ ಎನ್ನುವ ಮನಃಸ್ಥಿತಿ ಮತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಇನ್ನು ಭವಿಷ್ಯತ್ತಿನ  ಬದುಕೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಆಕೆ ಕಳಂಕಿತಳು ಎಂಬ ಭಾವ ಕೂಡಾ ಪ್ರಧಾನವಾಗಿತ್ತು. ಆಕೆ ಕೂಡಾ ತನ್ನದಲ್ಲದ ತಪ್ಪಿಗೆ ಖಿನ್ನಳಾಗಿ, ಸಾಮಾಜಿಕವಾಗಿ ಪರಿತ್ಯಕ್ತೆಯಾಗಿದ್ದು ನರಳಬೇಕಾದ ಹೀನ ಪರಿಸ್ಥಿತಿ ಇತ್ತು. ಹೆಣ್ಣಿನ ಶೀಲ ಮತ್ತು ಪಾವಿತ್ರ್ಯದ ಗಡಿಗಳನ್ನು ಮಾತ್ರ ನಿರ್ಧರಿಸಿ, ಪುರುಷನಿಗೆ ಪೂರ್ಣ ರಿಯಾಯಿತಿಯನ್ನು ನೀಡಿರುವ ಸಮಾಜವು ತನ್ನ ಸಿದ್ಧಾಂತದ ಪ್ರತಿಪಾದನೆಗಾಗಿ ಮತ್ತು ಅದಕ್ಕೆ ಪುಷ್ಟಿಯನ್ನೀಯಲು ಅತ್ಯಾಚಾರಕ್ಕೊಳಗಾದ ಮಹಿಳೆಯ ‘ಬಲಿ’ಯನ್ನು ಸ್ವಾಗತಿಸುತ್ತದೆ. ಅದರಲ್ಲಿ ಆಕೆಯ ಯಾವುದೇ ತಪ್ಪಿಲ್ಲದಿದ್ದರೂ ಆಕೆಗೆ ಆತ್ಮಹತ್ಯೆಯೊಂದೇ ಬಿಡುಗಡೆ ಎಂದು ಸಮಾಜವು ಅಲಿಖಿತ ಶಾಸನವನ್ನು ಮಾಡಿದೆ. ಹೀಗಾಗಿ ಅತ್ಯಾಚಾರಕ್ಕೊಳಗಾದವಳ ಸಾವಿನ ಬಗ್ಗೆ ಸಮಾಜವು ಸಹಾನುಭೂತಿ ಪರವಾಗಿದೆ ಹೊರತು ಬದುಕುಳಿದವಳ ಬಗ್ಗೆಯಲ್ಲ. ಈ ರೀತಿಯ ಧೃಡತೆಯ ಗಟ್ಟಿಕಾಳುಗಳು ಸಮಾಜದ ಅಹಮಿಕೆಗೆ ಸವಾಲೊಡ್ಡುತ್ತವೆ.

     ಆಗ ಅತ್ಯಾಚಾರಗಳು ನಡೆಯುತ್ತಿರಲಿಲ್ಲವೇ? ಖಂಡಿತಾ ನಡೆಯುತ್ತಿದ್ದವು. ಹೆಚ್ಚು ಪ್ರಚಾರಕ್ಕೆ ಬರುತ್ತಿರಲಿಲ್ಲ. ವರದಿಯಾದ ಪ್ರಕರಣಗಳಿಗೆ ಸಿಕ್ಕ ಪ್ರಚಾರವೂ ಕೂಡ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿತ್ತು. ಇಡೀ ಪ್ರಕರಣವನ್ನು ಪೋಲೀಸಿನವರ ಕಣ್ತಪ್ಪಿಸಿ, ಗುಸುಗುಸು ಹಂತದಲ್ಲಿಯೇ ತೆರೆ-ಮರೆಯ ತೀರ್ಮಾನಗಳ ಮುಖಾಂತರ ಅಂತ್ಯ ಕಾಣಿಸುವ ವ್ಯವಸ್ಥೆ ಚಾಲ್ತಿಯಲ್ಲಿತ್ತು. ಏನೋ ಒಂದಿಷ್ಟು ಪರಿಹಾರವನ್ನು ನೀಡಿ ಆಕೆಯ ಮೇಲೆ ನಡೆದ ಅತ್ಯಾಚಾರಕ್ಕೆ ಆಕೆಯೇ ಜವಾಬುದಾರಳೆಂದು ಸಾಧಿಸುತ್ತಿದ್ದರು. ಆಕೆ ಯಾವಾಗಲೂ ತನ್ನ ಮನೆಯ ಬಳಿ ನಿಲ್ಲುತ್ತಿದ್ದಳು;
ಅಥವಾ ಕಿಟಕಿಯ ಬಳಿಯೇ ನಿಲ್ಲುತ್ತಿದ್ದಳು; ಯಾವಾಗಲೂ ನಗುತ್ತಾ ಇರುತ್ತಿದ್ದಳು; ಎಂದು ಅವಳ ಮೇಲೆ  ಅತ್ಯಾಚಾರದ ಜವಾಬುದಾರಿಯನ್ನು ಹೊರಿಸಲು ನೆಪವನ್ನು ಹುಡುಕುತ್ತಿದ್ದರು. ಇನ್ನು ಬಟ್ಟೆಯಂತೂ ಬಿಡಿ! ಪ್ರಚೋದನಕಾರಿ... ಬಟ್ಟೆಗಳ ಬಗ್ಗೆ ನಮ್ಮ ದೇಶದ ಪೋಲೀಸು ಅಧಿಕಾರಿಗಳೂ, ಮಠಾಧೀಶÀ ಅಥವಾ ಮಠಾಧೀಶೆಯರ... ಹೇಳಿಕೆಗಳಿಗೆ ಯಾವುದೇ ತರ್ಕವಾಗಲೀ, ಅಂತ್ಯವಾಗಲೀ ಇಲ್ಲವೇ ಇಲ್ಲ. ಕೊನೆಗೆ, ಮೋಹನ್ ಭಾಗವತರಂತೆ, ಆಕೆ ಮನೆಯೊಳಗೇ ಇರಬೇಕೆಂಬ ಆದೇಶ ಅಪ್ಪಣೆ ಮಾಡಿ “ರಿಚಿiಟiಟಿg ಣhe viಛಿಣim” ಸಿದ್ಧಾಂತವನ್ನು ಅಳವಡಿಸುತ್ತಿದ್ದರು.
      ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದ ಅಂತಹದೊಂದು ಗುಪ್ತಸಭೆ ನಡೆಯುತ್ತಿತ್ತು. ತಂದೆಯಾದವನೇ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಘಟನೆ. ಅವನ ಮುಖದ ಮೇಲೆ ಭಂಡತನದ ಕುತ್ಸಿತಭಾವ, ಒಂದಿನಿತೂ ಆತನಿಗೆ ಕ್ಲೇಷವಿಲ್ಲ. ಆತನ ಹೆಂಡತಿಗೂ ಆತಂಕ. ಹೇಗಾದರೂ ಈ ವಿಷಯವು ತೀರ್ಮಾನವಾಗಿ, ತನ್ನ ಸಂಸಾರ ನೇರವಾದರೆ ಸಾಕೆಂದು! ಮಗಳ ಜೀವನ... ಅಯ್ಯೋ! ಏನೋ ಒಂದಾಗುತ್ತೆ. ಪಂಚಾಯಿತಸ್ತರು ಮೃದು ಬೆದರಿಕೆಯ ಧೋರಣೆಯನ್ನು ಅನುಸರಿಸುತ್ತಿದ್ದರು. “ನೋಡು! ಆ ಮಗುವಿನ ವಿದ್ಯೆಗೆ ಮತ್ತು ಬದುಕಿಗೆ ಏನೋ ಒಂದು ವ್ಯವಸ್ಥೆ ಮಾಡು.... ಇಲ್ಲವಾದರೆ, ನಾವು ಪೋಲೀಸ್ ಕಂಪ್ಲೇಂಟ್ ಕೊಡ್ತೀವಿ.” ಅವನು ಧಿಮಾಕಿನಿಂದಲೇ ಇದ್ದ. ಮಹಿಳಾ ಸಂಘಟನೆಯ ನಾವು ಮೂರು ನಾಲ್ಕು ಜನರಿದ್ದೆವು.
     ಅವನು ಯಾವುದೇ ಸೆಟಲ್‍ಮೆಂಟ್‍ಗೆ ಸಿದ್ಧನಿರಲಿಲ್ಲ. ಅಷ್ಟೇ ಅಲ್ಲ, ನಮ್ಮನ್ನು ಅತ್ಯಂತ ನಿಕೃಷ್ಟವಾಗಿ ನೋಡುತ್ತಾ, “ನಾನು ನೆಟ್ಟ ಮರದ ಫಲವನ್ನು ನಾನು ತಿಂದರೆ ನಿಮಗೇನು?” ಎಂದು ಪ್ರಶ್ನಿಸಿದ. ನನಗೆ ಮೈಯುರಿದು ಹೋಯಿತು. ನಾನು ಎದ್ದು ನಿಂತೆ, ಎಷ್ಟು ಸಾರಿ ಒದ್ದೆ... ಮುಖದ ಮೇಲೆ ಎಷ್ಟು ಸಾರಿ ಬಾರಿಸಿದೆ ನನಗೇ ಅರಿವಿಲ್ಲ. ನನ್ನ ಮೈಗೆ ದೆವ್ವ ಹೊಕ್ಕಂತಾಗಿತ್ತು. ನನಗಿಂತ ಅನೇಕ ಪಟ್ಟು ಬಲಾಢ್ಯನಾಗಿದ್ದ ಅವನು ನನ್ನ ಮೇಲೆ ಆಕ್ರಮಣ ಮಾಡಬಹುದೆಂಬ ಅಳುಕೂ ಕೂಡಾ ಆಗ ನನಗಿಲ್ಲವಾಯಿತು. ಆತನ ಬಗ್ಗೆ ಸಹಾನುಭೂತಿ ಇದ್ದ ಪಂಚಾಯಿತಸ್ತರು ಕೂಡಾ ಸ್ಥಬ್ಧರಾದರು. ಅವನಿಗೆ ಈ ಪರಿಯ ಉತ್ತರವನ್ನು ನೀಡಿದ್ದರ ಬಗ್ಗೆ ನನಗೆ ಇಂದಿಗೂ ಪಶ್ಚಾತ್ತಾಪವಿಲ್ಲ.
     ಈ ಪ್ರಕರಣಕ್ಕಿಂತಲೂ ಹಿಂದೆ ತಂದೆ ಕೂಡಾ ಅತ್ಯಾಚಾರಿಯಾಗಬಲ್ಲ ಎಂಬ ವಾಸ್ತವತೆಯು ನನ್ನೆದುರು ತೆರೆದುಕೊಂಡ ಘಟನೆಯೊಂದಿದೆ. ಆಕೆ ಬಾಲ್ಯದಲ್ಲಿ ವಿವಾಹವಾಗಿದ್ದು, 32 ವರ್ಷ ವಯಸ್ಸಿನ ಮಜಲನ್ನು ತಲುಪಿದಾಗ 6 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಅವಳ ಹಿರಿಯ ಮಗಳ ವಯಸ್ಸು 16 ವರ್ಷವಾಗಿತ್ತು. ಹಿರಿಯ ಮಗಳ ಮೇಲೆ ಕಣ್ಣಿಟ್ಟಿದ್ದ ಅವನು ಒಂದು ವರ್ಷದಿಂದ ಹೆಂಡತಿಯೊಡನೆ ನಿರಂತರವಾಗಿ ಜಗಳವಾಡುತ್ತಿದ್ದ. ಕೊನೆಗೆ ಪಂಚಾಯ್ತಿಯಲ್ಲಿ ವಿಷಯವನ್ನಿಟ್ಟ.  ‘ಹೆಂಡತಿಯೊಡನೆ ಬಾಳ್ವೆ ಮಾಡಲು ಸಾಧ್ಯವಿಲ್ಲ ಹಿರಿಮಗಳನ್ನು ನನ್ನ ಜೊತೆ ಕಳಿಸಿ ಕೊಡಿ, ನನಗೆ ಒಂದಿಷ್ಟು ಬೇಯಿಸಿ ಹಾಕಲಿ’ ಎಂದು ಪಂಚಾಯ್ತಿದಾರರೆದುರಿಗೆ ಗೋಗರೆದ. ನಮ್ಮ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಘಟನೆ.
     ಪಂಚಾಯ್ತಿದಾರರು ಉದಾರ ಮನಸ್ಸಿನಿಂದ ಅನುಮತಿಯನ್ನಿತ್ತರು. ಅವನು ಹಿರಿಮಗಳನ್ನು ಜೊತೆಯಲ್ಲಿ ಕರೆದುಕೊಂಡು ಕುಣಿಯುವ ಹೆಜ್ಜೆಯೊಡನೆ ಬೆಂಗಳೂರು ಸೇರಿದ. ಅಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು, ಅವಳೊಡನೆ ಸಂಸಾರ ನಡೆಸಿದ. ಗ್ರಾಮದಲ್ಲಿ ಅವನ ಹೆಂಡತಿ ಕಾಫಿ ತೋಟದಲ್ಲಿ ಕೂಲಿ ಮಾಡಿ ಮಕ್ಕಳನ್ನು ಸಾಕಿದಳು. ಆಗಾಗ್ಗೆ ಅವನು ತನ್ನ ಗ್ರಾಮಕ್ಕೆ ಬರುತ್ತಿದ್ದ. ಹೆಂಡತಿಯಾದವಳು ತನ್ನ ಹಿರಿಮಗಳ ಬಗ್ಗೆ ಪ್ರಶ್ನಿಸಿದಾಗ, ಯಾರ ಮನೆಯಲ್ಲಿಯೋ ಕೆಲಸಕ್ಕೆ ಬಿಟ್ಟಿದೀನಿ, ಅಣ್ಣನ ಮನೆಯಲ್ಲಿದ್ದಾಳೆ ಎಂದೆಲ್ಲಾ ಸಬೂಬು ಹೇಳುತ್ತಿದ್ದ.
     ಕರಾರುವಕ್ಕಾಗಿ 9 ತಿಂಗಳಿಗೆ ಅವನ ಮತ್ತು ಮಗಳ ಸಂಸಾರದ ಫಲವಾಗಿ ಒಂದು ಗಂಡು ಮಗುವು ಜನಿಸಿತು. ಅತ್ಯಂತ ಸುಂದರವಾದ ಮತ್ತು ಆರೋಗ್ಯವಂತವಾಗಿದ್ದ ಆ ಮಗುವಿನ ಎರಡೂ ಕಾಲುಗಳು ಒಳಭಾಗಕ್ಕೆ ತಿರುಚಿಕೊಂಡಿದ್ದವು. ಯಾವುದೋ ಕ್ಷಣದಲ್ಲಿ ಆ ಹುಡುಗಿ ತಂದೆಯ ಕಣ್ತಪ್ಪಿಸಿ, ಆ ಮಗುವನ್ನು ಎತ್ತಿಕೊಂಡು ಫೋಟೋವನ್ನು ತೆಗೆಸಿಕೊಂಡಿದ್ದಳು. ಮೂರು ತಿಂಗಳು ಅವಳ ಎದೆಯ ಹಾಲನ್ನು ಕುಡಿದು ಬೆಳೆದಿದ್ದ ಮಗುವನ್ನು ಅವಳು ನಿದ್ರಿಸುತ್ತಿದ್ದಾಗ ಕೊಂಡೊಯ್ದು ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಬಿಟ್ಟು ಬಂದ. ಅವಳು ಬಿಕ್ಕಿ ಬಿಕ್ಕಿ ಅತ್ತಳು. ಮಗುವಿನ ಫೋಟೋವನ್ನು ಎದೆಗವಚಿಕೊಂಡು ಅನ್ನ-ನೀರನ್ನು ಬಿಟ್ಟಳು. ಆಗ ಅವಳನ್ನು ಕರೆದುಕೊಂಡು ತನ್ನ ಗ್ರಾಮಕ್ಕೆ ಮರಳಿದ.
     ಮಗಳು ತನ್ನ ಕಣ್ಣೀರಿನ ನಡುವೆ ಬಿಕ್ಕಳಿಕೆಗಳ ನಡುವೆ ತಾಯಿಯ ಮುಂದೆ ತನ್ನ ವೃತ್ತಾಂತವನ್ನಿಟ್ಟಳು. ತಾಯಿಯ ಕಣ್ಣೀರು ಕೂಡಾ ಕೂಡಿ ಹರಿಯಿತು. ತಾಯಿ ಅವಳನ್ನು ಎದೆಗವಚಿ, “ಯಾರಿಗೂ ಹೇಳಬೇಡ ಮಗಳೇ” ಎಂದು ಉಸುರಿದಳು. ಇಬ್ಬರೇ ತಮ್ಮ ಗುಟ್ಟನ್ನು ಎದೆಯ ಸ್ಮಶಾನದಲ್ಲಿ ಧಪನ್ ಮಾಡಿದರು. ತಾನು ಒಳ್ಳೆಯ ಗಂಡ ಎಂದು ಅವನು ನಟಿಸಲಾರಂಭಿಸಿದ. ತಾಯಿ ಮತ್ತು ಮಗಳಿಬ್ಬರೂ ತಮ್ಮ ಎಚ್ಚರದಲ್ಲಿಯೇ ಇದ್ದರು. ಈ ಪರಿಯ ಕಾವಲನ್ನು ತಾಯಿ ಎಂದೂ ಕಾದಿರಲಿಲ್ಲ. ಅದೂ ಕೂಡಾ ತನ್ನ ಪತಿಯ ಕಾಟದಿಂದ! ನಮ್ಮ ಎಷ್ಟೊಂದು ಹೆಣ್ಣು ಮಕ್ಕಳು ತಮ್ಮ ದುಡಿಮೆಯೊಂದಿಗೆ ತನ್ನ ಗಂಡನೇ ಆತನ ಸ್ವಂತ ಮಗಳ ಶೀಲಹರಣವನ್ನು ಮಾಡದೇ ಇರಲಿ ಎಂದು ಕಾವಲು ಕಾಯುತ್ತಿದ್ದಾರೋ ಯಾರಿಗೆ ಗೊತ್ತು.
     ಅದೊಂದು ಇರುಳಿನಲ್ಲಿ ತಾಯಿ-ಮಗಳಿಬ್ಬರೂ ತಮ್ಮ ಕಷ್ಟ-ಸುಖದ ಮಾತನಾಡಿ, ನಿದ್ರೆಯ ಅಂಚಿಗೆ ಜಾರುವಷ್ಟರಲ್ಲಿ, ಮಗಳ ಹೃದಯ ವಿದ್ರಾವಕ ಕೂಗು. ತಂದೆಯಾದ ಅವನು ತಾಯಿಯ ಮಡಿಲಿನಿಂದ ತನ್ನ ಸ್ವಂತ ಮಗಳನ್ನೇ ತನ್ನ ಕಾಮ ಪಿಪಾಸೆಗಾಗಿ ಎಳೆದೊಯ್ಯುತ್ತಿದ್ದಾನೆ. ತಾಯಿಗೆ ರೇಗಿತು. ಸೀಳಿದ್ದ ಸೌದೆಯನ್ನು ಎಳೆದವಳೇ ಗಂಡನ ಬೆನ್ನಿಗಪ್ಪಳಿಸಿದಳು. ಅವನು ಎಚ್ಚರದಪ್ಪಿದ. ಮಗಳು ಕೂಡಾ ಅವನ ಕೈಯಿಂದ ತಪ್ಪಿಸಿಕೊಂಡು ತಾನೊಂದು ಸೌದೆಯನ್ನು ಸೆಳೆದುಕೊಂಡಳು. ದಬದಬ ಬಿದ್ದ ಏಟಿನಿಂದ ಚೇತರಿಸಿಕೊಳ್ಳದೆ, ಕುಯ್ಯೋ, ಮರ್ರೋ, ಎಂದು ಬೊಬ್ಬೆ ಹೊಡೆಯತೊಡಗಿದ. ಅಕ್ಕ-ಪಕ್ಕದ ಮನೆಗಳಲ್ಲಿ ಇದ್ದ ಅವನ ಅಣ್ಣ-ತಮ್ಮಂದಿರು ಬಂದರು. ಅವರುಗಳು ಆ ಅಸಹಾಯಕ ಹೆಣ್ಣು ಮಕ್ಕಳ ಮೇಲೆ ತಮ್ಮ ಬಲ ಪ್ರದರ್ಶನ ಮಾಡಿದ ನಂತರ, ಅವರೆಲ್ಲಾ ಮಸಲತ್ತು ಮಾಡಿದರು. ಆ ನಿರ್ದಯಿ ಪುರುಷನು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾದ ಹಾಗೂ ತಾಯಿ ಮತ್ತು ಮಗಳು ತನ್ನ ಕೊಲೆ ಮಾಡಲು ಪ್ರಯತ್ನಿಸಿದರೆಂದು ಭಾರತೀಯ ದಂಡ ಸಂಹಿತೆಯ ಕಲಮು 307ರ ರೀತ್ಯಾ ದೂರನ್ನು ನೀಡಿದ. ಆತನ ದೂರಿನ ಮೇರೆಗೆ ಸಂಬಂಧಪಟ್ಟ ಪೋಲಿಸಿನವರು ಅವರಿಬ್ಬರನ್ನು ಬಂಧಿಸಿದರು.
     ಆ ಹಂತದಲ್ಲಿ ತಾಯಿಯ ಸಹೋದರ ನನ್ನ ಬಳಿ ಬಂದ. ಮಗುವಿನ ಫೋಟೋ ತೋರಿಸಿ, “ಹಾಳಾಗಿ ಹೋಗಲಿ ಎಂದು ಬಿಟ್ಟಿದ್ದೆವು. ಆದರೆ, ಅವನು ಈ ಹಂತಕ್ಕೆ ಬಂದ.” ಎಂದು ಗೋಳಿಟ್ಟ. ನನಗೆ ನಂಬಲಾಗಲಿಲ್ಲ. ಸುಳ್ಳೆ ಹೇಳುತ್ತಿದ್ದಾನೆ ಅನಿಸಿತು. ಆದರೆ, ಅವನ ಮಾತಿನ ಮೇಲೆ ನಂಬಿಕೆ ಬಂದ ನಂತರ, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿಗಳ ಬಳಿ ಹೋಗಿ ವಿಷಯವನ್ನಿಟ್ಟೆ. ಅವರು ಒಂದು ಕ್ಷಣ ಮೌನವಾದರು. ಕೂಡಲೇ ಒಬ್ಬ ಸೀನಿಯರ್ ಪೋಲೀಸ್ ಅಧಿಕಾರಿಯನ್ನು ಆ ಠಾಣೆಗೆ ತನಿಖೆಗಾಗಿ ಕಳಿಸಿದರು. ಅವರ ಪ್ರಾಥಮಿಕ ವಿಚಾರಣೆಯ ಮೇರೆಗೆ, ಸತ್ಯ ಹೊರಬಿತ್ತು. ಕೂಡಲೇ ಸದರಿ ಪೋಲೀಸ್ ಅಧಿಕಾರಿಯು ಮಗಳ ಫಿರ್ಯಾದನ್ನು ಪಡೆದು ತಂದೆಯ ವಿರುದ್ಧ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಪ್ರಕರಣವನ್ನು ದಾಖಲಿಸಿ, ತಾಯಿ ಮತ್ತು ಮಗಳನ್ನು ಬಿಡುಗಡೆ ಮಾಡಿದರು.   ತಾಯಿ ಮತ್ತು ಆಕೆಯ ಸಹೋದರನ ಮನವೊಲಿಸಿ, ಆಕೆಯನ್ನು ಮರಳಿ ತವರಿಗೆ ಹೋಗುವಂತೆ ನಾನು ಕೇಳಿಕೊಂಡು, ಆಕೆಯ ಹೆಸರಿನಲ್ಲಿದ್ದ ಒಂದು ಮನೆಯನ್ನು ಮಾರಾಟ ಮಾಡಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಆ ಮನೆಯ ಮಾರಾಟವಾಗಲೇ ಇಲ್ಲ. ‘ಪಾಪ! ಅವಳ ಹೆಸರಿಗಿದ್ದರೇನಾಯಿತು- ಕಟ್ಟಿರುವುದು ಅವನೇ ತಾನೇ? ಅವನಿಗೆ ಅನ್ಯಾಯ ಮಾಡುವುದಾದರೂ ಹೇಗೆ?’ ಎಂದು ಸಿಕ್ಕ ಸಿಕ್ಕ ಗಂಡಸರು ನ್ಯಾಯದ ಮಾತನಾಡಿದರು. ಅವಳು 6 ಹೆಣ್ಣು ಮಕ್ಕಳನ್ನು ಎದೆಗವಚಿಕೊಂಡು ಬರಿಗೈಯಲ್ಲಿ ತವರಿಗೆ ಹೋದಳು.
     ನಮ್ಮ ಜಿಲ್ಲೆಯದೇ ಇನ್ನೊಂದು ಪ್ರಕರಣ ಗ್ರಾಮವೊಂದರ ಪ್ರಾರ್ಥನಾ ಮಂದಿರಕ್ಕೆÉ ಯುವ ಧರ್ಮಗುರು ಒಬ್ಬ ಬಂದ. ಪ್ರಾರ್ಥನೆ ಪ್ರವಚನ ಮತ್ತು ಆತನ ಅಸ್ಕಲಿತವಾಣಿಗೆ ಜನ ಮಾರು ಹೋದರು. ಮನೆಮಠ ಇಲ್ಲದ ಹೊರ ಊರಿನಿಂದ ಬಂದಿರುವ ಅವನಿಗೆ ಪ್ರಾರ್ಥನಾ ಮಂದಿರದ ಆವರಣದಲ್ಲಿಯೇ ಉಳಿದುಕೊಳ್ಳಲು ಆತನಿಗೆ ಒಂದು ಕೋಣೆಯನ್ನೂ ಕೂಡ ನೀಡಿದರು  ಹಾಗೂ ಒಂದೊಂದು ಮನೆಯಿಂದ ಆತನಿಗೆ ತಿಂಡಿ ಮತ್ತು ಊಟವನ್ನು ಸರಬರಾಜು ಮಾಡಬೇಕೆಂದು ವ್ಯವಸ್ಥೆಯಾಯಿತು. ಅದೊಂದು ದುರ್ದಿನ....... ಪತಿ ಕೆಲಸಕ್ಕೆ ಹೋಗಿದ್ದರಿಂದ ತನ್ನ ಹತ್ತು ವರ್ಷ ವಯಸ್ಸಿನ ಮಗಳ ಕೈಯ್ಯಲ್ಲಿ ತಾಯಿ ಟಿಫಿನ್ ಕ್ಯಾರಿಯರನ್ನು ಕಳುಹಿಸಿದಳು. ಆ ಮಗುವನ್ನು ಒಳಗೆ ಕರೆದು ಅವನು ತನ್ನ ಕೋಣೆಯ ಬಾಗಿಲನ್ನು ಬಂದ್ ಮಾಡಿದ. ತಾಯಿ ಮಗುವಿನ ಹಾದಿಯನ್ನು ಕಾದು ಕಳವಳಕ್ಕೀಡಾದಳು. ಅಳುತ್ತಾ ಬಂದ ಮಗುವಿನ ರಕ್ತ-ಸಿಕ್ತ ಯಾತನೆಯು ಅನೇಕ ಸತ್ಯಗಳನ್ನು ಹೊರಗೆಡವಿತು. ಆಕೆ ಈ ವಿಚಾರವನ್ನು ನೆರೆಹೊರೆಯವರಲ್ಲಿ ತರುವಷ್ಟರಲ್ಲಿ ಆತ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದ. ಆತನನ್ನು ಹಿಡಿದು ಒದ್ದು ಸಾರ್ವಜನಿಕರೇ ಸೇಡು ತೀರಿಸಿಕೊಂಡರೇ ಹೊರತು ಆತನನ್ನು ಪೋಲೀಸಿಗೆ ಒಪ್ಪಿಸಲಿಲ್ಲ. ಆತನ ವಿರುದ್ಧ ದೂರು ದಾಖಲಾದಲ್ಲಿ, ಈ ಬಗ್ಗೆ ಅನಗತ್ಯ ಪ್ರಚಾರವಾಗಿ ತಮ್ಮ ಧರ್ಮದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವುದೆಂಬ ಆತಂಕ ಅವರುಗಳದಾಗಿತ್ತು.
     ನಮ್ಮ ಜಿಲ್ಲೆಗೆ ಸೇರಿದ ಬುಡಕಟ್ಟು ಜನಾಂಗದ ಗ್ರಾಮದ ಕೆಲವು ಯುವಕರಿಗೂ ಬಹುಸಂಖ್ಯಾತ ಯುವಕರಿಗೂ ಚಿಕ್ಕ ಕಾರಣಕ್ಕೆ ಘರ್ಷಣೆಯಾಯಿತು. ಟೆಂಪೋಗಳನ್ನೇರಿದ ಬಹುಸಂಖ್ಯಾತ ಕೋಮಿನ ಯುವಕರು ಆ ಗ್ರಾಮಕ್ಕೆ ಬಂದಿಳಿದವರೇ ಘರ್ಷಣೆಗೆ ಸನ್ನದ್ಧರಾದರು. ಆ ಗ್ರಾಮದ ಬುಡಕಟ್ಟು ಜನಾಂಗದ ಯುವಕರು ಕ್ಷಣಾರ್ಧದಲ್ಲಿ ಓಡಿ ಜೀವವುಳಿಸಿಕೊಂಡರು. ಕೈಗೆ ಸಿಕ್ಕವರೇ ಅಮಾಯಕ ಮಹಿಳೆಯರು. 7 ಜನ ವಿವಾಹಿತ ಮಹಿಳೆಯರ ಮೇಲೆ ಅತ್ಯಾಚಾರವನ್ನೆಸಗಿದ ಗುಂಪು ಟೆಂಪೋಗಳನ್ನೇರಿ ವಾಪಸು ಹೋದರು. ಬೆಳಗಾಗುತ್ತಿದ್ದಂತೆ ನಿಧಾನವಾಗಿ ಊರು ಸೇರಿದ ಬುಡಕಟ್ಟು ಜನಾಂಗದ ಪುರುಷರು ಅತ್ಯಾಚಾರಕ್ಕೀಡಾದ ಮಹಿಳೆಯರನ್ನು ಪ್ರತ್ಯೇಕಿಸಿ ಅವರನ್ನು ಬಹಿಷ್ಕರಿಸಿದರು. ಅದೊಂದು ಅತ್ಯಂತ ಮನ ಕಲಕುವ ದೃಶ್ಯವಾಗಿತ್ತು. ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದವರು ತವರು ಮನೆಗೆ ಭೇಟಿಗೆಂದು ಬಂದಿದ್ದ ಆಕೆಯ ವಿವಾಹಿತ  ಮಗಳ ಮೇಲೆ ಕೂಡ ಅತ್ಯಾಚಾರ ಎಸಗಿದ್ದರು. ಆ 7 ಮಂದಿ ಮಹಿಳೆಯರ ದೈಹಿಕ, ಮಾನಸಿಕ ನೋವಿಗೆ ಸ್ಪಂದಿಸುವುದಿರಲಿ, ಅವರನ್ನೇ ತಪ್ಪಿತಸ್ಥರನ್ನಾಗಿ ಮಾಡಲಾಗಿತ್ತು. ಈ ಬಗ್ಗೆ ಮಾಧ್ಯಮಗಳು ಸವಿಸ್ತಾರವಾಗಿ ಬಿತ್ತರಿಸಿದ್ದವು. ರಾಜ್ಯ ಮಹಿಳಾ ಆಯೋಗದ ಭೇಟಿಯಾಯಿತು. ಮುಂದೇನು..? ಎಲ್ಲವೂ ಔಪಚಾರಿಕವಾಗಿ ನಡೆಯಿತು. ಆದರೆ ಬಲಿಯಾದ ಮಹಿಳೆಯರ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಅದೇ ಬಹಿಷ್ಕಾರ ಮುಂದುವರೆಯಿತು.
     ಹಾಸನದ ಮಹಿಳಾ ವಿಕಾಸ ವೇದಿಕೆ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಆ ಮಹಿಳೆಯರನ್ನು ಹೇಗಾದರೂ ಮಾಡಿ ತಮ್ಮ ಕುಟುಂಬಕ್ಕೆ ಮರಳಿ ಕಳಿಸಬೇಕೆಂಬ ಪ್ರಯತ್ನವನ್ನು ಮುಂದುವರೆಸಿತು. ಆಗ ನಾನು ವೇದಿಕೆಯ ಅಧ್ಯಕ್ಷೆ ಆಗಿದ್ದೆ.  ಕೊನೆಗೆ ನಮಗೆ ಒಂದು ಸುಳಿವು ಸಿಕ್ಕಿತು. ಜಿಲ್ಲೆಯ ಇನ್ನೊಂದು ಮೂಲೆಯಲ್ಲಿರುವ ಕುಗ್ರಾಮವೊಂದರಲ್ಲಿ ತಮ್ಮ ಜನಾಂಗದ ನಾಯಕರು ಮತ್ತು ಗುರುಗಳು ಇರುವುದಾಗಿಯೂ ವರ್ಷಕ್ಕೊಂದು ಸಾರಿ ನಡೆಯುವ ಜಾತ್ರೆಯಲ್ಲಿ ಮಾತ್ರ ಇಂತಹ ವಿಷಯಗಳನ್ನು ಪ್ರಸ್ತಾಪ ಮಾಡಿ ತೀರ್ಮಾನವನ್ನು ಪಡೆಯಬಹುದೆಂತಲೂ ಮತ್ತು ಜಾತ್ರೆ ನಡೆಯಲು ಇನ್ನೂ 9 ತಿಂಗಳ ಕಾಲ ಕಾಯಬೇಕಾಗುತ್ತದೆಂತಲೂ ನಮಗೆ ವಿಷಯ ತಿಳಿಯಿತು. ಕೊನೆಗೆ ಒಂದು ದಿನ ನಾವು ನಾಲ್ವರೂ ಕೂಡ ಆ ಕುಗ್ರಾಮಕ್ಕೆ ಹೊರಟೆವು. ಅನಧಿಕೃತವಾಗಿ ನಾವು ಸುದ್ಧಿ ಮುಟ್ಟಿಸಿದ್ದರಿಂದ ಸಂಬಂಧಪಟ್ಟವರು ಆ ಗ್ರಾಮದಲ್ಲಿ ನಮ್ಮ ನಿರೀಕ್ಷೆಯಲ್ಲಿದ್ದರು. ನನ್ನ ಕಾರಿಗೆ ನಾನೇ ಚಾಲಕಿಯಾಗಿದ್ದು, ಇತರೆ ಮೂವರು ಸಹಪ್ರಯಾಣಿಕರಾಗಿದ್ದರು. ಪ್ರಯಾಣದ ಆರಂಭದಲ್ಲಿ ನಾವು ಲವಲವಿಕೆಯಿಂದ ಇದ್ದೆವು. ಈ ಪ್ರಯಾಣದ ಸವಾಲುಗಳ ಅರಿವು ನಮಗೆ ಇರಲಿಲ್ಲ. ನಗರವಾಸಿಗಳಾಗಿದ್ದ ನಾವು ವಿಷಯವನ್ನು ಮತ್ತು ಸನ್ನಿವೇಶವನ್ನು ಲಘುವಾಗಿ ಪರಿಗಣಿಸಿದ್ದೆವು.
     ಹಾಸನದಿಂದ ಸುಮಾರು 40 ಕಿ.ಮೀ. ದೂರದ ತಾಲ್ಲೂಕು ಕೇಂದ್ರವನ್ನು ತಲುಪಿ ಅಲ್ಲಿಂದ ಕಚ್ಚಾ ರಸ್ತೆಯಲ್ಲಿ ಕಾರನ್ನು ಚಾಲನೆ ಮಾಡಬೇಕಾದ ಕರ್ತವ್ಯವನ್ನು ನಾನು ನಿರ್ವಹಿಸುತ್ತಿದ್ದೆ. ಅಂತೂ ಇಂತೂ ಆ ಕುಗ್ರಾಮವನ್ನು ತಲುಪಿದಾಗ ಆ ಜನಾಂಗದ ನಾಯಕರು ದೇವಸ್ಥಾನದಲ್ಲಿ ಸೇರಿದ್ದರು ಮತ್ತು ನಮ್ಮ ನಿರೀಕ್ಷೆಯಲ್ಲಿದ್ದರು. ದೇವಸ್ಥಾನದ ಒಳಗೆ ಮಬ್ಬುಗತ್ತಲು. ಅಲ್ಲಿ ಕುಳಿತಿದ್ದ ಜನಾಂಗದ ಹಿರಿಯರ ಸ್ಪಷ್ಟ ಮೋರೆ ಕೂಡ ಕಾಣುವಂತಿರಲಿಲ್ಲ. ನಮಗೆ ವಿಷಯದ ತೀವ್ರತೆಯ ಅರಿವಾಯಿತು. ನಾವು ತಪ್ಪು ಮಾಡಿದೆವು. ಯಾವ ರಕ್ಷಣೆಯೂ ಇಲ್ಲದೆ ನಾವು ನಾಲ್ಕು ಮಂದಿ ಇಲ್ಲಿಗೆ ಬರಬಾರದಾಗಿತ್ತು ಎಂದು ನನಗೆ ಅನ್ನಿಸತೊಡಗಿತು. ತಾಲ್ಲೂಕು ಕೇಂದ್ರದಲ್ಲಿ ನಾವು ಪೋಲೀಸರ ಸಹಾಯವನ್ನು ಕೋರಬೇಕಿತ್ತು ಇಲ್ಲವಾದಲ್ಲೀ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆಯಾದರೂ ಬರಬೇಕಿತ್ತು ಎಂದು ನಾನು ಒಳಗೊಳಗೇ ಅಪಾರ ಚಿಂತೆಗೊಳಗಾದೆ. ಯಾವುದೋ ಅಪಾಯವಿದೆ ಎಂದು ನನಗೆ ಭಾಸವಾಗತೊಡಗಿತು. ನಾನು ಮತ್ತು ಲಿನೆಟ್ ಪರಸ್ಪರ ಕಣ್ಣುಗಳಲ್ಲಿಯೇ ನಮ್ಮ ಭಯ ಮತ್ತು ಆತಂಕವನ್ನು ವಿನಿಮಯ ಮಾಡಿಕೊಂಡೆವು. ಹೇಗಾದರೂ ಇರಲಿ ಎಂದು ನಾನು ಹೊರ ಬಂದು ಕಾರನ್ನು ಸರಿಯಾಗಿ ರಸ್ತೆಗೆ ನಿಲ್ಲಿಸಿ ಸಮಾಧಾನಪಟ್ಟುಕೊಂಡು ದೇವಸ್ಥಾನದ ಒಳಹೋದೆ. ಅಲ್ಲಿ ಮಾತುಕತೆ ಆರಂಭವಾಗಿತ್ತು.
       ಮಹಿಳೆಯರ ಮೇಲಿನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವಂತೆಯೂ ಅವರವರ ಕುಟುಂಬದಲ್ಲಿ ಹಿಂದಿನಂತೆಯೇ ಬದುಕಲು ಒಪ್ಪಿಕೊಂಡು ಸಾಮಾಜಿಕ ಬದುಕಿಗೆ ಅನುವು ಮಾಡಿಕೊಡಬೇಕಂತಲೂ ನಮ್ಮ ಕೋರಿಕೆಯನ್ನು ಅವರ ಮುಂದಿಟ್ಟೆವು. ‘ಕೆಟ್ಟು ಹೋದ ಹೆಣ್ಮಕ್ಕಳನ್ನು’ ಯಾವ ಕಾರಣಕ್ಕೂ ಒಪ್ಪಿಕ್ಕೊಳ್ಳುವುದಿಲ್ಲವೆಂದು ಅವರು ಅತ್ಯಂತ ಅಸಹ್ಯ ಮನಃಸ್ಥಿತಿಯಲ್ಲಿ ಖಡಾಖಂಡಿತವಾಗಿ ತಿಳಿಸಿದರು. ಅವರ ಆ ಮನಸ್ಥಿತಿಯ ಬಗ್ಗೆ ನಾವು ತಕರಾರನ್ನೆತ್ತಿ ಸುಮಾರು 2 ಘಂಟೆಗಳ ಕಾಲ ಸುಧೀರ್ಘ ಚರ್ಚೆಯಾಯಿತು. ಅಷ್ಟರಲ್ಲೇ ನಮ್ಮ ತಂಡದ ಲೀಲಾವತಿ(ಹಾಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆಯಾಗಿದ್ದಾರೆ.) ಮತ್ತು ಹೇಮಾ ಇಬ್ಬರೂ ತಾಳ್ಮೆ ಕಳೆದುಕೊಳ್ಳುತ್ತಿದ್ದುದು ಸ್ಪಷ್ಟವಾಗಿತ್ತು. ‘ಹೆಣ್ಣು ಮಕ್ಕಳಿಗೆ ರಕ್ಷಣೆಯನ್ನೀಯಬೇಕಾದ ಮಹಾಮಹಿಮ ಗಂಡಸರು ಅವರನ್ನು ಬಿಟ್ಟು ಹೋದದ್ದು ಯಾಕೆ? ಈ ಎಲ್ಲಾ ಘಟನೆಗೆ ಅವರೇ ಕಾರಣ. ಈ ಹೆಣ್ಣುಮಕ್ಕಳು ವಿವಾಹ ಬಾಹಿರ ಸಂಬಂಧವನ್ನೇನೂ ತಾವಾಗಿಯೇ ಬೆಳೆಸಿಲ್ಲ!’ ಎಂಬುದು ವೇದಿಕೆಯ ವಾದವಾಗಿದ್ದರೆ, ‘ಯುವಕರದೇನೂ ತಪ್ಪಿಲ್ಲಾ, ಪ್ರಾಣ ಉಳಿಸಿಕೊಳ್ಳಲು ಅವರು ಓಡಲೇಬೇಕಿತ್ತು. ಅದ್ಹೇಗೋ ಏನೋ... ಅಂತೂ ಹೆಣ್ಣು ಕೆಟ್ಟ ಮೇಲೆ ತಾವು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ’ ಎಂಬುದು ಅವರ ಉಡದ ಹಿಡಿತದ ನಿಲುವು. 
     ಲಿನೆಟ್ ಅತ್ಯಂತ ಸಂಯಮದಿಂದ ವಿವೇಕದಿಂದ ಸಾವಧಾನದಿಂದ ದೈನ್ಯತೆಯಿಂದ ತಮ್ಮ ಬೇಡಿಕೆಯನ್ನು ಮುಂದಿಟ್ಟು ಆ ಜನಾಂಗದ ಹಿರಿಯರ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಆದರೂ ನಮ್ಮಿಬ್ಬರ ನೋಟ ಲೀಲಾವತಿಯ ಮೇಲಿತ್ತು ಹಾಗೂ ಲೀಲಾವತಿಗೆ ಕೋಪ ಬರದಿದ್ದರೆ ಸಾಕು ಎಂದು ಆಂತರ್ಯದಲ್ಲಿ ಪ್ರಾರ್ಥಿಸುತ್ತಿದ್ದೆವು. ಆದರೆ ನಮ್ಮ ಎಲ್ಲಾ ಆಂತರಂಗದ ಕೋರಿಕೆ ವಿಫಲವಾಯಿತು. ಮತ್ತು ಲೀಲಾವತಿಗೆ ಅಸಾಧ್ಯ ಕೋಪ ಬಂದೇ ಬಂತು. ಎದ್ದು ನಿಂತವರೇ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ
     “ಏನ್ರೀ... ಏನು ನೀವ್ ಹೇಳ್ತಿರೋದು. ಆ ಹೆಣ್ಣು ಮಕ್ಕಳು ಹೆಂಗೆ ಕೆಡ್ತಾರೆ? ಕೆಡೋದು ಅಂದ್ರೆ ಅರ್ಥ ಏನು? ಮಹಾನ್ ಮಹಾನ್ ಗಂಡಸ್ರು ಅಲ್ಲಿದ್ರಲ್ಲಾ ಅವ್ರು ಆ ಹೆಣ್ಣು ಮಕ್ಕಳ ರಕ್ಷಣೆ ಮಾಡ್ಬೇಕಿತ್ತು ಯಾಕೆ ಅಲ್ಲಿಂದ ಓಡಿ ಹೋದ್ರು? ಅವರೆಂಥ ಗಂಡಸ್ರು? ಇಲ್ಲಿ.... ಇಂಥ ಉಲ್ಟಾ ನ್ಯಾಯ ಹೇಳ್ತಾ ಇದೀರಲ್ಲಾ ನೀವೆಂಥ ಗಂಡಸ್ರು?” ಎಂದು ಗಟ್ಟಿ ಧ್ವನಿಯಲ್ಲಿ ಜಗಳಕ್ಕೆ ನಿಂತರು. ಈ ಲೀಲಾವತಿ ಸುಮ್ಮನಿರಲಾರದೆ, ಅಲ್ಲಿ ಸೇರಿದ್ದ ದೊಡ್ಡ ಗುಂಪಿನ ಪುರುಷರ ಗಂಡಸ್ತನಕ್ಕೆ ಸವಾಲೆಸೆಯುತ್ತಿರುವುದನ್ನು ಕಂಡು ನಾನಂತೂ ಬೆವೆತು ಹೋದೆ.
     ಆದರೆ ಅವರ ಆಕ್ರಮಣಕಾರಿ ವರ್ತನೆಯಿಂದ ಅನಿರೀಕ್ಷಿತ ಪರಿಣಾಮ ಮೂಡಿಬಂತು. ಇಡೀ ಸಭೆಯಲ್ಲಿ ಕೆಲಹೊತ್ತು ಮೌನವೇ ಪ್ರಧಾನವಾಯಿತು. ಯಾರೂ ಮಾತನಾಡಲಿಲ್ಲ. ನಾನು ಮತ್ತು ಲಿನೆಟ್ ಎದುರಿಸಿದ ಬದುಕಿನ ಅತ್ಯಂತ ಕಠಿಣ ಪರೀಕ್ಷೆಯ ಪ್ರಸಂಗಗಳಲ್ಲಿ ಅದೂ ಕೂಡ ಒಂದಾಗಿತ್ತು. ಕೆಲಹೊತ್ತಿನ ನಂತರ ಆ ಗುಂಪಿನ ಪೈಕಿ ಹಿರೀಕರೊಬ್ಬರು ಮಾತನಾಡಿ, “ನೀವು ಹೇಳ್ತಾಯಿರೋದನ್ನು ನಾವಂತೂ ಒಪ್ಪಾಕಿಲ್ಲ. ನೀವು ಹೊರಗಡೆ ಇರಿ ತಾಯಿ ನಾವು ದೇವ್ರ ಅಪ್ಪಣೆ ಪಡ್ದು ಹೇಳ್ತೀವಿ” ಎಂದರು. ಸದ್ಯ ಬದುಕಿದೆವು ಎಂದು ನಾವು ಹೊರಬಂದು ಮರದ ಕೆಳಗಡೆ ಕುಳಿತೆವು. ಒಳಗಡೆ ಅವರ ಸಭೆ ಮುಂದುವರೆಯಿತು.     
     ಸುಧೀರ್ಘವಾಗಿ ಅವರ ಸಭೆ ನಡೆಯುತ್ತಿತ್ತು. ಈಗ ನಾವು ಮೂವರೂ ಕೂಡ ಲೀಲಾವತಿಯವರ ನಾಯಕತ್ವವನ್ನು ಬೇಷರತ್ತಾಗಿ ಒಪ್ಪಿಕೊಂಡಿದ್ದೆವು. ಹತ್ತು ನಿಮಿಷಕ್ಕೊಮ್ಮೆ ಲೀಲಾವತಿ “ಎಷ್ಟು ಹೊತ್ತುರೀ ನೀವು ಮಾತಾಡೋದು ಬೇಗ ತೀರ್ಮಾನ ಹೇಳಿ”ಅಂತಲೋ ಅಥವಾ ನಮಗೆ ವಾಪಸ್ ಹೋಗೋದಿಕ್ಕೆ ಟೈಮ್ ಆಗುತ್ತೆ ನೀವು ತೀರ್ಮಾನ ಹೇಳ್ತಿರೋ ಅಥವಾ ನಾವು ವಾಪಸ್ ಹೋಗೋಣವೋ” ಎಂದು ಆವಾಜ್ ಹಾಕುತ್ತಲೇ ಇದ್ದರು. ತಾಸೊತ್ತು ಕಾದಮೇಲೆ ಆ ಜನಾಂಗದ ಗುರುಗಳು ಸಭೆಯನ್ನು ದೇವಾಲಯದ ಜಗುಲಿಗೆ ಸ್ಥಳಾಂತರಿಸಿದರು ಹಾಗೂ ವಿಚಿತ್ರ ತೀರ್ಮಾನವೊಂದನ್ನು ನಮ್ಮೆದುರಿಗೆ ಇಟ್ಟರು. “ಆ ಹೆಂಗಸರಿಗೆ ಚಿನ್ನದ ಸೂಜೀಲಿ ನಾಲಿಗೆಯನ್ನು ಚುಚ್ಚಿದ ನಂತರ ಅವರು ಏಳು ಕೆರೇಲಿ ಸ್ನಾನ ಮಾಡಿ ಹೊಸ ಸೀರೆಯನ್ನುಟ್ಟು ದೇವರ ಪೂಜೆ ಮಾಡಿದಲ್ಲಿ ಅವರನ್ನು ಮತ್ತೆ ತಮ್ಮ ಜಾತಿಗೆ ಸೇರಿಸಿಕೊಂಡು ಕುಟುಂಬದೊಳಗೆ ಮತ್ತೆ ಸೇರಿಸಿಕೊಳ್ಳಲಾಗುವುದು. ಅದಕ್ಕೆ ಬೇಕಾದ ಚಿನ್ನದ ಸೂಜಿ ಮತ್ತು ಹೊಸ ಬಟ್ಟೆ ಮತ್ತು ಪೂಜೆಯ ಖರ್ಚು 50,000 ರೂಪಾಯಿಯನ್ನು ನೀವು ಒದಗಿಸಿ ಕೊಡಬೇಕು.” ಎಂದು ಮಾಡಿದ ಆ ಜನಾಂಗದ ಹಿರಿಯರ ಕಟ್ಟಪ್ಪಣೆಗೆ ಲೀಲಾವತಿ ಮತ್ತು ಹೇಮ ಕೆಂಡ ಕಾರತೊಡಗಿದರು. “ನಿಮ್ಮ ಮನೆ, ನಿಮ್ಮ ಹೆಂಗಸರು, ನಿಮ್ಮ ಕುಟುಂಬ. ನಾವ್ಯಾಕೆ ಅದೆಲ್ಲವನ್ನು ಒದಗಿಸಿಕೊಡಬೇಕು. ನೀವೇ ಅದೆಲ್ಲವನ್ನೂ ಒದಗಿಸಿಕೊಂಡು, ಆ ಮಹಿಳೆಯರನ್ನು ನಿಮ್ಮ ಮನೆಗೆ ಸೇರಿಸಿಕೊಳ್ಳಿ” ಎಂದು ಅವರಿಬ್ಬರೂ ಒತ್ತಾಯಿಸತೊಡಗಿದರು.
      ಪ್ರತ್ಯುತ್ತರವಾಗಿ ಆ ಜನಾಂಗದ ಗುರುಗಳು “ನಾವೇನೂ ಮಾಡಕ್ಕಾಗಲ್ಲ. ಹಾಗಂತ ನಮ್ಮ ದೈವ ಅಪ್ಪಣೆ ಕೊಡಿಸೈತೆ” ಎಂದು ತಣ್ಣಗೆ ಹೇಳಿ ತಮ್ಮ ಬಿಡುಗಡೆಯ ಹಾದಿಯನ್ನು ದೈವದ ಮೇಲೆ ಹೊರಿಸಿ ಎಸ್ಕೇಪ್ ಆದರು. ಈ ಸಲ ಕೋಪ ಬಂದದ್ದು ಹೇಮಾಗೆ “ಹೌದಾ ದೈವ ಅಪ್ಪಣೆ ಕೊಡಿಸಿತಾ? ಹಾಗಾದರೆ ನಮ್ಮೆದುರಿಗೆ ಹೇಳಿಸಿ ನೋಡೋಣ ದೈವ ಹೇಳಿದ್ದೆಲ್ಲವನ್ನೂ ಪೂರೈಸ್ತೀವಿ” ಎಂದು ಸವಾಲ್ ಎಸೆದು ಕಾಲು ಕೆರೆದು ನಿಂತರು. ಆದರೆ ನನಗೆ ಮತ್ತು ಲಿನೆಟ್‍ಗೆ ಈ ಅಸಂಬದ್ಧ ಸಲಹೆಯ ನಡುವೆಯೂ ಒಂದು ಪರಿಹಾರ ಕಂಡು ಬಂದಿತ್ತು. ನಾನು ಅವರ ಸಲಹೆಯನ್ನು ಚೌಕಾಶಿ ಮಾಡಬೇಕೆಂದು ನಿರ್ಧರಿಸಿದೆ. ಮಾತು ಮುಂದುವರೆಯಿತು. ಈ ಚರ್ಚೆಯ ನಡುವೆ ಹೇಮ ಕೋಪೋದ್ರಿಕ್ತರಾಗಿ “ನಾವು ನಿಮಗೆ ಏನನ್ನೂ ಕೋಡೋದಿಲ್ಲ ಗೌರವಯುತವಾಗಿ ಅವರನ್ನು ನಿಮ್ಮ ಕುಟುಂಬಗಳಲ್ಲಿ ಕರೆದುಕೊಳ್ಳಿ. ಇಲ್ಲವಾದಲ್ಲಿ ನಾವು ಅವರಿಗೆ ಸರ್ಕಾರದಿಂದ ಪರಿಹಾರವನ್ನು  ಕೊಡಿಸುತ್ತೇವೆ. ಬೇರೆ ಮದುವೆ ಮಾಡ್ತೀವಿ” ಎಂದು ಧಮಕಿಯನ್ನೂ ಹಾಕಿದರು. ಈ ಬೆದರಿಕೆ ಆ ಗುಂಪಿನ ಮೇಲೆ ಸ್ವಲ್ಪ ಪರಿಣಾಮವನ್ನು ಬೀರಿತು ಎಂದು ನಮಗೆ ನಂತರ ತಿಳಿದುಬಂದಿತು.
     ಕೊನೆಗೂ ನಾವುಗಳು ಆ ಏಳು ಮಹಿಳೆಯರಿಗೂ ಹೊಸಬಟ್ಟೆಯನ್ನು ಕೊಡಿಸುವುದಾಗಿಯೂ ಉಳಿದ ಚಿನ್ನದ ಸೂಜಿ ಮತ್ತಿತರೆ ಖರ್ಚು ವೆಚ್ಚವನ್ನು ಅವರುಗಳೇ ನಿರ್ವಹಿಸಬೇಕೆಂತಲೂ ನೀಡಿದ ನಮ್ಮ ಸಲಹೆಯನ್ನು ಅವರುಗಳು ಒಪ್ಪಿದರು. ಅಂತೂ ನಾವುಗಳು ಹಾಸನ ತಲುಪಿದಾಗ ನಮಗೆ ಸಾಕಷ್ಟು ನೆಮ್ಮದಿಯಾಗಿತ್ತು. ಏಳು ಜೊತೆ ಹೊಸಬಟ್ಟೆಗಳನ್ನು ಒದಗಿಸೋ ಜವಾಬ್ದಾರಿಯನ್ನು ಹೇಮಾಗೆ ವಹಿಸಿದ್ದೆವು. ಆಕೆ ಅದನ್ನು ಸಮರ್ಥವಾಗಿ ನಿಭಾಯಿಸಿದರು. ತದನಂತರ ಸೂಕ್ತ ಶಾಸ್ತ್ರ ಪೂಜೆ ಮೊದಲಾದವು ನಡೆದ ನಂತರ ಆ ಮಹಿಳೆಯರ ಕೌಟುಂಬಿಕ ಪುನರ್‍ಮಿಲನವಾಯಿತು.
     ನನ್ನ ವೃತ್ತಿಪರ ಬದುಕಿನಲ್ಲಿ ಮತ್ತು ಮಹಿಳಾ ಸಂಘಟನೆಯ ಕಾರ್ಯಕರ್ತೆಯಾಗಿ ನಾನು ಎದುರಾದ ಅನೇಕ ಅತ್ಯಾಚಾರದ ಪ್ರಕರಣಗಳ ಪೈಕಿ ಕೆಲವೊಂದು ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹೇಳದೆ ಇರುವುದು ಬಹಳಷ್ಟಿದೆ. ಹೇಳಲೇಬೇಕಾದ ಇನ್ನೊಂದು ಆಂತರ್ಯದ ಮಾತಿದೆ. ಅತ್ಯಾಚಾರಿಗಳು ರಸ್ತೆ, ಬಸ್ಸು, ರೈಲು ಮತ್ತು ಶಾಲೆ ಕಾಲೇಜುಗಳಲ್ಲಿ ಹಾಗೂ ದುಡಿಯುವ ಸ್ಥಳಗಳಲ್ಲಿ ಮಾತ್ರವಲ್ಲದೆ ಮನೆಗಳಲ್ಲಿಯೂ ಇದ್ದಾರೆ. ಕೆಲವು ನತದೃಷ್ಟ ಮಹಿಳೆಯರಿಗೆ ಮನೆ ಮನೆಯಾಗಿರುವುದಿಲ್ಲ ಬದಲಿಗೆ ಯಾತನಾಶಿಬಿರವಾಗಿರುತ್ತದೆ, ಜೈಲಾಗಿರುತ್ತದೆ. ಕೆಲವು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳಿಗಂತೂ ಮನೆಯೆಂಬುದು ಕೆಂಪು ಪ್ರದೇಶವಾಗಿರುತ್ತದೆ. ಅಣ್ಣ, ಅಪ್ಪ, ಅಜ್ಜನಂತಹ ವಾತ್ಸಲ್ಯದ ಪ್ರತೀಕಗಳಾಗಬೇಕಿದ್ದ ರಕ್ಷಣೆಯ ಅದೃಶ್ಯ ಹಸ್ತಗಳಾಗಬೇಕಿದ್ದ ಸಹಜ ಸಂಬಂಧಗಳು ಅತ್ಯಂತ ಹೀನ ಕಾಮುಕ ರಕ್ಕಸರಾಗಿರುವ ಹಲವಾರು ಪ್ರಕರಣಗಳನ್ನು ಇಂದು  ಸಮಾಜದಲ್ಲಿ ನೋಡುತ್ತಿದ್ದೇವೆ. ಇವರ ಪಾಶವೀ ಕೃತ್ಯಗಳಿಂದ ಅಪ್ರಾಪ್ತ ವಯಸ್ಕ ಹೆಣ್ಣು ಶಿಶುಗಳು ಮತ್ತು ಗಂಡು ಶಿಶುಗಳು ಹಾಗೂ ಮಹಿಳೆಯರನ್ನು ರಕ್ಷಿಸಬೇಕಾಗಿದೆ. ಸುರಕ್ಷತೆಯನ್ನು ಕಲ್ಪಿಸುವಲ್ಲಿ ಸಮಾಜ ಮತ್ತು ಕಾನೂನು ಹಾಗೂ ಪೋಲೀಸ್ ವ್ಯವಸ್ಥೆಯು ಬಲಗೊಳ್ಳಬೇಕಾಗಿದೆ. ಅದು ಬೇರೆಯದೇ ಚರ್ಚೆಯಾಗುತ್ತದೆ.
     ನಮ್ಮ ಸಮಾಜದ ಬಹುತೇಕ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಮತ್ತು ಆಗುತ್ತಿದ್ದಾರೆ. ಈ ಪ್ರಸಂಗಗಳಲ್ಲಿ ನಾವೆಲ್ಲರೂ ಜಾಣಮೌನದ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದೇವೆ. ಅಧಿಕಾರದ ರಾಜಕಾರಣಕ್ಕೆ ಬಲಿಯಾಗುವವರಿಗಿಂತಲೂ ಹೆಚ್ಚು ಜನರು ಮೌನದ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲಿಯೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿಷಯದಲ್ಲಿಯಂತೂ ಧರ್ಮ, ರಾಜಕಾರಣ ಮತ್ತು ವ್ಯವಸ್ಥೆ ಮೌನವಹಿಸಿ ಆ ದೌರ್ಜನ್ಯ ಮುಂದುವರಿಯುವಂತೆ ಮತ್ತು ದೌರ್ಜನ್ಯಕ್ಕೊಳಗಾದವರ ಕೂಗು ಯಾರಿಗೂ ಕೇಳಿಸದಂತೆ ಹಾಗೂ ಅವರ ನೋವು ಮತ್ತು ಯಾತನೆ ಯಾರಿಗೂ ತಟ್ಟದಂತೆ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ದೌರ್ಜನ್ಯವನ್ನು ಎಸಗುವವರು ಯಾರ ಅಂಕೆಗೂ ಸಿಗದಂತೆ ಯಾವ ಶಿಕ್ಷೆಗೂ ಒಳಗಾಗದಂತೆ ನೋಡಿಕೊಳ್ಳುತ್ತದೆ. ಬಲಿಯಾದವರೇ ದೌರ್ಜನ್ಯವೆಸಗಲು ಕಾರಣಕರ್ತರು, ಎಂದು ಇಲ್ಲದ ನೆಪಗಳನ್ನು ಸೃಷ್ಟಿಸಿ ನಿರೂಪಿಸುತ್ತದೆ. ದೌರ್ಜನ್ಯಕ್ಕೆ ಬಲಿಯಾದವರನ್ನೇ ಶಿಕ್ಷಿಸುತ್ತದೆ. ಅಷ್ಟೇ ಅಲ್ಲದೆ ದೌರ್ಜನ್ಯಕ್ಕೆ ಒಳಗಾದವರ ಪರ ನಿಂತವರನ್ನು ಅಪಮಾನಕಾರಿ ಹೆಸರುಗಳಿಂದ ಕರೆಯುತ್ತದೆ ಮತ್ತು ಶಿಕ್ಷಿಸುತ್ತದೆ.
     ಅತ್ಯಾಚಾರದ ವಿಷವರ್ತುಲ ವರದಿಯಾಗುವಷ್ಟು ತೀವ್ರತೆಯಿಂದ ಲೈಂಗಿಕ ದೌರ್ಜನ್ಯಗಳು ವರದಿಯಾಗುತ್ತಿಲ್ಲ. ಲೈಂಗಿಕ ದೌರ್ಜನ್ಯದಿಂದ ಸಂರಕ್ಷಣೆ ನೀಡಬೇಕಾದ ಕಾನೂನು ಮತ್ತು ಅದರ ವ್ಯಾಖ್ಯಾನವು ಬಲಿಷ್ಠವಾಗಬೇಕಿದೆ. ಹೀಗೆ ಈ ವಿಷಯದ ಸುತ್ತಮುತ್ತ ಅಲೆದಾಡುತ್ತಿರುವಾಗ ನನ್ನ ಮನಸ್ಸು ಎಲ್ಲಿಯೋ ಸಿಕ್ಕಿ ಹಾಕಿಕೊಂಡು, ಕಳಚಿಕೊಳ್ಳಲು ಸಾಧ್ಯವಿಲ್ಲದೆ ಕಂಬನಿ ಮಿಡಿಯುತ್ತಿದೆ. ಆ ಅಶ್ರುಬಿಂದುಗಳಿಂದ ಕೂಡಿದ ಮಂಜಾದ ಕಣ್ಣುಗಳೆದುರು ಅಸ್ಪಷ್ಟವಾದ ಮೋರೆ ಮತ್ತು ಬಾಗಿದ ನಖಗಳಿಂದ ಕೂಡಿದ ರೋಮಭರಿತ ಕೈಗಳು ಕಂಡುಬರುತ್ತವೆ. ಅತ್ಯಂತ ಸುರಕ್ಷಿತ ಮತ್ತು ಸಂತೋಷದಾಯಕ ಬಾಲ್ಯವನ್ನು ನೀಡಿದ ನನ್ನ ತಂದೆತಾಯಿಯರಿಗೆ ನನ್ನ ವಂದನೆಗಳು ಆದರೆ ಆ ಸುರಕ್ಷತೆಯ ನಡುವೆ ಕೂಡ ಮೂಡ ಬಹುದಾದ ದುರಾಕ್ರಮಣಗಳು ಇಂದು ಕಣ್ಣೆದುರಿಗೆ ರಾಚುತ್ತಿವೆ. ಸೈಕಲ್‍ನಲ್ಲಿ ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುವ ಮನೆಯಾಳು, ಚಾಕೊಲೇಟ್ ನೀಡಿ ಪ್ರೀತಿಯ ಮಳೆಗರೆಯುತ್ತಿದ್ದ ನೆರೆಹೊರೆಯ ಅಂಕಲ್‍ಗಳು ,ಅಧ್ಯಾಪಕರು ಮೊದಲಾದವರ ಅತ್ಯಂತ ಅಸಹ್ಯ ಆಕ್ರಮಣಗಳ ನಡುವೆ ಇದನ್ನು ಯಾರೊಂದಿಗೂ ಅಂದರೆ ತಾಯಿಯೊಂದಿಗೂ ಹೇಳಿಕೊಳ್ಳಲಾಗದ ನಾಚಿಕೆ ಮತ್ತು ಭೀತಿಯ ಅಡಿಯಲ್ಲಿ ನರಳಿ ನೀರವವಾಗಿ ರೋದಿಸುತ್ತಿರುವ ಮಗುವೊಂದು ನನ್ನೆದೆಯ ಆವರಣದಲ್ಲಿ ಮುಖ ಮುಚ್ಚಿ ಕುಳಿತಿದೆ. ಆ ಮಗು ಯಾರಾಗಿರಬಹುದು?  ಹೇಳಿಕೊಳ್ಳಲಾಗದ ಈ ಹಿಂಸೆಯಿಂದ ಮತ್ತು ಅವಮಾನದ ಭಾವದಿಂದ  ಮೌನವಾಗಿ ನರಳುತ್ತಿರುವ ಈ ಸಮಾಜದ ಅಸಂಖ್ಯ ಹೆಣ್ಣು ಕೂಸು, ಗಂಡು ಕೂಸು ಮತ್ತು ಮಹಿಳೆಯರಾಗಿರಬಹುದೇ? ಇದಕ್ಕೆ ಪರಿಹಾರವೇನು?

No comments:

Post a Comment