Tuesday 5 August 2014

ಜೀವ ವಾಹಿನಿ


ಜೀವ ವಾಹಿನಿ
ಸೂರ್ಯನಿಗೆ ಕಂಬಳಿ  ಹೊದಿಸಿ
ಜಗವ ಕತ್ತಲ ಕಿನಾರೆಗೆ ದೂಡಿದವರು ,
ಅಂದು ಹೊರತೆಗೆದಿದ್ದರು
ಶಿಲಾಯುಗದ ಆಯುಧಗಳನು

ಮನುಷ್ಯ ಅಲ್ಲಿಯೇ ಇದ್ದಾನೆ
ಗುಹೆಯಲಿ ಅಥವ ಏಕಕೋಶಜೀವಿ
ಅಮೀಬಾದಂತೆ ಒಂಚೂರು ಕೂಡ
ಬದಲಾಗಿಲ್ಲ  ಇಂದಿಗೂ

ಅಲ್ಲಲ್ಲಿ ಅಂಟಿರುವ ಒಂದಿಷ್ಟನ್ನು
ಬಿಟ್ಟರೆ ಉಳಿದೆಲ್ಲಾ ರೋಮಗಳು ಮಾತ್ರ
ಉದುರಿವೆ ; ಕಾರಿರುಳು ನಗುತಿದೆ
ಬಿಳಿ ಗಸಗಸೆಹೂವಿನಂತೆ 

ಕೋರೆ ದಾಡಿ ಬಾಗಿದ ನಖಗಳು
ಬಂಡೆಗಳಡಿ ಬೇರು ಬಿಟ್ಟ
ಕಲ್ಲೇಡಿಗಳಂತೆ ಅಪಮಾನಿತ ಅಡಿಪಾಯಗಳು
ಅಂಗಾತ ಬಿದ್ದರೂ ಕಹಳೆಯೂದುವಂತೆ



ಸಂಜೆ ಸಮಯದ ಹಕ್ಕಿಗಳು ಚೀರುತಾ
ರೆಕ್ಕೆಗಳ ಹರಡಿ ಆದರ್ಶದ ಆಕಾಶದಲಿ ತೇಲುತಾ
ಸಾಗಿದಾಗ, ಬಾಲಚಂದ್ರನಿಂದ ಪೂರ್ಣ ಚಂದ್ರನವರೆಗಿನ
 ಅಸಂಬದ್ಧ ಅನರ್ಥಗಳಿಗೆ ದಿಗಿಲುಗೊಂಡು
ತನ್ನ ತಡಿಕೆ ಬಾಗಿಲ ಸರಿಸುವಾಗ

ತೊಟ್ಟು ಕಳಚಿದ ತೊಗಲ ತೆಕ್ಕೆಯ
ಬೆರಗಿನಲಿ ಮುಚ್ಚಿದ ಕೆಂಡಗಳು ಮಿನುಗಿದಾಗ   
ಬೋಗುಣಿಯ ತುಂಬಾ ಬಂದಳಿಕೆ, ಬೆಸೆದುಕೊಂಡ
ಬೂದಿಯಂಕಣಕೆ  ಸರ್ಪಗಮನದ ಸೂತಕ


ಸಂಕೇತಗಳು ಯಾವುದಾದರೇನು
ಸೂರ್ಯನಿಗೊಂದು ಚಂದ್ರನಿಗೊಂದು
ವಂಶವಿದ್ದಾಗ ? ತಾರೆ ನಿಹಾರಿಕೆಗಳು
ಪಥಭ್ರಷ್ಟರಾಗಿ ಹಾರುವ ಹಕ್ಕಿಗಳಾದಾಗ
ನೆಪವೊಂದು ಮಾತ್ರ ಬೇಕಷ್ಟೇ

ಅಡ್ಡಹೊಳೆಯ ಅಂಚಿನಲಿ
ಅಲೆಮಾರಿ ಜಾನುವಾರು
ಅನಾಮಧೇಯ ಋತುಮಾನಗಳ
ಒಜ್ಜೆಯಡಿ ಕುಸಿದ ಒಗರು ಒಡಲು


ಕಾಡುವ ನೆಲದ ಅಜ್ಞಾತ ಚಾರಣದಲಿ
ಕಾಮನ ಕಣಿವೆಯ ಕೊರಕಲನು ದಾಟಿದ
 ಗಾಳಿಕುದುರೆಯನೇರಿ ಬಂದ ಕಿರುಗತೆಗೆ
ತೊತ್ತಳ ತುಳಿತದಲಿ ನಂಜೇರಿತೇ ?

ಜೋಳಿಗೆಯ ತುಂಬಾ ಜೋಗುಳ
ಮುಳ್ಳುಬೇಲಿಗೆ ಆಹುತಿಯಾದ
ಸೆರಗು , ಬೇರಿನ ದಾಹಕೆ  ಸತ್ತ
ಕಡಲಿನ ಅವಶೇಷದ ಅಪಗತೆ


ಉನ್ಮತ್ತರು ಉಪ್ಪರಿಗೆಯನ್ನೇರಿದ್ದಾರೆ
ಗೋರಿ ಮತ್ತು ಸಮಾಧಿಗಳ ಗುತ್ತಿಗೆ
ಹಿಡಿದವರ ಕೆನ್ನಾಲಗೆಯ ಕಲರವದೊಡನೆ
ದಿಬ್ಬಣ ಹೊರಟವರು ದಿನಕೊಂದಿಷ್ಟು
ಸಾಯುತ್ತಾ ನೆಲಕಚ್ಚಿದರೂ
ನೋವಿನ ಬಣ್ಣದ ಕಂಬನಿಯ ಕುರುಹು
ಕಂಡರೂ ಬಾಳ ಬಾಗಿನ
ಸಾಲು ಇರುವೆಯ ಜೀವವಾಹಿನಿಯಂತೆ.


















No comments:

Post a Comment