Sunday 10 May 2015

ಮೇಣದ ಬತ್ತಿಯ ಬೆಳಕು


ಇದು ಹೀಗೆಯೇ ಆಗುವುದೆಂದು ನನಗೆ ಗೊತ್ತಿತ್ತು
ಕೋಲಾಹಲಗಳು ಸಮೃದ್ಧಿಯ ಸಂಕೇತವಲ್ಲವೆಂದು
ನೀವು ಅಲವತ್ತುಗೊಂಡರೂ ಮುಖವಾಡಗಳು
ಬಣ್ಣ ಕಳಚಿ ಬೀಳಲೇ ಬೇಕಲ್ಲಾ !

ಸುತ್ತು ಬಳಸು ಸಾಕಿನ್ನು ನೇರ
ವಿಷಯಕೆ ಬಾ ಎನ್ನುವಿರಿ
ಎಷ್ಟು ಸಾರಿ ಬರಬೇಕು ?
ನಿರ್ಭಯಾ ನಿರ್ಭಯಾ ಎಂದು
ಕೂಗುತಲಿದೆ ಬಂಧನದ ಹಕ್ಕಿ
ಮೇಣದ ಬತ್ತಿಗಳ ಬೆಳಕ ನಂದಿಸಲು
ಎಷ್ಟು ಹೊತ್ತು?

ಶಕ್ತಿ ಮಿಲ್ಸ್‍ನ ಅವಶೇಷಗಳ ಅಂಚಿನಲಿ
ಅಲೆಮಾರಿ ಜಾನುವಾರುಗಳು ಉರಿಬಿಸಲಿನ
ಬೇಹುಗಾರಿಕೆಗೆ ನಡು ಹಗಲಿನ ಅಮಾವಾಸ್ಯೆ
ಪುಡಿ ರಕ್ಕಸರ ಕಾಲ್ತುಳಿತದಡಿ ಕರಗಿ ಹೋದ
ಜೀವದುಂಬಿದ ಹಸಿ ಮಣ್ಣು

ಶಾಂತಂ ಪಾಪಮ್ ಅನಬೇಡಿ
‘ಅವರಿಗೆ’ ತೀವ್ರ ಅನಾರೋಗ್ಯ
ಪಾಪ! ಅವರಿಗೇ ಗೊತ್ತಿರಲಿಲ್ಲ
ತಾವು ರೋಗದ ಗೂಡೆಂದು
ನೀರಿಲ್ಲದ ಮಾಗಿಯ ಮೋಡವೆಂದು
ಪತನ ಹೊಂದಿದ ಬೂದಿಯಂಕಣವೆಂದು

ಕೂಗಿ ಕೂಗಿ ಹೇಳುತ್ತಿದ್ದಾರವರು
ಅವರ ಎಲ್ಲಾ ಪಾಟ್ರ್ಸಗಳೂ ಶಿಥಿಲ
ಜೀವಚ್ಛವವೆಂದು . . .ನಾನಲ್ಲ
ಅವರೇ ಸರ್ಟಿಫಿಕೇಟ್ ಒದಗಿಸುತ್ತಿದ್ದಾರೆ
ಬೇಟದಾಟದ ಬಿಸಿಲುಗುದುರೆ ಏರಿ
ಬ್ಯಾಂಡು ಬಾಜಾ ಇಲ್ಲದ ಬೀಜಪ್ರಸಾರ

ಗೆಲ್ಲಿನ ತುಂಡು ಒಂದಿಷ್ಟು ಚಿಗುರಿ
ನಿಮಿರಿದರೂ ಬೆರಳ ಮೇಲೆ ಎಣಿಕೆ
ನಿಮ್ಮ ಲೆಕ್ಕಾಚಾರಕ್ಕಿಷ್ಟು ಬೆಂಕಿ ಬೀಳ

ಮೊದಲು ಹೀಗಿರಲಿಲ್ಲಾ
ಜಿಮ್ ಪ್ರೇರಿತ ಒಳ್ಳೆಯ ಆರೋಗ್ಯ
ಹೈ ಸ್ಟೇಟಸ್ ಮುಗುಳುನಗೆಯ ಪ್ರಭೆ
ಎಲ್ಲಾಇತ್ತು ನೋವಿನ ನಿಶಿದ್ಧ ಕಾರ್ಯ ಕೂಡಾ
ನಿಲುವಂಗಿಯಮರೆಯಲಿ ನೆಲ ಕಚ್ಚುತ್ತಿತ್ತು
ನಿಡು ದಾರಿ  ಎಗ್ಗಿಲ್ಲದೆ ನೇವರಿಸುತ್ತಾ ಸಾಗುತ್ತಿತ್ತು.

ಅವರ ಮೇಲೆ ಎಫ್‍ಐಆರ್ ಆಯ್ತಲ್ಲಾ
ಕೂಡಲೇ ಎದೆ ಹಿಡಿದುಕೊಂಡರು
ಪಾಪದ ರುಚಿ ಹತ್ತಿದ್ದ ಬೂದಿ
ಮುಚ್ಚಿದ ಕೆಂಡಗಳು ಮಿನುಗಿದವು
ಮೊದಲೇ ಟೈಗಂಟನ್ನು ಬಿಗಿಯಾಗಿ ಕಟ್ಟಿದ್ದಲ್ಲಿ
ಈ ಗತಿಯಾಗುತ್ತಿರಲಿಲ್ಲ

ಈಗ ಸರ್ಕಾರಿ ಆಸ್ಪತ್ರೆಯ ಹೈಪೈ ವಾರ್ಡಿನ
ಸ್ಪೆಷಲ್ ಹಾಸಿಗೆಯಲಿ ಪವಡಿಸುತಿದಾರೆ
ಎಲ್ಲಾ ಪ್ರಕ್ರಿಯೆಗಳು ಮಲಗುವವರೆಗೂ
ಅವರು ಎದ್ದೇಳಲ್ಲಾ !

No comments:

Post a Comment