Sunday 10 May 2015

ವಾಚನಾಭಿರುಚಿ ಕಮ್ಮಟ

                                       ಅತ್ಯಂತ ವೇಗದ ಬದುಕಿನ ಒತ್ತಡಕ್ಕೆ ಅನಗತ್ಯವಾಗಿ ಸಿಲುಕಿ ‘ನಮಗೆ ಟೈಮ್ ಇಲ್ಲಾ’ ಎಂಬ ಮಂತ್ರವನ್ನು ಬಾಯಿಪಾಠ ಮಾಡಿಕೊಂಡು ಎಲ್ಲೆಂದರಲ್ಲಿ ಢಿಕ್ಕಿ ಹೊಡೆಯುತ್ತಿರುವ ನಮ್ಮ ಹುಚ್ಚು ಆವೇಗಕ್ಕೆ ಎಲ್ಲವನ್ನೂ ನಾಶ ಮಾಡುವ ಶಕ್ತಿ ಇದೆ ಅಂತ ನನಗನಿಸಿದ್ದು ಇತ್ತೀಚೆಗೆ ಹೊಸನಗರದಲ್ಲಿ ವಾಚನಾಭಿರುಚಿ ಕಮ್ಮಟದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ . ಶಿವಮೊಗ್ಗದ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನನಗೆ ಅನೇಕ ಸಾರಿ ಆಹ್ವಾನ ಬಂದರೂ ಕೂಡಾ ಆಗೆಲ್ಲಾ ವಿಚಿತ್ರ ಅಡಚಣೆಗಳು ಅಡ್ಡಿ ಬರುತ್ತಿದ್ದು , ಅಲ್ಲಿಗೆ ಹೋಗಲಾಗುತ್ತಿರಲಿಲ್ಲ .  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಜುನಾಥ್ ಮತ್ತು ಕಲೀಮುಲ್ಲಾ ರವರು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯೋಜಿತವಾದ ಮೇಲ್ಕಂಡ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದಾಗ ನನಗೆ ಯಾವ ಅಡಚಣೆಯೂ ಇರಲಿಲ್ಲ . ನಾನೇ ಯಾವುದಾದರೂ ಕೃತಕ ಅಡಚಣೆಯನ್ನು ಸೃಷ್ಟಿಸಿಕೊಳ್ಳಬೇಕಿತ್ತು . ಆದರೆ ಹಾಗೆ ಮಾಡಲು ಮನಸಾಗಲಿಲ್ಲ . ಒಳ್ಳೆಯದಾಯಿತು ; ಇಲ್ಲವಾದಲ್ಲಿ ಅತ್ಯಂತ ಪ್ರಶಾಂತ ಮತ್ತು ನೆಮ್ಮದಿಯ ಪರಿಸರದ ನಡುವೆ ಸರಳವಾಗಿ ನಡೆದ ವಿಭಿನ್ನ ಕಾರ್ಯಕ್ರಮವನ್ನು ಆಸ್ವಾದಿಸುವ ಅವಕಾಶ ನಾನು ಹುಡುಕಿ ಕೊಂಡು ಹೋದರೂ ನನಗೆ ಸಿಗುತ್ತಿರಲಿಲ್ಲ .
             ಆರಂಭದಲ್ಲಿ  ಶಿವಮೊಗ್ಗ ನಗರದಲ್ಲಿಯೇ ಅಂತ ನಾನು ತಿಳಿದಿದ್ದ ಕಾರ್ಯಕ್ರಮವು ಹೊಸನಗರದಲ್ಲಿ ನಡೆಯುತ್ತಿದೆ ಎಂದು ನನಗೆ ತಿಳಿದು ಬಂದಿದ್ದು ಕೆಲವು ದಿನಗಳ ನಂತರ ಕಲೀಮುಲ್ಲಾ ಬಹಳ ನಯ ನಾಜೂಕಿನಿಂದ ಸದರಿ ಕಾರ್ಯಕ್ರಮವು ಹೊಸನಗರದಲ್ಲಿ ನಡೆಯುತ್ತಿದೆ ಎಂದು ಹೇಳಿದಾಗ . ‘ಅದೆಲ್ಲಿದೆ ?’ ಎಂದು ಕೇಳಿದೆ., ‘ಶಿವಮೊಗ್ಗಕ್ಕೆ ಸಮೀಪ . . . ಒಂದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ತಗಲುತ್ತೆ’ ಎಂದು ಹೇಳಿ ಮತ್ತೆ ಮುಂದುವರೆಸಿ ‘ಹಾಲಿ ಸುದ್ದಿಯಲ್ಲಿದೆಯಲ್ಲಾ ರಾಮಚಂದ್ರಪುರ ಮಠ  . . . ಅದೇ ರಾಘವೇಂದ್ರ ಸ್ವಾಮಿಯವರ ಮಠ . . . ಅದರ ಸಮೀಪ. ನಿಮಗೆ ಲ್ಯಾಂಡ್ ಮಾರ್ಕ್ ಹೇಳಿದೆ ಅಷ್ಟೇ ’ ಎಂದು ಮಗುಮ್ಮಾಗಿ ತಿಳಿಸಿದಾಗ ನಾನು ಬಹಳ ಸರಳವಾಗಿ ಅವರ ಮಾತನ್ನು ನಂಬಿದೆ.  ಆ ನಂತರ ಆ ಬಗ್ಗೆ  ಸುದ್ದಿಯೂ ಇಲ್ಲಾ ಮತ್ತು ಆಹ್ವಾನ ಪತ್ರಿಕೆಯೂ ಇಲ್ಲಾ . ಏಪ್ರಿಲ್ 26 ಎಂದು ನಾನು ಡೈರಿಯಲ್ಲಿ ಗುರುತು ಹಾಕಿದ ನೆನಪು . ಹೀಗಾಗಿ ನಾನು ಆತಂಕ ಮತ್ತು ಸಂತೋಷದ ನಿರೀಕ್ಷೆಯಲ್ಲಿ (ಸಂತೋಷ ಏಕೆಂದರೆ ಕಾರ್ಯಕ್ರಮ ರದ್ದಾಗಿದ್ದಲ್ಲಿ ನನ್ನ ಪಾಡಿಗೆ ನಾನು ಇರಬಹುದಲ್ಲಾ ಅಂತ ಅಂದರೆ ಕಾರ್ಯಕ್ರಮ ಪೂರ್ವ ವೇದನೆಗಳಿಂದ ಬಿಡುಗಡೆ ಪಡೆಯುವ ಖುಷಿ)ನಾನೇ ಖುದ್ದು ಫೋನ್ ಮಾಡಿ ‘ ಕಾರ್ಯಕ್ರಮ ಏನಾದರೂ ಕ್ಯಾನ್ಸಲ್ ಆಯಿತಾ ?’ಅಂತ ವಿಚಾರಿಸಿದರೆ , ನನ್ನ ಉತ್ಸಾಹವನ್ನು ಚಿವುಟಿ ಹಾಕಿದ ಕಲೀಮುಲ್ಲಾ ‘ಇಲ್ಲಾ. . .ಇಲ್ಲಾ  . . . ಕಾರ್ಯಕ್ರಮ ಖಂಡಿತವಾಗಿಯು ಇದೆ. ಈವೊತ್ತೇ ನಾನು ನಿಮಗೆ ಆಹ್ವಾನ ಪತ್ರಿಕೆಯನ್ನು ವಾಟ್ಸ್‍ಅಪ್‍ನಲ್ಲಿ ಕಳಿಸುತ್ತೇನೆ  ’ಎಂದು ಭರವಸೆಯನ್ನು ನೀಡಿ,
     ಇಷ್ಟೆಲ್ಲಾ ನಡೆಯುವ ವೇಳೆಗೆ ಹಿಂದಿನ ದಿನ ಹಾಜರಾದ ನಮ್ಮ ಕಾರಿನ ಚಾಲಕ ಸುಮಾರು ಹನ್ನರಡು ವರ್ಷ ವಯಸ್ಸಿನ ತನ್ನ ಮಗನ ಕೈ ಹಿಡಿದುಕೊಂಡು ಬಂದ. ಅವನು ಬಂದ ವರಸೆಯಲ್ಲಿಯೇ ನನಗೆ ‘ಏನೋ ದಾಲ್ ಮೇ ಕಾಲಾ ’ಇದೆ ಅಂತ ಅನಿಸತೊಡಗಿತು . ಈ ಕಾರ್ಯಕ್ರಮದ ಬಗ್ಗೆ ನಾನು ಅವನಿಗೆ ಸುಮಾರು ಒಂದು ತಿಂಗಳಿನಿಂದ ಪ್ರತಿ ಎರಡು ದಿನಕ್ಕೊಮ್ಮೆ ನೆನಪಿಸುತ್ತಿದ್ದೆ ಹಾಗೂ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳ ಬಾರದೆಂದು ತಾಕೀದು ಮಾಡುತ್ತಿದ್ದೆ. ಅವನು ಬಂದು ವಿಪರೀತ ವಿನಯವನ್ನು ಪ್ರದರ್ಶಿಸುತ್ತಾ  ತನ್ನ ಪತ್ನಿಯ ಸಂಬಂಧಿಗಳ ಮದುವೆ ಧಿಡೀರ್ ಅಂತಾ ನಿಗದಿಯಾಗಿದೆ. ಸಕುಟುಂಬ ಸಪರಿವಾರ ಸಮೇತ ತಾನು ಹೋಗದೆ ಇದ್ದಲ್ಲಿ , ತನ್ನ ಮರ್ಯಾದೆ ಹೋಗುವುದಂತೂ ಗ್ಯಾರಂಟಿ ಆದರೆ ಅದರ ಜೊತೆಯಲ್ಲಿ ಹೆಂಡತಿ ಕೂಡಾ ಶಾಶ್ವತವಾಗಿ ತನ್ನನ್ನು ತೊರೆದು ಹೋಗಬಹುದೆಂಬ ಭೀತಿ ತನಗಿದೆಯೆಂದು ಮನ ಮಿಡಿಯುವಂತೆ ಹೇಳಿದಾಗ ನನಗೂ ಒಳಗೊಳಗೆ ಭಯ ಆರಂಭವಾಯಿತು . ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಒಂದು ಮನೆಯನ್ನು ಮುರಿಯುವ ಸಾಧ್ಯತೆ ಇರುವುದನ್ನು ಮನಗೊಂಡು ,ನನ್ನ ಬಗ್ಗೆ ನನಗೇ ತಿರಸ್ಕಾರ ಶುರು ಆಯಿತು . ವಕೀಲಳಾಗಿಯೇ ಸಾಕಷ್ಟು ವಿಚ್ಛೇದನಗಳ ಮಿಥ್ಯಾರೋಪಗಳಿಂದ ಬಳಲಿ ಹೋಗಿರುವ ನಾನು ಮತ್ತೆ ರಿಸ್ಕ್ ತೆಗೆದುಕೊಳ್ಳುವುದು ಸೂಕ್ತವಲ್ಲವೆಂದು ತೀರ್ಮಾನ ಮಾಡಿದೆ.ಮತ್ತೆ ಸಾಕ್ಷಿ ನುಡಿಯುವ ಸಲುವಾಗಿ ತನ್ನ ಮೈನರ್ ಮಗನನ್ನೂ ಕೂಡಾ ಜೊತೆಗೆ ಕರೆ ತಂದಿದ್ದಾನೆ.  ಹೀಗಾಗಿ ನಾನೇನೂ ಮಾತನಾಡದೆ , ಅವನನ್ನೇ ನೋಡುತ್ತಾ ಆಲೋಚನೆ ಮಾಡುವ ಸಲುವಾಗಿ ಒಂದು ಸಾರಿ ಕತ್ತನ್ನು ಬಲಗಡೆ ತಿರುಗಿಸಿದ್ದೇ ಮಹಾ ಸಂಕೇತ ಅಂತ ಪರಿಭಾವಿಸಿಕೊಂಡು  , ‘ನಾನು ಹೇಳಲಿಲ್ಲವಾ ? ದೀದೀ ( ಅಂದರೆ ನಾನು) ಅಂತಾ ಕೆಟ್ಟ ಹೆಂಗಸು ಅಲ್ಲಾ ಅಂತಾ . .  ನಿನ್ನ ತಾಯಿ ನಂಬುವುದೇ ಇಲ್ಲವಲ್ಲಾ ’ಎಂದು ಹೇಳುತ್ತಾ  ಕಣ್ಣೊರೆಸಿಕೊಂಡು ಮಗನ ಕೈಹಿಡಿದು ನಿಧಾನವಾಗಿ ನಡೆದು ಹೋದ. . . . . . ತನ್ನ ರಜೆಯನ್ನು ತಾನೇ ಸ್ಯಾಂಕ್ಷನ್ ಮಾಡಿಕೊಂಡ ಗೆಲುವಿನಲ್ಲಿ . ನನಗೆ ಮತ್ತೊಮ್ಮೆ ಕೆಟ್ಟ ಸಂತೋಷವಾಯಿತು .ಇದೀಗ ನನಗೆ ನಿಜವಾಗಿಯೂ ಸದವಕಾಶ . ನೆನಪಿರಲಿ ಅದು ನೆಪವಲ್ಲ .ಇಟ್ ಈಸ್‍ಎ ವ್ಯಾಲಿಡ್ ರೀಝನ್’ ಎಂದು ನನಗೆ ನಾನೇ ಸಮಾದಾನ ಪಡಿಸಿಕೊಂಡು ಕಲೀಮುಲ್ಲಾಗೆ ಮತ್ತು ಮಂಜುನಾಥ್‍ಗೆ ಫೋನ್ ಮಾಡಿ ನನ್ನ ತೊಂದರೆಯನ್ನು ಮನ ಮಿಡಿಯುವಂತೆ ಸಾದರ ಪಡಿಸಿ ಆ ಕಾರ್ಯಕ್ರಮದಿಂದ ಕೈ ತೊಳೆದುಕೊಳ್ಳೋಣವೆಂದು ನಿರ್ಧರಿಸಿದೆ.
      ಬದಲಿಗೆ ಫೋನ್ ಮಾಡಿದ್ದು ಬಸವರಾಜ್ ಎಂಬ ನಮ್ಮ ಆಪತ್ಬಾಂಧವನಿಗೆ . ಹೀಗೆ ಹೀಗೆ ಆಗಿದೆ. ‘ಶಿವಮೊಗ್ಗಕ್ಕೆ ಹೋಗಲು ಒಂದುಟ್ರೇನ್ ಟಿಕೆಟ್ ಬುಕ್ ಮಾಡಿಸಿ ಕೊಡಪ್ಪಾ ’ ಎಂದು ಕೇಳಿದರೆ ಆತ ನಕ್ಕು ಬಿಟ್ಟ. ಮತ್ತು ಹಾಸನದಿಂದ ಎಲ್ಲಿಗೂ ಟ್ರೇನ್ ಅನುಕೂಲತೆ ಇಲ್ಲದಿರುವ ವಿಷಯ ನನಗೆ ಸ್ವತಃ ಅನೇಕ ವರ್ಷಗಳಿಂದ ಗೊತ್ತಿದ್ದರೂ ಜನ ಸಾಮಾನ್ಯರ ತೊಂದರೆಗೆ ನಾನು ಸ್ಪಂದಿಸದೆ , ಅಟ್ ಲೀಸ್ಟ್ ಒಂದು ಲೇಖನವನ್ನಾದರೂ ಈ ಬಗ್ಗೆ ಬರೆಯದೆ,ಅತ್ಯಂತ ನಿರ್ಲಕ್ಷ್ಯಪೂರ್ವಕವಾಗಿ  ನಡೆದುಕೊಂಡಿರುವ ಬಗ್ಗೆ ಎತ್ತಿ ಆಡಿದ. ನಾನೇನೂ ಶಾಸಕಿಯಾಗಿರಲಿಲ್ಲ ಅಥವಾ ಪಾರ್ಲಿಮೆಂಟ್ ಸದಸ್ಯೆಯೂ ಆಗಿರಲಿಲ್ಲ . ಆದರೂ ಅವರೆಲ್ಲರ ಪರವಾಗಿ ನಾನು ಜವಾಬ್ದಾರಿಯನ್ನು ಹೊತ್ತುಕೊಂಡು ಸ್ವಲ್ಪ ಸಾಮಾಜಿಕ ಮುಜುಗರ ಮತ್ತು ನಾಚಿಕೆಯನ್ನು ತಂದುಕೊಂಡುಅದನ್ನು ವ್ಯಕ್ತ ಪಡಿಸಿದೆ. ಆದರೆ ಅವನು ನಿರ್ದಯವಾಗಿ ನಾನು ಕಾರಿನಲ್ಲಿ ಸುತ್ತಾಡುತ್ತಾ ಬಡವರನ್ನು ಮರೆತಿದ್ದು , ಈಗ ತೊಂದರೆಗೆ ಸಿಲುಕಿದ್ದರಿಂದ ಮಾತ್ರ ಅವನನ್ನು ನೆನಪಿಸಿಕೊಂಡಿದ್ದು ಕೂಡಾ ಒಳ್ಳೆಯ ಬೆಳವಣಿಗೆಯಲ್ಲಾ ಎಂದು ನನಗೆ ಮನದಟ್ಟು ಮಾಡಿದ. ಹೀಗೆ ಆರೋಪಗಳು ನನಗೆ ಸುತ್ತಿಕೊಳ್ಳುತ್ತಿರುವುದನ್ನು  ಕಂಡು ನನಗೆ ಗಾಬರಿಯಾಗಿ ‘ಹೋಗಲಿ ನನ್ನ ಕಾರಿಗೆ ಯಾರಾದರೂ ಬದಲಿ ಡ್ರೈವರ್ ಆಗಿ ಒಂದು ದಿನ ಮಾತ್ರ ಕೆಲಸಕ್ಕೆ ಬರಲು ಸಾಧ್ಯವೇ ’ ಎಂಬ ನನ್ನ ಪ್ರಶ್ನೆಗೆ ಒಲ್ಲದ ಮನಸ್ಸಿನಿಂದ ‘ಆಗಲಿ….  ನೋಡ್ತೀನಿ ’ ಎಂದಷ್ಟೇ ಹೇಳಿದ . ಆದರೆ ನನಗೆ ಒಳ ಮನಸ್ಸಿನಲ್ಲೇ ಜಾÐನೋದಯವಾದಂತೆಯೇ ಅವನು ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ .
               ಆದರೂ ಮರಳಿ ಪ್ರಯತ್ನ ಮಾಡು ಎಂಬಂತೆ ನನ್ನ ಫೋನಿನಲ್ಲದ್ದ ಹಲವಾರು ಚಾಲಕರ ನಂಬರಿಗೆ ಫೋನ್ ಮಾಡತೊಡಗಿದೆ. ಎಲ್ಲರೂ ಒಂದಲ್ಲ ಒಂದು ಚಾಲನೆಯಲ್ಲಿ ಸಕ್ರಿಯವಾಗಿ ತೊಡಗಿರುವರು ಎಂಬ ಉತ್ತರ ದೊರಕಿದ ನಂತರ ನನಗೆ ನನ್ನ ವೃತ್ತಿಯ ಬಗ್ಗೆ ಅಪನಂಬಿಕೆ ಮೂಡತೊಡಗಿತು . ನಾನಾದರೋ ಚಾಲಕ ವೃತ್ತಿಯ ಬಗ್ಗೆ ಯಾಕೆ ಒಂದು ಕೈ ನೋಡಬಾರದು ಎಂದು ಮೂಡಿದ ಆಲೋಚನೆಯನ್ನು  ಮೂಲದಲ್ಲಿಯೇ ಹೊಸಕಿ ಹಾಕಿ ಹದಿನೈದನೇ ಸಂಖ್ಯೆಯ ನಂಬರಿಗೆ ಫೋನ್ ಮಾಡಿದಾಗ ಆನಂದ ಬಾಷ್ಪ ಸುರಿಸುವುದೊಂದೇ ಬಾಕಿ . ‘ಬೆಳಿಗ್ಗೆ ಏಳು ಗಂಟೆಗೆ ಬರ್ತೀನಿ ಮೇಡಮ್’ ಎಂದು ಹೇಳಿದವ ಅದರಂತೆ ನಡೆದುಕೊಂಡ. ನಮ್ಮ ಪಯಣ ಶಿವಮೊಗ್ಗದತ್ತ ಸಾಗಿತು . ಬೆಳಗಿನ ಸುಖ ನಿದ್ರೆಯನ್ನು ತೊರೆದು ಬೆಳ್ಳಂಬೆಳಗ್ಗೆ ಹೊರಟ ನನಗೆ ಅಷ್ಟೇನೂ ಹಿತವೆನಿಸಲಿಲದಲ. ಹೀಗಾಗಿ ನಾನು ಹಿಂದಿನ ಸೀಟಿನಲ್ಲಿ ಮುದುಡಿಕೊಂಡು ಮಲಗಿ ಬಿಟ್ಟೆ. ಶಿವಮೊಗ್ಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯವರಾದ ಮಧುಸೂಧನ್ ತಮ್ಮ ಕಾರಿನಲ್ಲಿ ವಸುಧೇಂದ್ರರವರ ಜೊತೆಯಲ್ಲಿ ಕಾಯುತ್ತಿದ್ದರು . ನಮ್ಮ ಕಾರು ಹೈವೇಗೆ ಬಂದ ತಕ್ಷಣ ಹೊಸನUರ 80 ಕಿ. ಮೀ ಎಂಬ ಮೈಲಿಗಲ್ಲನ್ನು ಕಂಡ ತಕ್ಷಣ ,ನನಗೆ ಗಾಬರಿಯಾಯಿತು. ಆದರೆ , ವಸುಧೇಂದ್ರರೊಡನೆ ನಡೆದ ಮಾತುಕಥೆಯಲ್ಲಿ ಮತ್ತು ಮಧುಸೂದನರವರ ಸಂಯೋಜಿತ ಚಾಲನೆಯಲ್ಲಿ ನಮಗೆ ದೂರ ಕ್ರಮಿಸಿದ್ದೇ ತಿಳಿಯಲಿಲ್ಲ .
     ನಡು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ರಾಮಚಂದ್ರಾಪುರದ ಮಠದ ಗೋಶಾಲೆಯನ್ನು ದಾಟಿ ದಿಬ್ಬ ಹತ್ತಿ ಏರಿ ಇಳಿಯುತ್ತಾ ಕೊನೆಗೆ ಮುಟ್ಟಿದ್ದು ಗಣೇಶ ಮೂರ್ತಿಯವರ ತೋಟವನ್ನು . ಮಧುಸೂದನ್‍ರವರು ತೋಟದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದಾಗಲೇ ಇದೆಂಥ ವ್ಯವಸ್ಥೆ ಎಂದು ಕುತೂಹಲ ಗರಿಗೆದರಿತ್ತು. ತೋಟದೊಳಗೆ ಕಾಲಿಡುತ್ತಿದ್ದಂತೆ ಹಸನ್ಮುಖಿಯರಾದ (ಕೃತಕ ನಗೆಯ ಗಗನಸಖಿಯರಂತೆ ಅಲ್ಲ ) ಆಯುರ್ವೇದ ಕಾಲೇಜಿನ ವಿದ್ಯಾರ್ಥಿ / ವಿದ್ಯಾರ್ಥಿನಿಯರ ತಂಡ ಇನ್ನಷ್ಟು ಮತ್ತಷ್ಟು ತಿನ್ನಿ ಎಂದು ಒತ್ತಾಯದಿಂದ ನೀಡಿದ ಅದೇ ತೋಟದ ಕಲ್ಲಂಗಡಿ ಹಣ್ಣನ್ನು ತಿಂದು ಮಜ್ಜಿಗೆಯನ್ನು ಕುಡಿದು ವೇದಿಕೆಯತ್ತ ನಡೆದೆವು. ವಿಶಾಲವಾಗಿ ಹರಡಿದ್ದ ಬಸರಿ ಮರದ ಕೆಳಗೆ ಅವರೆಲ್ಲ ಸೇರಿದ್ದರು . ಅದರ ಬಲಿಷ್ಠ ಕೊಂಬೆಗಳು ಚಪ್ಪರದಂತೆ ಚಾಚಿದ್ದು ಎಲೆಗಳು ವಿರಳವಾಗಿದ್ದ ಕಡೆಗಳಲ್ಲಿ ಬಿಸಿಲು ಎದೆ ಸೆಟೆಸಿಕೊಂಡು ನುಸುಳಿ ಉದ್ಧಟತನವನ್ನು ಮೆರೆಯುತ್ತಿತ್ತು. ಉಳಿದಂತೆ ಆ ಮರ ಕೂಡಾ ಅಪಾರ ಸಂತೋಷದಿಂದ ಆಗಾಗ್ಗೆ ತಲೆಯಾಡಿಸುತ್ತಾ ಒಮ್ಮೊಮ್ಮೆ ಮುಗುಳು ನಗೆಯನ್ನು ಬೀರುತ್ತಾ ಮತ್ತೊಮ್ಮೆ ಗಜ ಗಾಂಭೀರ್ಯದಿಂದ ಸುತ್ತಲೂ ಅವಲೋಕಿಸುತ್ತಿತ್ತು. ನಮ್ಮನ್ನು ನೋಡಿ ಒಂದು ಕ್ಷಣ ತಡೆದು , ‘ಏ. . . ಯಾರಿದ್ದೀರಿ ಅಲ್ಲಿ ಅವರಿಗೊಂದು ಕುರ್ಚಿ ಹಾಕ್ರಪ್ಪಾ ’ ಎಂದಿತು . ಸುಮಾರು ನೂರಾಐವತ್ತು ಜನರಿರ ಬಹುದಾ ? ನಾನು ಸುತ್ತಲೂ ಕಣ್ಣಾಡಿಸಿ ಸರಸರನೆ ಲೆಕ್ಕ ಹಾಕಿದೆ. ನನಗೆ ಈ ರೀತಿಯ ಲೆಕ್ಕಾಚಾರವೇ ಅಭ್ಯಾಸವಾಗಿ ಬಿಟ್ಟಿದೆಯಲ್ಲಾ . . .ಛೇ  . . ಎಂತಾ ಹಾಳು ಮನಃಸ್ಥಿತಿ ಎಂದು ಹಳಿದುಕೊಂಡೆ. ಅಲ್ಲಿದ್ದವರೆಲ್ಲಾ ಸಾಹಿತ್ಯಾಸಕ್ತರಾಗಿದ್ದರು .ವಿದ್ಯಾವಂತರು , ಸಂಗೀತಗಾರರು, ಸಾಹಿತಿಗಳು ವಿದ್ಯಾರ್ಥಿಗಳು ಹಾಗೂ ಸಹೃದಯರ ಗುಂಪು ಅಲ್ಲಿ ನೆರೆದಿತ್ತು .ಅವರೆಲ್ಲಾ ಎಲ್ಲ ಹಮ್ಮುಬಿಮ್ಮುಗಳನ್ನು ತೊರೆದು ಅಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಆರಾಮವಾಗಿ ಕುಳಿತಿದ್ದರು . ಅಲ್ಲಿ ಕುಳಿತವರೊಡನೆ ನಾನು ಕೂಡಾ ಅವರಷ್ಟೇ ಆರಾಮವಾಗಿ ಕುಳಿತು ಮನದ ಗಂಟುಗಳನ್ನು ಸಡಲಿಸಿಕೊಂಡು ಹೊರೆಯನ್ನು ಕಿತ್ತೆಸೆಯೋಣವೆಂದೆನಿಸಿದರೂ ದೈಹಿಕ ಅನಾನುಕೂಲತೆಯ ದೆಸೆಯಿಂದ ಕುರ್ಚಿಯನ್ನೇ ಆಶ್ರಯಿಸ ಬೇಕಿತ್ತು . ಅಲ್ಲಿಗೆ ಬಂದ ತಕ್ಷಣ ನನ್ನ ಅನಾನುಕೂಲತೆಯನ್ನು ಗಮನಿಸಿ ಕುರ್ಚಿ ಹಾಕಲು ಆದೇಶ ಮಾಡಿದ ಮರದತ್ತ ತಿರುಗಿ ‘ಥ್ಯಾಂಕ್ಸ್ ’ಎಂದು ಒಂದು ಕಿರು ನಗೆಯನ್ನು ಬೀರೋಣವೆಂದು ಅದರತ್ತ ತಿರುಗಿದರೆ , ಎಲ್ಲೆಲ್ಲೂ ಆ ಮರವೇ ರಾರಾಜಿಸುತ್ತಿತ್ತು. ಮೇಲೆ ಕೊಂಬೆ ಕೊಂಬೆಗಳನ್ನು ಹರಡಿ ಶಿಸ್ತಿನ ಸಿಪಾಯಿಯಂತೆ ನಿಂತುಕೊಂಡಿತ್ತು .ಅಗೋ  ಅಲ್ಲಿ ನೋಡಿದರೆ  ಅಗಲವಾದ ಬಾಳೆ ಗಿಡದ ಕಾಂಡದ ಮೇಲೆ ಚಿಕ್ಕ ಕಾಂಡ ಅದರ ಮೇಲೆ ಮತ್ತೊಂದು ಚಿಕ್ಕ ಕಾಂಡ ಅದರ ಮೇಲೆ ಹಿತ್ತಾಳೆಯ ಪಾತ್ರೆಯಲ್ಲೊಂದು ದೀಪ ಬೆಳಗುತ್ತಿತ್ತು. ವೇದಿಕೆಯ ಬಲಭಾಗದಲ್ಲೊಂದು ಪೋಡಿಯಮ್ . ಬಾಳೆ ಕಂದುಗಳನ್ನು ಅರೆ ವೃತ್ತಾಕಾರದಲ್ಲಿ ಜೋಡಿಸಿ ನಾರಿನಿಂದ ಬಿಗಿ ಮಾಡಲಾಗಿತ್ತು . ಎರಡು ಎಳೆಯ ಈ ಕಂದುಗಳ ಮೇಲೆ ಕಲಾತ್ಮಕವಾಗಿ ಕಡ್ಡಿಗಳನ್ನು ಜೋಡಿಸಿ ಮೈಕ್, ಮೊದಲಾದ ವಸ್ತುಗಳನ್ನ ಇಡಲು ಸ್ಥಳಾವಕಾಶವನ್ನು ಮಾಡಲಾಗಿತ್ತು . ಡಾ. ಹಾಲಮ್ಮ ಲಂಕೇಶರ ಅವ್ವ-1 ಮತ್ತು ಅವ್ವ-2ರ ವಿಶ್ಲೇಷಣೆಯನ್ನು ತಮ್ಮದೇ ಲಹರಿಯಲ್ಲಿ ವಿಸ್ತøತವಾಗಿ ಮಾಡುತ್ತಿದ್ದರು .ಎಲ್ಲರೂ ಎಷ್ಟು ಆರಾಮವಾಗಿ ಕುಳಿತು ಕೇಳಿ ಸಂವಾದದಲ್ಲಿ ಭಾಗವಹಿಸುತ್ತಿದ್ದರೆಂದರೆ ನನ್ನ ಗ್ರಹಿಕೆಗೆ ನಿಲುಕದಷ್ಟು ಅವರೆಲ್ಲಾ ತಂಪಾಗಿದ್ದರು . ಬಹುಶಃ ನನ್ನ ಮರು ಪ್ರಯಾಣದ ಕುರಿತು ಆಗಾಗ್ಗೆ ಒಂದಿಷ್ಟು ಕಸಿವಿಸಿಯಾಗುತ್ತಿದ್ದುದು ನನಗೆ ಮಾತ್ರವೇನೋ .
           ಮಧ್ಯಾಹ್ನದ ಊಟಕ್ಕೆ ಸಿದ್ಧವಾಗಿದ್ದ ಅಡಿಗೆ ಸಹಜವಾಗಿಯೇ ಅಲ್ಲಿನ ಸಂಸ್ಕøತಿಯನ್ನು ಬಿಂಬಿಸುತ್ತಿತ್ತು .ಗಣೇಶ ಮೂರ್ತಿ ಮತ್ತು ಅವರ ಕುಟುಂಬವು ಎಲ್ಲರನ್ನು ಉಪಚರಿಸುತ್ತಾ ಮದುವೆ ಮನೆಯ ಗಂಡಿನವರಿಗಿಂತಲೂ ಹೆಚ್ಚಾಗಿ ಪ್ರತಿಯೊಬ್ಬರನ್ನೂ ಆದರಿಸುತ್ತಾ ಸ್ವತಃ ಹಸಿದ ಹೊಟ್ಟೆಯಲ್ಲಿದ್ದರೂ ಸಂತೃಪ್ತಿಯನ್ನು ಅನುಭವಿಸುತ್ತಿದ್ರು . ಇದೆಂತಹ ಸಾಹಿತ್ಯಸೇವೆ! ಅಥವಾ ಇದೇ ನಿಜವಾದ ಸಾಹಿತ್ಯಸೇವೆಯೇ. ಕನ್ನಡದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಚರ್ಚೆ ವಿಷಯ ನಿರೂಪಣೆ ಮೊದಲಾದವು ಇದ್ದೇ ಇರುತ್ತವೆ. ಆದರೆ ಅಂತರಂಗದ ಪ್ರೀತಿಯಿಂದ ತೊಡಗಿಸಿಕೊಂಡು ಸಾಹಿತ್ಯದ ಸೊಗಡು ಮತ್ತು ಹೃದಯದ ಭಾಷೆ ಸಂವಾದಿಯಾದಾಗ ಉಂಟಾಗುವ ಪ್ರಭಾವ ಹಾಗು ಪರಿಸರವೇ ಸಂಪೂರ್ಣವಾಗಿ ಭಿನ್ನವಾಗುತ್ತದೆ. ಮತ್ತು ಈ ರೀತಿಯ ಮೇಳೈಕೆ ಉಂಟಾದಾಗ ನಮ್ಮ ಇಬ್ಬಂದಿತನ ಮತ್ತು ಊಸರವಳ್ಳಿತನ ಮಾಯವಾಗುತ್ತದೆ. ಹಾಗಾದಾಗ ಮಾತ್ರ ಅನ್ನದ ಭಾಷೆ, ಚಿನ್ನದ ಭಾಷೆ ಮತ್ತು ಹೃದಯದ ಭಾಷೆ , ಎಂಬ ಛಿದ್ರೀಕರಣ ತೊಲಗಿ ಕನ್ನಡದ ಸಮಗ್ರತೆಯ ಬಗ್ಗೆ ಆಲೋಚಿಸುವ ಮನಸ್ಸುಗಳು ಸೃಷ್ಟಿಯಾಗುತ್ತವೆ. ಮತ್ತು ಇಂತಹದೊಂದು ಧೀ ಶಕ್ತಿ ಬಹುಶಃ ನಮ್ಮ ಗ್ರಾಮಾಂತರ ಭಾಗದಿಂದ ,ತೀರಾ ಕಾಲುದಾರಿಗಳಿರುವ ತೋಟದ ಮನೆಗಳಿಂದ ಮತ್ತು ಜನಪದರ ದೃಡ ಸಂಕಲ್ಪ ದಿಂದ ಮಾತ್ರ ಸಾದ್ಯ ಎಂದು ಆ ಗಳಿಗೆಯಲ್ಲಿ ನನಗೆ ಅನಿಸಿತು.
     ಆ ಸಂದರ್ಭದ ಇನ್ನೊಂದು ಅನಿಸಿಕೆ ಎಂದರೆ  ಸದರಿ ಕಾರ್ಯಕ್ರಮದ ಪ್ರಾಯೋಜಕರಾದ ಗಣೇಶ ಮೂರ್ತಿ ಯವರು ಸುಮಾರು 150ರಿಂದ200 ಮಂದಿ ಸಾಹಿತ್ಯಾಸಕ್ತರನ್ನು  ಎರಡು ದಿನಗಳ ಕಾಲ ತಮ್ಮ ಮನೆಯಲ್ಲಿ  ಆತಿಥ್ಯವನ್ನು ನೀಡುವ ಅಗತ್ಯವೇನಿತ್ತು? ಮದುವೆ ಮುಂಜಿಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಚೆಲ್ಲುವವರು ಒಂದು ಕನ್ನಡದ ಪುಸ್ತಕವನ್ನು ಖರೀದಿಸಲು ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ಕನ್ನಡದ ಅಳಿಲು ಸೇವೆಗಾಗಿ ಸಂತೋಷದಿಂದ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಧನ್ಯರಾದ ಗಣೇಶ ಮೂರ್ತಿ ಮತ್ತು ಅವರ ಕುಟುಂಬದವರ ಬಗ್ಗೆ ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಆದುದರಿಂದ ನನ್ನ ಅನಿಸಿಕೆಗಳನ್ನು ಕಾಣಿಸುತ್ತಿದ್ದೇನೆ. ನಿಷ್ಕಾಮವಾದ ಇತಹ ಪ್ರೀತಿ ಕನ್ನಡಿಗರಲ್ಲಿ ಮೂಡಿದಾಗ ಮಾತ್ರ ಕನ್ನಡಕ್ಕೆ ಭವಿಷ್ಯವಿದೆ. ಕನ್ನಡದ ಅಭಿಮಾನವೆಂದರೆ ತಮ್ಮ ಸ್ವಂತಹಣವನ್ನು ಖರ್ಚು ಮಾಡಿ ಕನ್ನಡದ ಬಗ್ಗೆ ಸಂಭ್ರಮಿಸುವುದು ಮತ್ತು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೇರಿಸುವುದು.


No comments:

Post a Comment