Monday 27 April 2015

ವಕೀಲ ವೃತ್ತಿ

     
     ಅದ್ಯಾವುದೂ ನನ್ನ ಎಣಿಕೆಯಂತೆ ನಡೆಯಲಿಲ್ಲ . ಪದವಿ ಮುಗಿದ ಕೂಡಲೇ ಪತ್ರಿಕೆಯೊಂದರ ಜಾಹೀರಾತನ್ನು ನೋಡಿ ಬೆಂಗಳೂರಿನ ಆಕಾಶವಾಣಿಯಲ್ಲಿ ಅನೌನ್ಸರ್ ಉದ್ಯೋಗಕ್ಕೆಂದು ಅರ್ಜಿಯನ್ನು ಸಲ್ಲಿಸಿದೆ . ಸಂದರ್ಶನಕ್ಕೆಂದು ಬಂದಿದ್ದ ನೂರಾರು ಮಂದಿಯ ನಡುವೆ ನನ್ನ ಧ್ವನಿ ಆಯ್ಕೆಯಾದಾಗ ನನಗೆ ಹುಚ್ಚು ಹಿಡಿಯುವಷ್ಟು  ಆನಂದ .  ಆಗ ಆಕಾಶವಾಣಿಯ ವಾಣಿಜ್ಯ ವಿಭಾಗ ಆರಂಭವಾದುದರಿಂದ ಅನೌನ್ಸರ್‍ಗಳ ನೇಮಕವಾಗುತ್ತಿತ್ತು .ನನ್ನ ಆಯ್ಕೆಯಾಗಿ ಕಾಶುಯಲ್ ಕಾಂಟ್ರಾಕ್ಟ್‍ನ ಅಡಿಯಲ್ಲಿ ಕೆಲಸ ನಿರ್ವಹಿಸಿ ನಂತರ ಕರಾರು ನವೀಕರಣವಾಗದೆ ಇದ್ದುದರಿಂದ ಮನೆ ಸೇರಿದ್ದೆ . 1970ರಿಂದ 1974ರವರೆಗೆ ಸಕಲೇಶಪುರ ತಾಲ್ಲೂಕಿನ ಬೆಳಗೋಡಿನ ಪ್ರೌಢ ಶಾಲೆಯಲ್ಲಿ ಸಹ ಅಧ್ಯಾಪಿಕೆಯಾಗಿ  ಉದ್ಯೋಗದಲ್ಲಿದ್ದೆ . 1974ರ ಮೇ 12 ರಂದು ನಮ್ಮ ಮದುವೆಯಾಯಿತು . ಜೂನ್ 1ನೇ ತಾರೀಕಿನಂದು ಶಾಲೆಯ ಪುನರಾರಂಭ . ನನ್ನ ತವರು ಮನೆ ಮತ್ತು ಪತಿಗೃಹದಲ್ಲಿ ನನ್ನ ಉದ್ಯೋಗದ ಬಗ್ಗೆ ಅಪಾರ ಚರ್ಚೆ  ನಡೆದಿತ್ತು . ಪತಿಯ ಮನೆಯವರಿಂದ ನಾನು ರಾಜೀನಾಮೆ ಕೊಡಬೇಕೆಂದು ಒತ್ತಡ . ನನ್ನ ತವರುಮನೆಯ ಅನೇಕ ಮಂದಿ  ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ನಾನು ರಾಜೀನಾಮೆ ಕೊಡಬಾರದೆಂತಲೂ ಶಾಲೆ ಪುನರಾರಂಭದ ದಿನ ಕರ್ತವ್ಯಕ್ಕೆ ಹಾಜರಾಗಿ , ರಜೆ ಹಾಕಿ ಅನಿರ್ದಿಷ್ಟ ಅವಧಿಯವರೆಗೆ ಮುಂದೂಡುತ್ತಾ ಬರಬೇಕೆಂತಲೂ ಮುಂದೆ . ..  .ಸಮಯ ಸಂದರ್ಭಾನುಸಾರ ಆ ಬಗ್ಗೆ ತೀರ್ಮಾನ ಕೈಗೊಳ್ಳ ಬಹುದೆಂತಲೂ ಸಲಹೆ ಮಾರ್ಗದರ್ಶನವನ್ನು ನೀಡುತ್ತಿದ್ದರು . ನಾನು ವಿಪರೀತ ಒತ್ತಡಕ್ಕೆ ಒಳಗಾಗಿದ್ದು , ಯಾವುದೇ ನಿರ್ಧಾರಕ್ಕೆ ಬರದಾಗಿದ್ದೆ . ಆದರೆ ನನ್ನ ತವರಿನ ಬಂಧುಗಳ ಸಲಹೆಯೇ ಸರಿ ಎಂದು ನನ್ನ ಒಳ ಮನಸಿನ ಅನಿಸಿಕೆಯಾಗಿತ್ತು.
    ಹೀಗಾಗಿ ಜೂನ್ 1ನೇ ತಾರೀಕಿನಂದು ನಾನು ಬೆಳಗೋಡಿನ ಶಾಲೆಗೆ ನನ್ನ ಪತಿಯೊಂದಿಗೆ ಹೋದೆ . ನವ ವಿವಾಹಿತರಾಗಿದ್ದ ನಮ್ಮನ್ನು ಸಹೋದ್ಯೋಗಿಗಳು ಆದರದಿಂದಲೇ ಬರಮಾಡಿಕೊಂಡರು . ವಿದ್ಯಾರ್ಥಿಗಳು ಕದ್ದು ಮುಚ್ಚಿ ಮರೆಯಿಂದಲೇ ನೋಡಿ ಮುಗುಳು ನಕ್ಕು ಹಾಗೆಯೇ ಮಾಯವಾಗುತ್ತಿದ್ದರು  ಎಸ್. ನಂಜಪ್ಪ ಎಂಬುವವರು ಆಗ ಮುಖ್ಯೋಪಾಧ್ಯಾಯರಾಗಿದ್ದರು. ನಾನು ಅವರ ಕೊಠಡಿಗೆ ಹೋದೆ . ನಾನು ಮದುವೆಯಾದ ನಂತರ ಉದ್ಯೋಗದಲ್ಲಿ ಮುಂದುವರೆಯುತ್ತೇನೋ ಇಲ್ಲವೋ ಎಂಬುದರ ಬಗ್ಗೆ ಅವರಿಗೆ ಆತಂಕವಿತ್ತು . ಏಕೆಂದರೆ ನಾನು ಆ ಶಾಲೆಯಲ್ಲಿ ವಿಜ್ಞಾನದ ಅಧ್ಯಾಪಿಕೆಯಾಗಿದ್ದೆ . ಹೀಗಾಗಿ ಅವರು ‘ಡ್ಯೂಟಿ ರಿಪೋರ್ಟ್ ಮಾಡಿಕೊಳ್ತೀರಾ ’ ಎಂದು ನನ್ನನ್ನು ಕೇಳಿದರು
‘ಹೌದು ಮಾಡಿಕೊಳ್ತೀನಿ ’ಎಂದೆ ನಾನು . ಹಾಗೆ ಹೇಳುವಾಗ ಬಾಗಿಲಿನಾಚೆ ಮತ್ತು ಕಿಟಕಿಯಾಚೆಯಿಂದ ಸಂಕೋಚ ಮತ್ತು ಕುತೂಹಲಮಿಶ್ರಿತ  ಹಲವಾರು ಜೋಡಿ ಕಣ್ಣಿನ ಮಿಂಚು ನನ್ನ ಇಡೀ ಅಸ್ತಿತ್ವವನ್ನು ಸ್ಪರ್ಶಿಸುತ್ತಿತ್ತು . ಬಾನು ಟೀಚರ್‍ನನ್ನು ಕಣ್ತಂಬಾ ತುಂಬಿಕೊಳ್ಳಲು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ನೆರೆದಿದ್ದರು . ನಾನು ಅವರ ಅಚ್ಚುಮೆಚ್ಚಿನ ಟೀಚರ್ ಆಗಿದ್ದೆ .
    ನಂಜಪ್ಪನವರು ತುಸುವೇ ನಕ್ಕರು . ಅವರು ನಗುವುದೇ ಅಪರೂಪವಾಗಿತ್ತು . ಅತಿ ಹೆಚ್ಚಿನ ಗತ್ತುಗಾರಿಕೆ ಮತ್ತು ವಿಪರೀತ ಶಿಸ್ತಿನ ವ್ಯಕ್ತಿಯಾಗಿದ್ದರು. ನಂತರ ತುಸು ತಡೆದು ಹೇಳಿದರು ,
        ‘ನೋಡಿ ಮೇಡಮ್ .. ನೀವು ಡ್ಯೂಟಿ ರಿಪೋರ್ಟ್ ಮಾಡಿಕೊಂಡು . . . ಆ ನಂತರ ನಿಮಗೆ ನ್ಯಾಯವಾಗಿ ಸಿಗುವ  ಮತ್ತು ಅನ್ಯಾಯವಾಗಿ ದಕ್ಕುವ ರಜೆಗಳನ್ನು ಬಳಸಿಕೊಂಡು ನಿಮ್ಮ ಕೆಲಸವನ್ನು ಉಳಿಸಿಕೊಳ್ಳಬಹುದು .ಆದರೆ ನೀವು ಹಾಗೆ ಮಾಡಿದಲ್ಲಿ  ಈ  ಸಾರಿ ಟೆಂತ್ ಸ್ಟಾಂಡರ್ಡ್ ಪರೀಕ್ಷೆಗೆ ಹೋಗುವ ಎಲ್ಲಾ ಮಕ್ಕಳ ಭವಿಷ್ಯವನ್ನು  ಹಾಳು ಮಾಡಿದಂತಾಗುತ್ತದೆ .ನೀವು ರೆಗ್ಯುಲರ್ ಆಗಿ ಶಾಲೆಗೆ ಬರುವುದಾದಲ್ಲಿ ಮಾತ್ರ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಿ ಇಲ್ಲವಾದಲ್ಲಿ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡಿದ ಹೊಣೆಗಾರಿಕೆ ಮಾತ್ರ ನಿಮ್ಮದೇ ಆಗುತ್ತದೆ   ’. ಯಾವುದೇ ಉದ್ವೇಗವಿಲ್ಲದೆ  ತೀರಾ ಸರಳವಾಗಿ ಮತ್ತು ತೀರಾ ಕೂಲಾಗಿ ನಂಜಪ್ಪನವರು ನನ್ನ ಎದುರು ಇಟ್ಟ ಪ್ರಮೇಯದಿಂದ ನನ್ನ ಕೈಯಲ್ಲಿದ್ದ ಪೆನ್ನು ಮಾತ್ರವಲ್ಲ ನಾನು ನಖಶಿಖಾಂತ ನಡುಗಿ ಹೋದೆ .ನನ್ನ ಬಂಧುಗಳು ನನ್ನ ಭವಿಷ್ಯತ್ತಿನ ದೃಷ್ಟಿಯಿಂದ ನನಗೆ ನೀಡಿದ್ದ ಸಲಹೆ ಮತ್ತು ಮಾರ್ಗದರ್ಶನಗಳು ಕ್ಷಣಾರ್ಧದಲ್ಲಿ ಹಾರಿ ಹೋದವು . ಇಡೀ ಕೋಣೆ ಮಾಯವಾಯಿತು . ಅಲ್ಲಿ ನಾನಿದ್ದೆ .. . .. ನನ್ನ ಪೆನ್ನಿತ್ತು. . .. ನನ್ನೆದುರಿಗೆ  ಅಸಂಖ್ಯ ವಿದ್ಯಾರ್ಥಿಗಳ ಅಸ್ಪಷ್ಟ ಮುಖಗಳಿದ್ದವು .ನನ್ನನ್ನು ಯಾರೋ ಅನಾಮತ್ತಾಗಿ ಎತ್ತಿ ಗಿರಗಿರನೆ ಸುತ್ತಿ ನೆಲಕ್ಕೆ ಅಪ್ಪಳಿಸಿದಂತಾಗಿತ್ತು . ತೀವ್ರವಾಗಿ ಬೆವರುತ್ತಾ ನಾನು ಒಂದೆರಡು ನಿಮಿಷ ಸುಮ್ಮನೆ ಕುಳಿತಿದ್ದೆ .  ಆಕ್ಷಣದಲ್ಲೂ  ಒಂದು ಆಲೋಚನೆ ಮೂಡಿತ್ತು . ಹೊರಗಡೆ ಹೋಗಿ ಮುಷ್ತಾಕ್‍ನ ಅಭಿಪ್ರಾಯವನ್ನು  ಒಂದು ಸಾರಿ ಕೇಳಲೇ . .. . ಏಕೆಂದರೆ ನಾನು  ರಾಜೀನಾಮೆಯನ್ನು ನೀಡಬೇಕೆಂದು  ಅವರು ನನ್ನೆದುರು ಒಂದು ಸಾರಿಯೂ ಪ್ರಸ್ತಾಪ ಕೂಡಾ ಮಾಡಿರಲಿಲ್ಲ . ಆದರೆ ನಾನು ಆ ಆಲೋಚನೆಯನ್ನು ಕೊಡವಿ ಹಾಕಿದೆ . ಮತ್ತು ನನ್ನ ಆತ್ಮದ ಒಳ ಮಿಡಿತದ ಉತ್ತರವನ್ನು ನಿರೀಕ್ಷಿಸಿದೆ . ನಂತರ ನಂಜಪ್ಪನವರನ್ನು ನೇರವಾಗಿ ದಿಟ್ಟಿಸುತ್ತಾ ಅವರಷ್ಟೇ ದಿಟ್ಟ ಮತ್ತು ಸ್ಪಷ್ಟ ನುಡಿಗಳಲ್ಲಿ ಹೇಳಿದೆ ;
    ‘ನಾನು ರಾಜೀನಾಮೆಯನ್ನು ಕೊಡ್ತೀನಿ ಸರ್ ’ ವಿದ್ಯಾರ್ಥಿಗಳ ಹಿತದೃಷ್ಟಿ . ..  . ಅದೂ . . . ಇದೂ . . . ನಾನು ಯಾವ ವಿವರಣೆಗಳನ್ನೂ ಕೊಡಲಿಲ್ಲ .ಹುತಾತ್ಮಳ ಭಾವವನ್ನು ಕೂಡಾ ಆಗ ನಾನು ಹೊಂದಲಿಲ್ಲ . ನಂಜಪ್ಪನವರಿಗೆ ಅರ್ಥವಾಯಿತು ; ಅವರು ನನ್ನ ತೀರ್ಮಾನವನ್ನು ಹೀಗೆ ನಿರೀಕ್ಷಿಸಿರಲಿಲ್ಲ . ಅವರು ಭಾವುಕರಾದರು . ಅವರ ಕಣ್ಣಂಚಿನಲ್ಲಿ ಒಂದಿಷ್ಟು ಪಸೆಯಾದಂತೆ ನನಗೆ ಅನಿಸಿತು . ಗಂಟಲು ಕಟ್ಟಿತ್ತು , ಆದರೂ ಅವರೆಂದರು , ‘ ಗುಡ್‍ಲಕ್’ .ಆಗ ನನ್ನ ಸಹೋದ್ಯೋಗಿಗಳಾಗಿದ್ದವರು ಸಬ್ಜೆಕ್ಟ್ ಇನಸ್ಪೆಕ್ಟರ್ ಹುದ್ದೆವರೆಗೂ  ತಲುಪಿ ನಿವೃತ್ತರಾಗಿದ್ದಾರೆ . ಹಾಗೂ ಮುಂದೆ ನನ್ನ ಜೀವನದ ಸಂಧಿ ಕಾಲದಲ್ಲಿ ನಾನು  ಪೂರ್ವಾಪರ ಆಲೋಚನೆಯನ್ನು ಮಾಡದೆ ಯಾಕೆ ರಾಜೀನಾಮೆಯನ್ನು ಕೊಟ್ಟೆ ಎಂದು ಪರಿತಪಿಸಿದ ಘಟ್ಟವೂ ಬಂದಿತ್ತು . ಆದರೆ ಮಂಜಿನ ಹನಿಯಂತೆ ಆ ಕಾಲ ಘಟ್ಟವೂ ಆವಿಯಾಯಿತು . ಹಾಗೂ ನಾನು ರಾಜೀನಾಮೆ ಕೊಟ್ಟ ಬಗ್ಗೆ ಯಾವೊತ್ತೂ ಕೂಡಾ ಪಶ್ಚಾತ್ತಾಪ ಪಡಲಿಲ್ಲ . ನನ್ನ ವ್ಯಕ್ತಿಗತ ಮತ್ತು ಸಾಮಾಜಿಕ ಹೋರಾಟದ ದುರ್ಬಲ ಕ್ಷಣಗಳಲ್ಲಿ ಆ ಘಟನೆಯನ್ನು ನೆನೆದುಕೊಂಡಾಗ ನನಗೆ ಅಸೀಮ ಬಲ ಬಂದು ನನ್ನ ದಾರಿ ನಿಚ್ಚಳವಾದ ಅನೇಕ ಸಂದರ್ಭಗಳಿವೆ .ಬುದ್ಧಿ ಮತ್ತು ಹೃದಯಮೂಲದ ನಡುವಿನ ಆಯ್ಕೆಯ ಸವಾಲು ನನ್ನೆದುರಿಗೆ ಬಂದಾಗ ನಾನು ಬಹುತೇಕ ಹೃದಯಮೂಲದ ಆಯ್ಕೆಗೆ ಪ್ರಾಶಸ್ತ್ಯವನ್ನು ನೀಡಿದ್ದೇನೆ .ಹಾಗೂ ಆ ಮೂಲಕ ನನಗೆ ಬಾಳಿನಲ್ಲಿ ಅಪಾರ ನೆಮ್ಮದಿ ದೊರಕಿದೆ .
 
    ನಂತರ ನನ್ನ ಬಾಳಿನ ನೌಕೆ ಜೋಕಾಲಿಯಾಡುತ್ತಾ ತೇಲುತ್ತಾ ಮುಳುಗುತ್ತಾ  ಸಾಗುತ್ತಿದ್ದ ಸಂದರ್ಭದಲ್ಲಿ ನಾನು  ತೀರ್ಮಾನ ಕೈಗೊಳ್ಳ ಬೇಕಾದ ಅನೇಕ ಸಂದಿಗ್ಧ ಸನ್ನಿವೇಶಗಳು ಬಂದವು . ನನ್ನ ಮೂಲ ಗುಣ ಧರ್ಮದಂತೆ ನಾನು ನನ್ನ ಹೃದಯ ಹೇಳಿದಂತೆ ಕೇಳಿದ್ದೇನೆ ಮತ್ತು ನನ್ನ ಆತ್ಮದ ದನಿಗೆ ಓಗೊಟ್ಟಿದ್ದೇನೆ .ಕಾಲಾಂತರದಲ್ಲಿ ಬಹಳ ಬದಲಾವಣೆಗಳಾದವು ನನ್ನ ತಂದೆಯವರು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಹಾಸನದಲ್ಲಿ ನೆಲೆಯಾದರು . ಅನಿವಾರ್ಯವಾಗಿ  ನಾನು ಮತ್ತು ಮುಷ್ತಾಕ್ , ನನ್ನ ಪತಿಗೃಹದಿಂದ ಹೊರಬಂದು ನೆಲೆ ಇಲ್ಲದೆ ನನ್ನ ತವರುಮನೆಯಲ್ಲಿ ವಾಸ್ತವ್ಯ ಹೂಡಿದೆವು .
          1978ರಲ್ಲಿ ನಾನು ಹಾಸನದ ಕೃಷ್ಣ ಲಾ ಕಾಲೇಜಿಗೆ ಸೇರಿದೆ .  ಆಗ ಅದು ಸಂಜೆ ಕಾಲೇಜಾಗಿತ್ತು  . ಆಗ ನನಗೆ ಇಬ್ಬರು ಮಕ್ಕಳಿದ್ದರು . ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ ಕಾನೂನಿನ ಓದು . ಅದಾಗಲೇ ನಾನು ‘ ಹೌಸ್‍ವೈಫ್ ’ನ ಎಲ್ಲಾ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದೆ . ಉರ್ದುವಿನ್ಲಿ ಒಂದು ಗಾದೆ ಇದೆ . “ ಮಕ್ಕಳ ನೆಪದಲ್ಲಿ ಊಟ ; ಗಂಡನ ನೆಪದಲ್ಲಿ ನಿದ್ರೆ ” ಎಂದು . ನನಗೆ ನೆಪಗಳ ಅಗತ್ಯವಿರಲಿಲ್ಲ . ಅಮ್ಮನ ಮನೆಯಲ್ಲಿದ್ದುದರಿಂದ ನಿರಾತಂಕವಾಗಿ ನಿರಾಳವಾಗಿದ್ದೆ . ನನ್ನ ಬೆನ್ನಿಗಿದ್ದ ನಾಲ್ವರು ತಂಗಿಯರು ನನ್ನ ಮಕ್ಕಳನ್ನು ಕಣ್ಣಿನ ಗೊಂಬೆಗಳಂತೆ ಸಾಕುತ್ತಿದ್ದರು . ನಾನು ಡಿಸ್ಕೌಂಟ್ ಸೇಲ್‍ಗಳ ಮಾಯಾಲೋಕದಲ್ಲಿ ಮಗ್ನಳಾಗಿದ್ದೆ . ಅಂಗಡಿ ಅಂಗಡಿ ಸುತ್ತಿ ಒಳ್ಳೊಳ್ಳೆಯ ಸೀರೆಗಳನ್ನು ಕೊಂಡು ತಂದು ನೀಟಾಗಿ ಅವಕ್ಕೆ ಫಾಲ್ಸ್ ಹೊಲಿದು ಬ್ಲೌಸ್ ಹೊಲಿದು ಹ್ಯಾಂಗರಿನಲ್ಲಿ ಹಾಕಿ ಬೀರುವಿಗೆ ತೊಡಿಸಿ ನಾನು ಮಾತ್ರ ಹಗಲು ಹೊತ್ತಿನಲ್ಲಿಯೂ ನೈಟಿಯಲ್ಲಿ  ಮೈ ಮರೆತಿದ್ದೆ .
    ನನ್ನ ಬಗ್ಗೆ ಅಪಾರವಾಗಿ ಚಿಂತಿತರಾಗಿದ್ದವರು ನನ್ನ ಅಬ್ಬಾ ಮತ್ತು ಮುಷ್ತಾಕ್ . ಇವಳನ್ನು ಯಾಕಾದರೂ ಮದುವೆಯಾದೆ ಎಂದು ರೋಸಿ ಹೋದಂತೆ ಅವರು ವರ್ತಿಸುತಿದ್ದರು . ಜಗಳಗಳು ನಮಗೆ ನಿತ್ಯ ನೂತನವಾದವು . ಎಂತಹಾ ಕ್ರಿಯಾಶೀಲ ವ್ಯಕ್ತಿ ಹೇಗಾಗಿ ಹೋದಿರಿ ಎಂದು ಮುಷ್ತಾಕ್ ಪರಿತಾಪ ಪಡುತ್ತಿದ್ದರು . ನನ್ನ ಬಳಿ ಉತ್ತರ ಸಿದ್ಧವಾಗಿತ್ತು .  ‘ಯಾಕೆ ನನ್ನ ಕೈಯಿಂದ ರಾಜೀನಾಮೆಯನ್ನು ಕೊಡಿಸಿದಿರಿ ?’ ಮುಷ್ತಾಕ್ ಸೋತು ಸುಣ್ಣವಾಗುತ್ತಿದ್ದರು . ‘ಅಮ್ಮಾ . . . ತಾಯಿ.  . ನಾನು ರಾಜೀನಾಮೆ ಕೊಡಿಸಲಿಲ್ಲ ’ಎಂದು ಅವರು ಸತ್ಯವನ್ನು ನನ್ನೆದುರಿಗೆ ಬಿಡಿಸಿಷ್ಟೂ ನನ್ನ ಆಕ್ರೋಶ ಹೆಚ್ಚುತ್ತಿತ್ತು . ಜಗಳಗಳಿದ್ದರೂ ನಾವು ಒಂದಿಷ್ಟು ಕೇರ್ ತೆಗೆದುಕೊಳ್ಳುತ್ತಿದ್ದೆವು . . . . . ಜಗಳವೆಲ್ಲ ನಮ್ಮ ಕೋಣೆಯಲ್ಲಿಯೇ. . .. . . ...ಹೊರ ಬಂದಾಗ ನಾವು ತೋರಿಸಿಕೊಳ್ಳುತ್ತಿರಲಿಲ್ಲ . ಆದರೂ ಅದು ಹೇಗೋ ಗೊತ್ತಿಲ್ಲಾ ನನ್ನ ಅಬ್ಬಾಗೆ ಈ ವಿಷಯ ತಿಳಿದುಹೋಗುತ್ತಿತ್ತು . ಅವರು ಅಪಾರ ದುಃಖಿತರಾಗುತ್ತಿದ್ದರು . ಅವರಿಗೆ ನನ್ನ ಬಗ್ಗೆ ಬಹಳ ಹೆಮ್ಮೆ ಇತ್ತು .  ದೀಪ ಹಿಡಿದು ಹುಡುಕಿದರೂ ಇಡೀ ಪ್ರಪಂಚದಲ್ಲಿಯೇ ನನ್ನಷ್ಟು ಜಾಣೆ , ವಿವೇಕಿ ಮತ್ತು ಸುಂದರಿಯಾದ ಹೆಣ್ಣು ಮಗಳು ಇನ್ನೊಬ್ಬಳಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು . ಅದು ಸುಳ್ಳು ಎಂದು ನನ್ನ ಆತ್ಮಕ್ಕೆ ಗೊತ್ತಿದ್ದ ಸತ್ಯವಾಗಿದ್ದರೂ ನಾನು ಅವರ ಈ ಅಭಿಪ್ರಾಯವನ್ನು ನನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು , ಅದು ಸ್ಥಿರವಾಗುವಂತೆ ನೋಡಿಕೊಳ್ಳುತ್ತಿದ್ದೆ . ಕೊನೆಗೂ ನನ್ನ ಅಬ್ಬಾ ಮತ್ತು ಮುಷ್ತಾಕ್ ಸೇರಿ ಮನೆಯಿಂದ ಹೊರಗಡೆ ಎಲ್ಲೋ ಮೀಟಿಂಗ್ ಮಾಡಿಕೊಂಡಿದ್ದು , ನನ್ನನ್ನು ಲಾ ಕಾಲೇಜಿಗೆ ಸೇರಿಸಬೇಕೆಂದು ಅವರಿಬ್ಬರೂ ತೀರ್ಮಾನಿಸಿದ್ದರು . ಹೀಗಾಗಿ , ಮುಷ್ತಾಕ್ ಲಾ ಕಾಲೇಜಿಗೆ ಸೇರುವಂತೆ ನನ್ನನ್ನು ಎಷ್ಟೋ ಪುಸಲಾಯಿಸಿದರು , ಆಮಿಷಗಳನ್ನು ಒಡ್ಡಿದರು , ಬೆದರಿಸಿದರು . . . ಆದರೆ ನಾನಾದರೋ ಅವರ ಯಾವ ತಂತ್ರಗಳಿಗೂ ಮಣಿಯಲಿಲ್ಲ .ಕೊನೆಗೊಮ್ಮೆ ರಾತ್ರೆ ಊಟವಾದ ನಂತರ ನಾನು ಸಮೀಪದಲ್ಲಿಯೇ ಇದ್ದೇನೆ ಎಂದು ಖಾತರಿ ಪಡಿಸಿಕೊಂಡು ಮುಷ್ತಾಕ್ ನನ್ನ ತಂದೆಯನ್ನು ಉದ್ದೇಶಿಸಿ ಹೇಳಿದರು ,
        “ ನನ್ನನ್ನು ಮಾತ್ರ ದೂರಬೇಡಿ ಅಬ್ಬಾ . ..  ನಾನಂತೂ ಬಾನುವಿಗೆ ಹಲವು ಹತ್ತು ಸಾರಿ ಲಾ ಕಾಲೇಜಿಗೆ ಸೇರಲು ಹೇಳಿದ್ದೇನೆ . ಆದರೆ ಓದುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಮತ್ತೆ ನೂರುನ್ ನೆನ್ನೆ ಲಾ ಕಾಲೇಜಿಗೆ ಸೇರಿದ್ದು ಏಜಾಸ್ ರಾತ್ರೆ ಬುಕ್ಸ್ ಕೊಂಡು ಹೋದ .”
    “ ಯಾವ ನೂರುನ್ ?”ನನ್ನ ತಂದೆ ಆಶ್ಚರ್ಯದಿಂದ ಎಂಬಂತೆ ಕೇಳಿದರು”
    “ಅದೇ ನನ್ನ ತಮ್ಮ ಏಜಾಸ್‍ನ ಹೆಂಡತಿ”
    “ಹೌದೇ ”ಎಂದರು ನನ್ನ ತಂದೆ . ಓರಗಿತ್ತಿ ಲಾಯರ್ ಆಗುವಳೇ ? ನಾನಿಲ್ಲಿ ಏನು ಮಾಡುತ್ತಿದ್ದೇನೆ ? ಈಷ್ರ್ಯೆಯ ಬೆಂಕಿಯಲ್ಲಿ ಇಡೀ ರಾತ್ರೆ ನಾನು ಬೆಂದು ಹೋದೆ . ಬೆಳಗೆದ್ದ ಕೂಡಲೇ ಮುಷ್ತಾಕ್‍ನ ಜೇಬಿನಿಂದ ದುಡ್ಡನ್ನು  ಎಣಿಸಿಕೊಂಡು ಸೀದಾ ಲಾ ಕಾಲೇಜಿಗೆ ಹೋಗಿ ದಾಖಲಾಗಿ ಬಿಟ್ಟೆ. ಆಮೇಲೆ ಗೊತ್ತಾದುದೇನೆಂದರೆ , ಪಾಪ ! ನೂರುನ್ ಆ ಕಾಲೇಜಿನ ಹೆಸರನ್ನೂ ಕೇಳಿರಲಿಲ್ಲ . ಆದರೆ ನನ್ನ ತಂದೆ ಮತ್ತು ಮುಷ್ತಾಕ್ ಸೇರಿ ಮಾಡಿದ್ದ ತಂತ್ರ ಫಲಿಸಿತು . ತಂತ್ರವೇನೋ ಫಲಿಸಿತು ; ಆದರೆ ಯಾವಾಗ ನೂರುನ್ ಕಾಲೇಜಿಗೆ ಸೇರಿಲ್ಲವೆಂದು ನನಗೆ ಅರಿವಾಯಿತೋ ಆಗಲೇ ನನ್ನ ಆಸಕ್ತಿಯೂ ಹೇಳ ಹೆಸರಿಲ್ಲದಂತೆ ಮಾಯವಾಯಿತು . ಮೂರು ವರ್ಷದ ಕೋರ್ಸನ್ನು ಮುಗಿಸಿದೆನೇ ಹೊರತು ಪರೀಕ್ಷೆಗಳಿಗೆ ಹಾಜರಾಗಲಿಲ್ಲ . ಪರೀಕ್ಷೆ . . . . ಪರೀಕ್ಷೆ .. . . ಎಂದು ಮನೆಯಲಿ ಸ್ವಲ್ಪ ಗದ್ದಲಮಾಡಲು ಮತ್ತು ಜಗಳವಾದಾಗ ಮುಷ್ತಾಕ್‍ನನ್ನು ತಿಳಿಯಾಗಿಸಲು ಒಮ್ಮೊಮ್ಮೆ ಪರೀಕ್ಷೆಗೆಂದು ಹೋಗುತ್ತಿದ್ದೆ. ನನಗೇ ಆಶ್ಚರ್ಯವಾದಂತೆನೆಸಿ ಪಾಸ್ ಆಗಿರುತ್ತಿದ್ದೆ .ಹತ್ತು ವರ್ಷಗಳ ಕಾಲ ಈ ರೀತಿಯ ಆಟದಲ್ಲೇ ಕಳೆದೆ . ಈ ನಡುವೆ , ಹಾಸನದಲ್ಲಿ ಆರಂಭವಾಗಿದ್ದ ರೈತಸಂಘಟನೆ ಮತ್ತು ದಲಿತ ಸಂಘಟನೆಯ ಒಡನಾಟ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಬರವಣಿಗೆ ,ಬಂಡಾಯ ಸಾಹಿತ್ಯ ಸಂಘಟನೆಯ ಒಡನಾಟ ಮತ್ತು ಸ್ತ್ರೀವಾದಿ ಹೋರಾಟ. . . . . ಅಂದರೆ ಒಟ್ಟಾಗಿ ಸಮಾಜಮುಖೀ ಆಲೋಚನೆಗಳು ಮತ್ತು ತೊಡಗಿಸಿಕೊಳ್ಳುವಿಕೆ  ನನ್ನ ವ್ಯಕ್ತಿತ್ವಕ್ಕೊಂದು ನಿರ್ದಿಷ್ಟ ದಿಕ್ಕನ್ನು ಸೂಚಿಸತೊಡಗಿದವು .ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ನನಗೆ ಇದೆ ಎಂದು ಅಭಿಮಾನಿಗಳ ವತಿಯಿಂದ  ಖ್ಯಾತಿ ಹಾಗೂ  ಅಸೂಯೆಕೋರರಿಂದ ಮನೆಮುರುಕಿ ಎಂಬ ಅಪಖ್ಯಾತಿ –ಇವೆರಡೂ ನನಗೆ ಕ್ರಮೇಣ ಪ್ರಾಪ್ತಿಯಾದವು .
    ಆಗ ಆಕೆ ಬಂದಳು  . 1989ರ ವರ್ಷದ ಆರಂಭ  ಎಂದು ನನ್ನ ನೆನಪು . ಆಕೆ ತುಂಬಾ ಸುಂದರವಾಗಿದ್ದಳು .ಸೌಂಧರ್ಯ , ಹರೆಯ ಮತ್ತು ದುಃಖ ಹಾಗೂ ಆಕ್ರೋಶದ ಭಾವ ಸಮ್ಮಿಳಿತಗೊಂಡಿದ್ದ ಆಕೆ ನನ್ನೆದುರಿಗೆ ಸುಮಾರು 70ರಿಂದ 80ರಷ್ಟು ಪೋಸ್ಟ್ ಕಾರ್ಡುಗಳನ್ನು ಇಟ್ಟಳು . “ನನ್ನ ಗಂಡ ನನ್ನಿಂದ ಡೈವೋರ್ಸ್ ಕೋರಿ ಕೇಸನ್ನು ಹಾಕಿದ್ದಾನೆ . ನಮ್ಮ ಲಾಯರ್ ಬರೀ ಅಡ್ಜರ್ನ್‍ಮೆಂಟ್ ತಗೋತಿದಾರೆ .ನೆನ್ನೆ ನಾನು ಅವರ ಆಫೀಸಿಗೆ ಹೋಗಿದ್ದಾಗ ನನಗೆ ತುಂಬಾ ಬೇಜಾರಾಗಿದೆ ಸರ್ . . . ಏನಾದರೂ ಒಂದು ತೀರ್ಮಾನ ಮಾಡಿಕೊಡಿ  ಅಂತ ಕೇಳಿದೆ . ಅದಕ್ಕೆ ಅವರು ಅಷ್ಟೊಂದು ಬೇಜಾರಾಗಿದೆಯಾ ನಿನಗೆ . . . ನಾನು  ನಾಳೆ ಹೈದರಾಬಾದಿಗೆ ಹೋಗ್ತಾ ಇದೀನಿ . . . ಬಾ ಸುತ್ತಾಡಿಕೊಂಡು ಬರೋಣ ಅಂದರು ”ಎಂದು ಹೇಳಿದವಳೇ ಒಂದು ಫೈಲನ್ನು ಹೊರತೆಗೆದಳು . “ ನಾನು ಅವರಿಗೆ ಅನ್ನ ಬೇಕಾದುದನ್ನು ಅಂದು , ನನ್ನ ಫೈಲನ್ನು ತೆಗೆದುಕೊಂಡು ಬಂದೆ . ನನ್ನ ಕೇಸನ್ನು ನೀವು ನಡೆಸಿಕೊಡಿ ”ಎಂದು ಪಟ್ಟು ಹಿಡಿದಳು .
    ನಾನು ಅವಳಿಗೆ ವಿಧ ವಿಧವಾಗಿ ಸಮಾಧಾನ ಪಡಿಸಲು ನೋಡಿದೆ . ನಾನು ಲಾಯರ್ ಅಲ್ಲ ಎಂದರೆ ಅವಳು ನಂಬಲೇ ಇಲ್ಲ . “ನನ್ನ ಫ್ರೆಂಡ್ ಒಬ್ಬಳು ಲಾ ಕಾಲೇಜಿನಲ್ಲಿ ಕೆಲಸಕ್ಕಿದ್ದಾಳೆ . ಅವಳೇ ನಿಮ್ಮ ಹತ್ತಿರ ಕಳಿಸಿದ್ದು . . .. ನೀವು ಸುಳ್ಳು ಹೇಳಬೇಡಿ ”ಎಂದು ನನ್ನನ್ನೇ ದಬಾಯಿಸಿದಳು . ಕೊನೆಗೂ ನಾನು ಅವಳ ಕೇಸನ್ನು ಒಪ್ಪಿಕೊಳ್ಳಲೇ ಇಲ್ಲ . ‘ನೀವು ಆ ಲಾಯರ್‍ಗಿಂತ ಕಡೆ ’ ಎಂದು ನನ್ನ ಮೇಲೆ ಆರೋಪವನ್ನು ಹೊರಿಸಿ ನನ್ನ ಮುಖಕ್ಕೆ ಮಂಗಳಾರತಿಯನ್ನು ಮಾಡಿ , ಅಳುತ್ತಾ ನಮ್ಮ ಮನೆಯಿಂದ ಹೊರ ಹೋದಳು . ನನ್ನ ದ್ವಂದ್ವ ವ್ಯಕ್ತಿತ್ವಕ್ಕೆ , ನನ್ನ ನಿಷ್ಕ್ರಿಯತೆಗೆ ಮತ್ತು ನನ್ನ ಸೋಮಾರಿತನಕ್ಕೆ ನನಗೆ ವಿಪರೀತ ನಾಚಿಕೆ ಎನಿಸತೊಡಗಿತು . ನನ್ನ ಮನೆಯವರಿಗೆ ಮಾತ್ರವಲ್ಲದೆ ಸಮಾಜದ ಹಲವು ಮಜಲುಗಳ ನೋವುಗಳಿಗೆ  ಕೂಡಾ ನನ್ನಿಂದ ನಿರೀಕ್ಷೆಗಳಿವೆ ಎಂಬ ಅಂಶ ನನ್ನನ್ನು ಅಸ್ತವ್ಯಸ್ತಗೊಳಿಸಿತು .ನಾನು ನನ್ನ ಕೋಣೆಯೊಳಗೆ ಹೋಗಿ ಅಲ್ಲಿ ಇಲ್ಲಿ ಚದುರಿದ್ದ ನನ್ನ ಪುಸ್ತಕಗಳನ್ನು ಒಂದೆಡೆ ಜೋಡಿಸಿದೆ ಮತ್ತು ಉಳಿದಿದ್ದ ಸುಮಾರು 10 ವಿಷಯಗಳ ಪರೀಕ್ಷೆಗೆ ಓದಲಾರಂಭಸಿದೆ . ಆಗ ನಾನು ನನ್ನ ಮಗ ತಾಹಿರ್‍ನ ಗರ್ಭಿಣಿಯಾಗಿದ್ದೆ . ಸೆಪ್ಟೆಂಬರ್ 26ರಂದು ತಾಹಿರ್ ಹುಟ್ಟಿದ . ಅಕ್ಟೋಬರ್‍ನ ಪರೀಕ್ಷೆಗೆ ಹಾಜರಾಗಿ ಎಲ್ಲಾ ವಿಷಯದಲ್ಲಿಯೂ  ಉತ್ತರಿಸಿದೆ . ಮನೆಯವರೆಲ್ಲಾ ನನ್ನನ್ನು ವಿಚಿತ್ರವಾಗಿ ಕಂಡರು . ನನ್ನ ತಾಯಿಗೆ ಗಾಬರಿ .. . . ಬಾಣಂತಿ . . . .ಓದಿ ಓದಿ ಆರೋಗ್ಯವನ್ನು ಎಲ್ಲಿ ಕೆಡಿಸಿಕೊಳುತ್ತಾಳೆಯೋ ಎಂದು . ನಾನು ಪರೀಕ್ಷೆಗೆಂದು ಹೊರಟಾಗಲೂ ನನ್ನ ತಾಯಿ ‘ಕಿವಿಯಲ್ಲಿ ಒಂದಿಷ್ಟು ಹತ್ತಿಯನ್ನು ಇಡು . ತಲೆಗೆ ಸ್ಕಾರ್ಫನ್ನು ಕಟ್ಟು ’ಎಂದು ಪೇಚಾಡುತ್ತಲೇ ಇದ್ದರು .ಮುಷ್ತಾಕ್ ಮಾತ್ರ ನನ್ನನ್ನು ನಂಬಲೇ ಇಲ್ಲ . ಇದೊಂದು ಯಾವುದೋ ಇವಳ ಹೊಸವರಸೆ ಎಂದು ಗುಮಾನಿಯಿಂದಲೇ ನನ್ನನ್ನು ನೋಡುತ್ತಿದ್ದರು . ರಿಸಲ್ಟ್ ಬಂದಾಗ ಎಲ್ಲಾ ವಿಷಯಗಳಲ್ಲಿಯೂ ಪಾಸ್ . ಈಗ ಪಾಸ್ ಆಗಿದ್ದಿದ್ದೆ ‘ಪಪ್ಪು ಪಾಸ್ ಹೋಗಯಾ ’ ಎಂದು ಸಿಹಿ ಹಂಚ ಬಹುದಿತ್ತು .
      ಈ ಬಾರಿ ಬಹಳ ಸಂತೋಷದಿಂದಲೇ ಮುಷ್ತಾಕ್ ನನಗೆ ಕರಿ ಕೋಟನ್ನು ಹೊಲಿಸಿಕೊಟ್ಟರು .ಬಾರ್ ಕೌನ್ಸಿಲಿನಲ್ಲಿ ನೋಂದಾವಣೆಗೆಂದು ಬೆಂಗಳೂರಿಗೆ ಹೋದೆವು . ಸ್ವಲ್ಪದರಲ್ಲಿ ದೊಡ್ಡ ಅನಾಹುತದಿಂದ ತಪ್ಪಿದ ಸಂತೋಷ ನನ್ನದಾಯಿತು . ನನ್ನ ನೋಂದಾವಣೆ ಸಂಖ್ಯೆ 422/90 .ಸಧ್ಯ. .. . . ಎರಡು  ಅಂಕಿ ಕಡಿಮೆಯಾಗಿದ್ದಿದ್ದಲ್ಲಿ ಅನಾಯಾಸವಾಗಿ ನನಗೆ ಶಾಶ್ವತ ಫೋರ್ ಟ್ವೆಂಟಿ ಎಂಬ ಬಿರುದು ಪ್ರಾಪ್ತವಾಗುತ್ತಿತ್ತಲ್ಲಾ ಎಂದು ಇಂದಿಗೂ ನನಗೆ ಆತಂಕವಾಗುತ್ತದೆ . ಆದರೆ , ನಮ್ಮ ಆಫೀಸಿನ ಜೂನಿಯರ್‍ಗಳು ಪ್ರತಿ ವಕಾಲತ್ತಿನಲ್ಲಿ ಈ ಸಂಖ್ಯೆಯನ್ನು ಉದ್ಧರಿಸುವಾಗ ಕಿಂಚಿತ್ತೂ ತ್ರಾಸವಿಲ್ಲದಂತೆ ನೆನಪಿನಲ್ಲಿಟ್ಟುಕೊಂಡು ,ಒಬ್ಬರನ್ನೊಬ್ಬರು ನೋಡಿ ಅರ್ಥಗರ್ಭಿತವಾಗಿ ನಗುವುದನ್ನು ನಾನು ಗಮನಿಸಿದ್ದೇನೆ.
    ಅಂತೂ ಇಂತೂ ನಾನು ಮೊದಲನೆಯ ದಿನ ಕೋರ್ಟಿಗೆ ಹೊರಟಾಗ ಮನೆಯಲ್ಲಿ ಸಂಭ್ರಮ ಮೂಡಿತ್ತು . ಮುಷ್ತಾಕ್ ಒಂದು ಬೆಲೆಬಾಳುವ ವ್ಯಾಲೆಟನ್ನು ನನಗೆ ಉಡುಗೊರೆಯಾಗಿ ನೀಡಿದರು . ನನ್ನ ತಂದೆಯ ಜೊತೆಯಲ್ಲಿ ಫೋಟೋ ತೆಗೆಸಿಕೊಂಡೆ . ಅಬ್ಬಾಜಿಯ ಮುಖದಲ್ಲಿ ಮೂಡಿದ್ದ  ಆ ಸಂತೃಪ್ತಿ. . . . ಆ ಹೆಮ್ಮೆ . . .ಇಂದಿಗೂ ನನ್ನ ನೆನಪಿನಲ್ಲಿ ಉಳಿದಿದೆ . ಹತ್ತಿರದಲ್ಲಿಯೇ ಇದ್ದ ನನ್ನ ಮಾವನಾದ ಎಮ್.ಕೆ. ಮೊಹಿಯುದ್ದೀನ್(ಮುಷ್ತಾಕ್‍ರವರ ತಂದೆ )ರವರ ಆಶೀರ್ವಾದವನ್ನು ಕೋರಿ ಅವರ ಮನೆಗೆ ಹೋದೆ . ಇಡೀ ಜೀವಮಾನದುದ್ದಕ್ಕೂ ಮಹಿಳೆಯ ಸ್ಥಾನ ಆಕೆಯ ಮನೆ ಮಾತ್ರ ಎಂದು ನಂಬಿದ್ದ , ವಾದಿಸುತ್ತಿದ್ದ , ಅನುಷ್ಠಾನಕ್ಕೆ ತಂದಿದ್ದ ನನ್ನ ಮಾವ , ನನ್ನನ್ನು ನೋಡಿ ಮುಖ ಸಿಂಡರಿಸಿದರು . ನಾನು ಒಂದಿಷ್ಟು ಗಾಬರಿಯಾದೆ . “ ಯಾರು ಹೊಲೆದಿದ್ದು ಈ ಕೋಟನ್ನು ?” ಎಂದು ಜೋರು ಮಾಡಿ ಕೇಳಿದರು . ಸದ್ಯ ! ನನ್ನ  ಕೋಟಿನ ಬಗ್ಗೆ ಅವರ ಆಕ್ಷೇಪಣೆ . . . ನನ್ನ ಬಗ್ಗೆ ಅಲ್ಲ ಎಂದು ಒಂದಿಷ್ಟು ನೆಮ್ಮದಿಯಾಯಿತು . “ನನಗೆ ಗೊತ್ತಿಲ್ಲಾ . . .ನಿಮ್ಮ ಮಗ ಹೊಲೆಸಿದ್ದು” ಅಂದೆ .  ‘ಅವನಿಗೆ ಏನು ತಿಳಿಯುತ್ತೆ ಕೋಟಿನ ವಿಷಯ . .. ಅವನು ಒಂದಾದರೂ ತೊಟ್ಟಿದ್ದರೆ ತಾನೇ . . . .’ ಎಂದು ಮಗನ ಅಲ್ಪ ಜ್ಞಾನದ ಬಗ್ಗೆ ಜರಿದು “ನನ್ನ ಜೊತೆ ಒಮ್ಮೆ ಮೈಸೂರಿಗೆ ಬನ್ನಿ . ಅಲ್ಲಿ ಅಜೀಜ್ ಅಂಡ್ ಸನ್ಸ್‍ನಲ್ಲಿ ಒಳ್ಳೆಯ ಕೋಟನ್ನು ಹೊಲಿಸಿಕೊಡುತ್ತೇನೆ ” ಎಂದು ವಾಗ್ದಾನವನ್ನು ಮಾಡಿ , ಚಿನ್ನದ ನಿಬ್ಬಿನ ಪೆನ್ನನ್ನು ಉಡುಗೊರೆಯಾಗಿ ನೀಡಿದರು .  ಅವರ ಕೋಣೆಯ ಬಾಗಿಲ ಬಳಿ ಮನೆ ಮಂದಿಯೆಲ್ಲಾ ನಿಂತಿದ್ದರು . ತವರು ಮನೆಯವರಿಂದ ಮಾತ್ರವಲ್ಲದೆ  ಪತಿಯ ಮನೆಯವರಿಂದ ಕೂಡಾ ನಿರೀಕ್ಷೆಗೆ ಮೀರಿ ದೊರಕಿದ  ಸಂಭ್ರಮ ಮತ್ತು ಸಂತೋಷದ ನಡುವೆ ನಾನು ಕರಿಕೋಟನ್ನು ತೊಟ್ಟೆ .
    ಮೊದಲ ಬಾರಿಗೆ ಹೊಸಕೋಟನ್ನು ತೊಟ್ಟ  ಪುಳಕ , ಗತ್ತುಗಾರಿಕೆ , ನಾಚಿಕೆ.ಸಂಕೋಚ,ಜವಾಬುದಾರಿ ,ತಲ್ಲಣ ಮೊದಲಾದ ಮಿಶ್ರ ಭಾವಗಳೊಡನೆ ಕೋರ್ಟಿನ ಆವಣದೊಳಗೆ ಹೊಕ್ಕೆ . ಆಮೂಲಕ ನನಗೆ ಅಪರಿಚಿತವಾಗಿದ್ದ ವಿನೂತನ ಲೋಕವೊಂದರಲ್ಲಿ ಕಾಲಿಟ್ಟೆ . ಅದಕ್ಕೂ ಮುಂಚಿತವಾಗಿ ಯಾವ ಆಫೀಸಿಗೆ ನಾನು ಸೇರಬೇಕೆಂಬುದರ ನಮ್ಮಸ್ನೇಹಿತರ ಬಳಿ ಸಲಹೆ ಪಡೆದಾಗ ಅನೇಕ ಜನರು ಹೆಚ್.ಪಿ. ನಾಗೇಂದ್ರಯ್ಯನವರ ಆಫೀಸಿಗೇ ನಾನು ಹೋಗಬೇಕೆಂದು ತಾಕೀದನ್ನು ಮಾಡಿದ್ದರು . ಹೀಗಾಗಿ , ನಾನು ಮೊದಲೇ ಹೆಚ್‍ಪಿಎನ್ ರವರವನ್ನು ಕಂಡು ಅವರ ಅನುಮತಿಯನ್ನು ಪಡೆದಿದ್ದೆ . ನಾನು ನ್ಯಾಯಾಲಯಕ್ಕೆ ಹೋದ ಮೊದಲನೆಯ ದಿನ ನನ್ನ ಸೀನಿಯರ್‍ಗೆ ಬೇರೆ ನ್ಯಾಯಾಲಯದಲ್ಲಿ ಕೆಲಸ ಇದ್ದುದರಿಂದ  ಅವರು ಸೆಷನ್ಸ್ ನ್ಯಾಯಾಲಯಕ್ಕೆ ನನ್ನನ್ನು ಕರೆದೊಯ್ದು , ಅಲ್ಲಿ ಇದ್ದ ಶ್ರೀ ಲಕ್ಕೇಗೌಡರನ್ನು ಕಂಡು ನನ್ನನ್ನು ನ್ಯಾಯಾಲಯಕ್ಕೆ ಪರಿಚಯಿಸಬೇಕೆಂದು ಕೇಳಿಕೊಂಡರು . ಹಿರಿಯ ವಕೀಲರಾದ  ಲಕ್ಕೇಗೌಡರಿಗೆ ನನ್ನ ಪರಿಚಯವಿತ್ತು . ನ್ಯಾಯಾಧೀಶರು ನ್ಯಾಯಾಲಯಕ್ಕೆ ಆಗಮಿಸುವ ಮೊದಲು , “ಓಪನ್ ಕೋರ್ಟ್ ”ಎಂದು ಕೂಗು ಹಾಕಿದ .. . . . . ಹೀಗೆ ಕೂಗು ಹಾಕಿದವನನ್ನು ಏನೆಂದು ಸಂಬೋಧಿಸುವುದೆಂದು ನನಗೆ ಈವೊತ್ತಿಗೂ ಸಮಸ್ಯೆ .ಕ್ಲಾಸ್ ಫೋರ್ . . .ಅಥವ ಆರ್ಡರ್ಲಿ ಅಥವ ನ್ಯಾಯಾಂಗ ನೌಕರ . . ..ಏಕೆಂದರೆ ವ್ಯವಸ್ಥಿತವಾದ ಶ್ರೇಣೀಕೃತ ವ್ಯವಸ್ಥೆಯೊಳಗೆ ನಾನು ಸಿಲುಕಿಕೊಂಡಿದ್ದೇನೆ ಎಂದು ನನಗೆ ಅನಿಸಿದ್ದು ಆಗಲೇ . ಎಲ್ಲರೂ ಎದ್ದು ನಿಂತರು .ನಾನು ಎದ್ದು ನಿಲ್ಲುವುದೋ . . .ಬೇಡವೋ ಎಂಬ ದ್ವಂದ್ವದಲ್ಲಿ  ಸಿಲುಕಿದ್ದೆ . ಪತ್ರಕರ್ತೆಯಾಗಿ ಕೆಲಸ ಮಾಡಿದ್ದ ಸಂದರ್ಭದಲ್ಲಿ ಯಾರೇ ಬಂದರೂ ಎದ್ದು ನಿಲ್ಲದ ಹಿನ್ನೆಲೆ ಇದ್ದುದರಿಂದ ಕೋರ್ಟಿನ ಇಡೀ ವ್ಯವಸ್ಥೆಯು ತೀರಾ ನಾಟಕೀಯವಾಗಿ ಕಂಡು ಬರತೊಡಗಿತು . ನಾನಿನ್ನೂ ಆ ಆಲೋಚನೆಯಲ್ಲಿ ಇರುವಾಗಲೇ ಲಕ್ಕೇಗೌಡರು  ಮುಂದೆ ಬಂದು ನನ್ನನ್ನು ಕೋರ್ಟಿಗೆ ಪರಿಚಯಿಸಿದರು . ಹಾಗೆ ಮಾಡುವಾಗ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿ ನನ್ನ ಸಮಾಜಸೇವೆಯ ಬಗ್ಗೆ ಕೂಡ ಹೇಳಿದರು . ನ್ಯಾಯಾಧೀಶರು ನನಗೆ ಆಲ್ ದಿ ಬೆಸ್ಟ್ ಹೇಳಿದ ನಂತರ  , ನಾನು ಕಾಡಿನಲ್ಲಿ ಕಳೆದು  ಹೋದ ಒಂಟಿ ಮಗುವಿನಂತಾದೆ . ಮುಂದೇನು ಮಾಡ ಬೇಕೆಂಬುದೇ ನನಗೆ ಗೊತ್ತಾಗಲಿಲ್ಲ . ಕೂಡಲೇ ಸಾವರಿಸಿಕೊಂಡು ನಾನು ನನ್ನ ಗೆಳತಿ ಪುಷ್ಪಳನ್ನು   ಹುಡುಕಿಕೊಂಡು ಹೊರಟೆ. ಪುಷ್ಪ ಲಾಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿದ್ದು ನನಗಿಂತ ಮೊದಲೇ ಪ್ರಾಕ್ಟೀಸಿಗೆ ಬಂದು ಸೀನಿಯರ್‍ರವರ ಆಫೀಸಿನಲ್ಲಿಯೇ ಇದ್ದರು .ಪುಷ್ಪ ನನ್ನ ಜೊತೆಯಾದರು . ಕೋರ್ಟಿನ ಮೈಚಳಿಯನ್ನು ಬಿಡಿಸುವಲ್ಲಿ ನನಗೆ ಸಹಾಯವನ್ನು ಮಾಡಿದರು . ಅಂಬೆಗಾಲಿಡುವ ಮಗುವಿಗೆ ಕೈಹಿಡಿದು ನಡೆಸುವಂತೆ ಮಾರ್ಗದರ್ಶಕರಾದರು .
    ಸೀನಿಯರ್‍ರವರನ್ನು ನೋಡುತ್ತಾ ನಾನು ಅನೇಕ ವೃತ್ತಿಪರ ನಡವಳಿಕೆಗಳನ್ನು ಮೈಗೂಡಿಸಿಕೊಂಡೆ . ಎಲ್ಲಕ್ಕಿಂತ ಮೊದಲು ಅವರ ಶಿಸ್ತು . . . ಕರಾರುವಾಕ್ಕಾಗಿ ಅವರು ಆಫೀಸಿಗೆ ಬಂದರೆಂದರೆ ನಾನು ಗಡಿಯಾರವನ್ನು ನೋಡುವ ಅಗತ್ಯವೇ ಇರುತ್ತಿರಲಿಲ್ಲ. ಹಾಗೆ ನೋಡಿದರೆ ಆಫೀಸಿಗೆ ಎಲ್ಲರಿಗಿಂತ ಮೊದಲು ಅವರೇ ಬರುತ್ತಿದ್ದರು . ಆಳವಾದ ಅಧ್ಯಯನವಿಲ್ಲದೆ ಅವರು ಯಾವುದೇ ಕೇಸನ್ನು ತಯಾರಿಸುತ್ತಿರಲಿಲ್ಲ . ಪ್ರಕರಣಕ್ಕೆ ಸಂಬಂಧ ಪಟ್ಟ ಪೂರ್ವ ತೀರ್ಪುಗಳನ್ನ ಮೊದಲಿಗೇ ಗುರುತುಹಾಕಿಕೊಂಡು , ಅವುಗಳ ಆಧಾರದ ಮೇಲೆ ಅವರು ಇಂದಿಗೂ ದಾವೆಯನ್ನು ತಯಾರಿಸುತ್ತಾರೆ . ಪ್ರತಿ ದಿನವೂ ಪರೀಕ್ಷೆಗೆ ಎಂಬಂತೆ ಅವರ ತಯಾರಿ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಂದು ಕೇಸಿನ ಬಗ್ಗೆ ಕೂಡಾ ವೈಯುಕ್ತಿಕ ಗಮನ ನೀಡುತ್ತಿದ್ದ ಅವರು , ಒಂದೇ ಒಂದು ಸರಳವಾದ ಫೈಲನ್ನು ಕೂಡಾ ನಾಳೆ ನೋಡೋಣ ಎಂದು ಉಡಾಫೆಯಿಂದ ವರ್ತಿಸಿದವರಲ್ಲ  . ಅದೇ ರೀತಿಯ ಶಿಸ್ತು ಮತ್ತು ಬದ್ಧತೆಯನ್ನು ಅವರು ಕಿರಿಯ ವಕೀಲರಿಂದಲೂ ಬಯಸುತ್ತಿದ್ದರು . ಕಿರಿಯ ವಕೀಲರು ಏನಾದರೂ ತಪ್ಪು ಮಾಡಿದ್ದಲ್ಲಿ ಅವರಿಗೆ ಉಳಿಗಾಲವಿರುತ್ತಿರಲಿಲ್ಲ . ಹೀಗಾಗಿ ಗಂಭೀರವಾಗಿ ವೃತ್ತಿಯನ್ನು ಮಾಡಬಯಸುವವರು ಮಾತ್ರ ಅವರ ಆಫೀಸಿಗೆ ಸೇರಿಕೊಳ್ಳುತ್ತಿದ್ದರು . ನನಗೆ ಈ ಯಾವ ವಿಷಯಗಳೂ ಗೊತ್ತಿಲ್ಲದೆ ಅವರ ಬಳಿ ಸೇರಿಕೊಂಡಿದ್ದೆ .
    ಒಮ್ಮೆ ನಾನು ವಕೀಲರ ಸಂಘದ ಬಳಿ ಬರುತ್ತಿದ್ದೆ . ಅಲ್ಲಿ ನನಗೆ ಹಿಂದಿನಿಂದಲೂ ಪರಿಚಯವಿದ್ದ ಮತ್ತು ಸಲುಗೆಯಿದ್ದ ಕೆಲ ವಕೀಲರು ನಿಂತುಕೊಂಡಿದ್ದರು .ನನ್ನನ್ನು ನೋಡಿ ಉಭಯಕುಶಲೋಪರಿ ವಿಚಾರಿಸಿ , “ಯಾರ ಆಫೀಸಿನಲ್ಲಿದ್ದೀರಿ ?’’ ಎಂದು ಕೇಳಿದರು . ಅವರಿಗೆ ಗೊತ್ತಿದ್ದ ವಿಷಯವಾಗಿತ್ತದು . ಏಕೆಂದರೆ ಆಗ ಕೇವಲ ನಾಲ್ಕು ಮಂದಿ ಮಹಿಳಾ ವಕೀಲರು ನಮ್ಮ ಬಾರ್‍ನಲ್ಲಿದ್ದರು . ಹೀಗಾಗಿ ಅವರ ಪೂರ್ವಾಪರಗಳು  ಬಾರ್‍ನಲ್ಲಿ ಎಲ್ಲರಿಗೂ ಗೊತ್ತಿತ್ತು .
ಆದರೂ ನಾನು “ನಿಮಗೇ ಗೊತ್ತಲ್ಲಾ ನಾನು ಹೆಚ್‍ಪಿಎನ್‍ರವರ ಬಳಿ ಇದ್ದೇನೆ ”ಎಂದೆ
“ಹಾಗೆಲ್ಲಾ ಇನಿಶಿಯಲ್ ಹೇಳಬಾರದು ; ಸೀನಿಯರ್‍ಗೆ ಅಗೌರವವಾಗುತ್ತೆ . ಪೂರ್ತಾ ಹೆಸರನ್ನು ಹೇಳಿ’’ ಎಂದರು .  ಅದು ಹೇಗೆ ಅಗೌರವವಾಗುತ್ತೆ ಎಂದು ನನಗೆ ಯೋಚನೆಗಿಟ್ಟುಕೊಂಡಿತು .ಆದರೂ ನಾನು ಸರಳವಾಗಿ “ಹೆಚ್.ಪಿ. ನಾಗೇಂದ್ರಯ್ಯನವರು ” ಎಂದೆ . ಆಗ ಅವರೊಲ್ಲಬ್ಬರು ನನ್ನನ್ನು ತಿದ್ದಿದರು . “ನಿಮ್ಮ ಸೀನಿಯರ್ ಹೆಸರೇ ನಿಮಗೆ ಗೊತ್ತಿಲ್ಲವೆಂದರೆ ಹೇಗೆ ? ಅವರ ಹೆಸರು ಹೆಚ್.ಬಿ. ನಾಗೇಂದ್ರಯ್ಯ ಎಂದು ’ ನೋಡಿದರೆ . . . ಅವರೆಲ್ಲರ ಮೋರೆಯಲ್ಲಿ ಕಿಡಿಗೇಡಿ ನಗುವು ಕಂಡೂ ಕಾಣದಂತೆ . . .! ನಾನು ವಿರೋಧಿಸಿದೆ “ ಛೇ! ಏನೇನೋ ಸುಳ್ಳುಗಳನ್ನು ಹೇಳಬೇಡಿ . ..ನಾನು ಹೇಳಿರೋದೇ ಸರಿ ’
“ಇಲ್ಲಾ ಮೇಡಮ್  ಹಾಸನದ ಬೆಂಕಿ ನಾಗೇಂದ್ರಯ್ಯನವರು ತಾನೇ ನಿಮ್ಮ  ಸೀನಿಯರ್ . ..ಹಾಗಾಗಿ ನಾವು ಹೇಳಿದಂತೆ  . . ಹೆಚ್. ಬಿ. ಯೇ ಸರಿ ’’
    ಅವರುಗಳೆಲ್ಲರಿಗೂ ನಗು ತಡೆಯುವುದೇ ಕಷ್ಟವಾಯಿತು . ಬಿದ್ದೂ ಬಿದ್ದೂ ನಗುತ್ತಿದ್ದ ಅವರು “ ನೋಡ್ತೀವಿ  . …ಅಲ್ಲಿ ಎಷ್ಟು ದಿನ ಉಳೀತೀರಿ   ಅಂತ” ಎಂದು ಹೇಳುತ್ತಿದ್ದರು .
ನಮ್ಮ ಸೀನಿಯರ್‍ನ ಗಂಭೀರ ವೃತ್ತಿಪರ ನಡವಳಿಕೆಯು ನನಗೆ ಇಷ್ಟವಾದದ್ದೂ ಅಲ್ಲದೆ ನನ್ನ ಮಗಳು ಲುಬ್‍ನಾ ಕೂಡಾ ವಕೀಲವೃತ್ತಿಗೆ ಬಂದಾಗ ಅವಳನ್ನು ನಾನು ನನ್ನ ಆಫೀಸಿಗೆ ಸೇರಿಸಲಿಲ್ಲ ;ಬದಲಿಗೆ ಸೀನಿಯರ್‍ರವರ ಆಫೀಸಿಗೆ ಕಳುಹಿಸಿದೆ . ಅವಳು ಈಗ ಬಹ್ರೈನಿನಲ್ಲಿ ಅಂತರರಾಷ್ಟ್ರೀಯ ಲಾ ಕಂಪನಿಯಲ್ಲಿ ಕಾನೂನು ವಿಭಾಗದ ಮುಖ್ಯಸ್ಥೆಯಾಗಿ ಉದ್ಯೋಗದಲ್ಲಿದ್ದಾಳೆ ಮತ್ತು ನನ್ನ ಹಾಗೂ ಅವಳ ಸೀನಿಯರ್‍ನ ಕಾರ್ಯವಿಧಾನವನ್ನು ಇಂದಿಗೂ ಸ್ಮರಿಸುತ್ತಾಳೆ .
    ಕಿರಿಯ ವಕೀಲರು ಮೊದಲು ಸರಿಯಾದ ಸೀನಿಯರ್‍ನ ಆಯ್ಕೆಯನ್ನು ಮಾಡಬೇಕಾಗುತ್ತದೆ . ಲಾ ಕಾಲೇಜಿನ ಓದು ಮತ್ತು ಪ್ರಾಕ್ಟೀಸಿನ ನಡುವೆ ಅಜಗಜಾಂತರ ಅಂತರವಿರುತ್ತದೆ . ಹೀಗಾಗಿ ಲಾಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ಕೂಡಲೇ ವಕೀಲರ ಆಪೀಸನ್ನು ಸೇರುವುದು ಉತ್ತಮ . ಏಕೆಂದರೆ , ಓದಿನ ನಡುವೆಯೇ ಅವರು ಆಫೀಸಿನ ಕೆಲಸ , ಕರಡು ರಚನೆಹಾಗೂ ನ್ಯಾಯಾಲಯದ ಭಾಷೆಮತ್ತು ನಡವಳಿಕೆಯ ಬಗ್ಗೆ ಅರಿವು ಹೊಂದಲು ಸಾಧ್ಯವಾಗುತ್ತದೆ .  ಮತ್ತು ಲಾ ಪರೀಕ್ಷೆಗೂ ಈ ಮೂಲಕ ಅಪಾರ ಸಹಾಯವಾಗುತ್ತದೆ  .ಇಲ್ಲವಾದಲ್ಲಿ ಕೋರ್ಟಿನಲ್ಲಿ ನಡೆಯುವ ಕಲಾಪವು ಒಂದಿನಿತೂ ಅರ್ಥವಾಗದಿದ್ದಲ್ಲಿ ವೃತ್ತಿಯನ್ನೇ ತೊರೆದು ಬಿಡುವಷ್ಟು ಅಸಹಾಯಕತೆ ಎನಿಸುತ್ತದೆ .
  ಕಿರಿಯ ವಕೀಲರಿಗೆ ಮೊದಲು ಅಪಾರ ತಾಳ್ಮೆ ಇರಬೇಕಾಗುತ್ತದೆ . ಹಿರಿಯ ವಕೀಲರ ಶ್ರೀಮಂತಿಕೆಯ ಹಿಂದೆ ಅವರ ಅಪಾರ ಪರಿಶ್ರಮವಿದೆ ಎಂಬ ವಾಸ್ತವತೆಯನ್ನು ಅರಿತುಕೊಂಡು ತಾವೂ ಕೂಡಾ ಈ ರೀತಿಯಲ್ಲಿ ಶ್ರಮಪಡಲು ಮಾನಸಿಕ ಸಿದ್ಧತೆಯನ್ನು ಹೊಂದಬೇಕಾಗುತ್ತದೆ .
 ಎಷ್ಟೋ ಕಿರಿಯ ವಕೀಲರಿಗೆ ಇಡೀದಿನ ಒಂದು ಲೋಟ  ಕಾಫಿ ಕುಡಿಯಲೂ ಕೂಡಾ ಹಣವಿರುವುದಿಲ್ಲ . ಆಕಾರಣದಿಂದಲೇ ಕೋರ್ಟ್ ಕ್ಯಾಂಟೀನಿಗೆ ಹೋದ ಅನೇಕ ಸೀನಿಯರ್‍ಗಳು ತಾವು ಬಿಲ್ ಕೊಡುವಾಗ  , ಅಲ್ಲಿ ಉಪಹಾರ ಅಥವ ಊಟಕ್ಕೆ ಬಂದಿರುವ ಜೂನಿಯರ್‍ಗಳ ಬಿಲ್ಲನ್ನು ಕೂಡಾ ಪಾವತಿ ಮಾಡಿ ಹೊರ ಬರುತ್ತಾರೆ. ಎಲ್ಲಾಜೂನಿಯರ್‍ಗಳು ತಮ್ಮ ಆಫೀಸಿನವರೇ ಆಗಬೇಕೆಂದೇನಿಲ್ಲ . ಆರೀತಿಯ ಹಿರಿತನ ಮತ್ತು ವಾತ್ಸಲ್ಯ ಕೂಡಾ ಬಾರ್‍ನಲ್ಲಿ ಕಂಡು ಬರುತ್ತದೆ . ಅದರ ಜೊತೆಯಲ್ಲಿ ಕಾಲೆಳೆಯುವಿಕೆ , ವೃತ್ತಿ ಮತ್ಸರ ಹಾಗೂ ದ್ವೇಷಾಸೂಯೆಗಳೂ ಕಂಡು ಬರುತ್ತವೆ . ಒಟ್ಟಿನಲ್ಲಿ  ವಕೀಲರ ಸಂಘವೆಂದರೆ ಅತಿ ದೊಡ್ಡ ಹಾಗೂ ಆಸ್ಫೋಟಕ ಹಂತವನ್ನು ತಲುಪಿರುವ ಕೂಡುಕುಟುಂಬ ಎಂದು ನನಗೆ ಅನಿಸುತ್ತದೆ.
     ನನ್ನ ಮೊದಲ ಸ್ವತಂತ್ರ ಕೇಸು ವಿಚಿತ್ರವಾದುದಾಗಿದೆ . ನನ್ನ ಸಂಬಂಧಿಯಾದ ಮಜ್ಜರ್ ಸಮಾಜ ಸೇವಾ ಸಂಸ್ಥೆಯೊಂದರ ಕಾರ್ಯಕರ್ತರಾಗಿದ್ದು , ಸದರಿ ಸಂಸ್ಥೆಯು ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಹಾಗೂ ಅನಾಥ ಶವಗಳ ಸಂಸ್ಕಾರ ಮುಂತಾದ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು . ಯಾವುದೋ ಒಂದು ಕುಟುಂಬವು ಸುಮಾರು ಆರೇಳು ವರ್ಷದ ಬುದ್ಧಿಮಾಂದ್ಯ ಮಗುವನ್ನು ಹಾಸನಕ್ಕೆ ಕರೆತಂದು ನಗರದ ಹೃದಯ ಭಾಗದಲ್ಲಿ ತೊರೆದು ಹೋಗಿತ್ತು . ಸಣ್ಣಗೆ ಬೀಳುತ್ತಿದ್ದ ಜಡಿ ಮಳೆಯಲ್ಲಿ ಆ ಗಂಡು ಮಗುವು ತೋಯ್ದು ತೊಪ್ಪೆಯಾಗಿತ್ತು . ಕನ್ನಡದ ಕೆಲ ಶಬ್ದಗಳನ್ನು ಬಿಟ್ಟರೆ ಆ ಮಗುವಿಗೆ ಬೇರೆ ಯಾವ ರೀತಿಯ ಮಾತು ಕೂಡಾ ಅರ್ಥವಾಗುತ್ತಿರಲಿಲ್ಲ. ಯಾರೋ ಆಮಗುವನ್ನು ತಂದು ಮಜ್ಹರ್ ಕೈಗೆ ಒಪ್ಪಿಸಿ ಹೋದರು .ಮಜ್ಹರ್ ಆಮಗುವನ್ನು ಪೋಲೀಸ್ ಠಾಣೆಗೆ ಕರೆದೊಯ್ದರು . ಪೋಲೀಸಿನವರು ಅವರಿಗೆ ಬೆಂಗಳೂರಿನ ಯಾವುದೋ ಒಂದು ಬುದ್ದಿ ಮಾಂದ್ಯ ಮಕ್ಕಳ  ಶಾಲೆಯ ವಿಳಾಸವನ್ನು ನೀಡಿ ಅಲ್ಲಿಗೆ ತಲುಪಿಸಲು ಹೇಳಿದರು . ಮಜ್ಹರ್ ಆ ಮಗುವನ್ನು ಹಿಡಿದು ಅಲ್ಲಂದಿಲ್ಲಿಗೆ  ಎಡತಾಕಿದ್ದೇ ಆಯಿತು . ಆ ಮಗುವಿಗೊಂದು ನೆಲೆ ಕಾಣಿಸಲು ನಡೆಸಿದ ಸರ್ವ ಪ್ರಯತ್ನವೂ ಕೂಡಾ ವ್ಯರ್ಥವಾಯಿತು . ಆ ಮಗುವಿಗೆ ಮಲ ಮೂತ್ರ ವಿಸರ್ಜನೆಯ ಪರಿಜ್ಞಾನವೂ ಇಲ್ಲದೆ ಇದ್ದುದರಿಂದ ಅದನ್ನು ಪ್ರತಿನಿತ್ಯವೂ ನಿರ್ಮಲವಾಗಿ ಇಡುವುದೇ ಮುಖ್ಯ ಕಾಯಕವಾಗಿ ಮಜ್ಹರ್ ಖುದ್ದು ಈ ಕ್ರಿಯೆಯಲ್ಲಿ ಹೈರಾಣಾಗಿ ಹೋಗಿದ್ದರು . ಕೊನೆಗೂ ಅವರು ನನ್ನ ಬಳಿ ಬಂದು ತಮ್ಮ ಸಮಸ್ಯೆಯನ್ನಿಟ್ಟರು . ನನಗೆ ಏನು ಮಾಡಬೇಕೆಂದು ತೋಚದೆ , ಸೀನಿಯರ್ ಎದುರಿಗೆ ನನ್ನ ಸಮಸ್ಯೆಯನ್ನಿಟ್ಟೆ.  ಇಂಡಿಯನ್ ಲುನಾಸಿ ಆಕ್ಟನ್ನು ಓದಿ ಅರ್ಜಿಯನ್ನು ಹಾಕುವಂತೆ ಅವರು ಹೇಳಿದರು . ನಾನು ಪೂರ್ತಾ ಆಕ್ಟನ್ನು ಓದಿ  ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ಅರ್ಜಿಯನ್ನು ಗುಜರಾಯಿಸಿದೆ . ವೇದಿಕೆಯ ಮೇಲೆ ಲೀಲಾಜಾಲವಾಗಿ ಭಾಷಣಗಳನ್ನು ಮಾಡುತ್ತಿದ್ದ ನನಗೆ ಸಣ್ಣಗೆ ನಡುಕ ಆರಂಭವಾಯಿತು . ಆದರೆ ನನ್ನ ಅರ್ಜಿಯ ಮೇಲೆ ವಾದವನ್ನು ಆರಂಭಿಸಿದ ನಂತರ ನಾನಿದ್ದೆ. . .ಮತ್ತು ನ್ಯಾಯಾಧೀಶರಿದ್ದರು . ಉಳಿದ ಯಾರೂ ಕೂಡಾ ನನ್ನ ಅರಿವಿನ ಪ್ರಜ್ಞೆಯಲ್ಲಿ ಉಳಿಯಲಿಲ್ಲ . ನ್ಯಾಯಾಧೀಶರು ಮಾರನೆಯ ದಿನ ನನ್ನ ಅರ್ಜಿಯ ಮೇಲೆ ಆದೇಶ ಮಾಡುವುದಾಗಿ ಹೇಳಿದರು. ಇಡೀ ರಾತ್ರೆ ನನಗೆ ನಿದ್ರೆ ಬರಲಿಲ್ಲ .  ಏನು ಆದೇಶ ಮಾಡುವರೋ. . . ?  ನನ್ನ ಯಾವ ಪರೀಕ್ಷೆಯ ಫಲಿತಾಂಶವನ್ನು ಕೂಡಾ ನಾನು ಅಷ್ಟೊಂದು ಕಾತುರದಿಂದ ನಿರೀಕ್ಷಿಸಿರಲಿಲ್ಲ . ಮಾರನೆಯ ದಿನ ಆದೇಶವಾಯಿತು . ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ . ಆ ಮಗುವನ್ನು ಕೂಡಲೇ ಸಂಬಂಧ ಪಟ್ಟ ಪೋಲೀಸಿನವರು ತಮ್ಮವಶಕ್ಕೆ ಪಡೆಯಬೇಕೆಂದು ಆದೇಶಮಾಡಿದ್ದು , ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವನ್ನು ಮೂರುದಿನಗಳವರೆಗೆ ಚಿಕಿತ್ಸೆಗೆ ಒಳಪಡಿಸಿ , ತದನಂತರ ಬೆಂಗಳೂರಿನ ಬುದ್ಧಿ ಮಾಂದ್ಯ ಮಕ್ಕಳ ಕೇಂದ್ರದಲ್ಲಿ ದಾಖಲು ಮಾಡಿ ನ್ಯಾಯಾಲಯಕ್ಕೆ  ವರದಿ ಒಪ್ಪಿಸಬೇಕೆಂತಲೂ ಆದೇಶವಾಗಿತ್ತು . ಆಸ್ಪತ್ರೆಯಲ್ಲಿ ಆ ಮಗುವನ್ನು ದಾಖಲು ಮಾಡಿದ್ದು , ಸರದಿಯಂತೆ ಇಬ್ಬರು ಪೋಲೀಸಿನವರು ಅದರ ಕೈಂಕರ್ಯಕ್ಕೆ ಮೀಸಲಾಗಿದ್ದರು .ಈಗ ಪೋಲೀಸಿನವರು ಮಜ್ಹರ್‍ನ ಬೆನ್ನು ಹತ್ತಿದ್ದರು . ಈ ಮಗುವನ್ನು ನಾವು ಹೇಗೆ ಬೆಂಗಳೂರಿಗೆ ಕರೆದೊಯ್ಯಬೇಕು . .. ನೀವೇ ಸಹಾಯ ಮಾಡಿ ಎಂದು . ಆ ಮಗುವಿಗೊಂದು ಸೂಕ್ತ ನೆಲೆ ಸಿಕ್ಕಿದ್ದಕ್ಕೆ ಖುಷಿಯಾಗಿದ್ದ ಮಜ್ಹರ್ ಬೆಂಗಳೂರಿನತ್ತ ತಮ್ಮ ಕಾರನ್ನು ಓಡಿಸಿದ್ದೇ ಓಡಿಸಿದ್ದು . ಮೊಟ್ಟ ಮೊದಲ ಈ ಪ್ರಕರಣದಲ್ಲಿ ಸಿಕ್ಕ ಆದೇಶವು ನನ್ನ ಆತ್ಮಬಲವನ್ನು ಹೆಚ್ಚಿಸಿತು. ನ್ಯಾಯ ದಂಡದ ಬಲದ ಅರಿವಾಯಿತು. ಹೀಗೆ ನ್ಯಾಯದಾನ ಪ್ರಕ್ರಿಯೆಯಲ್ಲಿ ನನ್ನದೊಂದು ಪುಟ್ಟ ಪ್ರವೇಶಿಕೆಯು ಆರಂಭವಾಯಿತು .
    ಹಾಸನವು ಜಿಲ್ಲಾ ಕೇಂದ್ರವಾದುದರಿಂದ ನನಗೆ ಯಾವುದೇ ಒಂದು ವಿಷಯದಲ್ಲಿ ಪರಿಣಿತಿಯನ್ನು  ಪಡೆಯುವತ್ತ ಗಮನವನ್ನು  ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ . ಬದಲಿಗೆ ನಮ್ಮ ಕಕ್ಷಿದಾರರ ಅಗತ್ಯಕ್ಕೆ ತಕ್ಕಂತೆ ಸಿವಿಲ್ ,ಕ್ರಿಮಿನಲ್,ವಾಹನ ಅಪಘಾತ ಮತ್ತು ಕೌಟುಂಬಿಕ ಸಮಸ್ಯೆಗಳು  ಮುಂತಾದ ಎಲ್ಲಾ ವಿಧದ ಪ್ರಕರಣಗಳಲ್ಲಿಯೂ ಪರಿಹಾರವನ್ನು ಪಡೆಯಬೇಕಾಗುತ್ತದೆ. ಒಮ್ಮೆ ನಮ್ಮ ಆಫೀಸಿಗೆ ಅನಿತಾ ಎಂಬ ಹೆಣ್ಣುಮಗಳು ಬಂದಳು . ಆಕೆಯ ಜೊತೆಯಲ್ಲಿ ಸುಮಾರು ಎರಡು ವರ್ಷದ ಮಗುವೊಂದಿತ್ತು. ಆಕೆ ತನಗೆ ವಿಚ್ಛೇದನವನ್ನು ಕೊಡಿಸಬೇಕೆಂದು ಕೇಳಿದಳು . ಮಾತಿನ ಮಧ್ಯ ತಾನು ವೈಶ್ಯ ಸಮುದಾಯಕ್ಕೆ ಸೇರಿದವಳು ಎಂದು ಹೇಳಿದಾಗ ನನಗೆ ಅತೀವ ಬೇಸರವಾಯಿತು . ಆ ಸಮುದಾಯದಲ್ಲಿ ಮರು ಮದುವೆಯಾಗುವ ಸಂಪ್ರದಾಯವಿಲ್ಲವಾದುದರಿಂದ ಚಿಕ್ಕ ಪ್ರಾಯದ ಮಹಿಳೆಯ ಮುಂದಿನ ಬದುಕೇನು ಎಂದು ನನಗೆ ಕಳವಳವಾಯಿತು . ಆಕೆಗೆ ಸುಮಾರು ಇಪ್ಪತ್ತು ವರ್ಷದ ಆಸುಪಾಸು ಇರಬಹುದೆಂದು ನನ್ನ ಅಂದಾಜು . ನಾನು ಅವಳ ಬದುಕಿನ ಹಿನ್ನೆಲೆಯನ್ನು ಕೆದಕಿದಾಗ , ಅವಳ ತಂದೆಯ ಅಕಾಲಿಕ ಸಾವಿನಿಂದ  ಆರ್ಥಿಕವಾಗಿ ಕಂಗೆಟ್ಟ ಅವಳ ತವರು ಕುಟುಂಬದ ನಡವಳಿಕೆಯು ಬಾಂಧವ್ಯದ ಮೇಲೆ ಕೂಡಾ ಪರಿಣಾಮವನ್ನು ಬೀರಿದೆ ಎಂದು ತಿಇದುಬಂದಿತು. ಈ ವಿವರಗಳನ್ನು ತಿಳಿಯುವ ಹೊತ್ತಿಗೆ , ಆಕೆಯ ಪತಿಯೂ ಕೂಡಾ ಬಂದ , ಕುಮಾರ್ ಎಂದು ಅವನ ಹೆಸರು . (ಹೆಸರುಗಳನ್ನು ಬದಲಾಯಿಸಾಗಿದೆ). ನಾನು ನನ್ನ ಆಫೀಸಿನ ವೇಳೆ ಮುಗಿದ ನಂತರ ಒಂದು ವಾರದವರೆಗೆ ಸತತವಾಗಿ ಅವರಿಗೆ ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಕೌನ್ಸೆಲಿಂಗ್ ಮಾಡಿದೆ .  ಒಂದು ವಾರ ಕಳೆದ ನಂತರ ಅವರಿಬ್ಬರೂ ವಿಚ್ಛೇದನದ ತಮ್ಮ ತೀರ್ಮಾನವನ್ನು ಕೈ ಬಿಟ್ಟರು . .ನಮ್ಮ ಆಪೀಸಿನೆದುರಿಗೆ ಪಾರ್ಕ್ ಮಾಡಿದ್ದ ಆತನ ಬೈಕಿನಲ್ಲಿ ಮುಂದೆ ತನ್ನ  ಮಗನನ್ನು ಹಿಂದೆ ಹೆಂಡತಿಯನ್ನು ಕೂರಿಸಿಕೊಂಡು ಹಕ್ಕಿಯಂತೆ ತೇಲಿ ಹೋದ . ಮುಂದೆ ಅವರಿಬ್ಬರೂ ಸೇರಿ ಸಮೀಪದ ಊರಿನಲ್ಲಿ ಒಂದು ಔಷಧದ ಅಂಗಡಿಯನ್ನು ತೆರೆದರು . ಆರಂಭೋತ್ಸವಕ್ಕೆ ಬರಲೇ ಬೇಕೆಂದು ಆಗ್ರಹಪೂರ್ವಕವಾಗಿ ಕರೆದರು . ನನಗೆ ಬಿಡುವಿರಲಿಲ್ಲವಾದುದರಿಂದ ಹೋಗಲು ಆಗಲಿಲ್ಲ . ಆ ವಿಷಯವನ್ನು ನಾನುು ಅಲ್ಲಿಗೇ ಮರೆತೆ .ಸುಮಾರು ಆರು ತಿಂಗಳ ನಂತರ,   ನಾನು ನನ್ನ ಕುಟುಂಬದವರೊಡನೆ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದೆ . ಹಾಸನ ಮತ್ತು ಬೆಂಗಳೂರಿನ ನಡುವಿನ ಪ್ರಯಾಣದಲ್ಲಿ ಮಧ್ಯದ ತಾಣವಾಗಿ ಬಹುತೇಕ ಪ್ರಯಾಣಿಕರು ಆಯ್ದುಕೊಳ್ಳುವುದು ಬೆಳ್ಳೂರು ಕ್ರಾಸಿನ ಮಯೂರ ಹೋಟೆಲನ್ನು . ಮಯೂರ ಹೋಟೆಲಿನಲ್ಲಿ ನಾವು ಉಪಹಾರವನ್ನು ಸೇವಿಸುತ್ತಿದ್ದೆವು . ನೋಡಿದರೆ , ನಮ್ಮ ಟೇಬಲಿನ ಸುತ್ತ ಹಾಸನದ ವೈಶ್ಯಸಮುದಾಯದ ಅಪಾರ ಜನರು ಸುತ್ತುವರೆದಿದ್ದರು  .ಅವರೆಲ್ಲರೂ ಕನ್ನಿಕಾ ಪರಮೇಶ್ವರಿ ಸಂಘದ ವತಿಯಿಂದ ಒಟ್ಟಿಗೆ ಟೂರ್ ಹೊರಟಿದ್ದರು. ಎಲ್ಲರೂ ಗುರುತು ಪರಿಚಯದವರಾದ್ದರಿಂದ ನಾನು ಕೂಡಾ ಎದ್ದು ನಿಂತೆ . ಒತ್ತಾಯಪೂರ್ವಕವಾಗಿ ನನ್ನನ್ನು ಕೂರಿಸಿ  ಕೇಳಿದರು , ‘ನಾವು ನಮ್ಮ ಸಂಘದಲ್ಲಿ ಈ ಪ್ರಕರಣವನ್ನು ಇತ್ಯರ್ಥ ಮಾಡಲು ಸುಮಾರು ಮೂರು ತಿಂಗಳವರೆಗೆ   ಪ್ರಯತ್ನಿಸಿದೆವು. ಆದರೆ ಅನಿತಾ ಮತ್ತು ಕುಮಾರ್‍ನ ನಡುವೆ ಸೌಹಾರ್ದಯುತ ಸಂಬಂಧವನ್ನು ಏರ್ಪಡಿಸಲು ನಮಗೆ ಸಾಧ್ಯವಾಗಲಿಲ್ಲ . ..ಕೊನೆಗೆ ನ್ಯಾಯಾಲಯದ ಮೂಲಕ ವಿಚ್ಛೇದನವನ್ನು ಪಡೆದುಕೊಳ್ಳಿ ಎಂದು ನಿಮ್ಮ ಬಳಿ ಕಳುಹಿಸಿದೆವು . ನೀವು ಇದನ್ನು ಹೇಗೆ ಸಾಧಿಸಿದಿರಿ ? ’  ಅವರ ಅಭಿಮಾನಪೂರ್ವ ನುಡಿಗಳಿಂದ ನನಗೆ ತುಂಬಾ ಸಂತೋಷವೆನಿಸಿತು .
     ಆಗ ನನಗೆ  ಕಾನೂನಿನ ಇತಿಹಾಸದಲ್ಲಿ ದಾಖಲಾದ  ಆಕೆ  ನೆನಪಾದಳು . . . .1875ನೆಯ ಇಸವಿಯಲ್ಲಿ ಲಾವೆನಿಯಾ ಗುಡೆಲ್ ವಿಸ್‍ಕಾನ್‍ಸಿನ್‍ನ ಸುಪ್ರೀಮ್ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿ ಬಾರ್ ಕೌನ್ಸಿಲಿನಲ್ಲಿ ಪ್ರವೇಶಾವಕಾಶವನ್ನು  ಕೋರಿದಾಗ , ನ್ಯಾಯಾಲಯವು ಹೌಹಾರಿತು .  ಕಾನೂನೀಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮೃದು ಸ್ವಭಾವ ಹಾಗೂ ಜಾಣ್ಮೆಯ ಕೊರತೆಯಿಂದ ಮಹಿಳೆಯರು ಅನರ್ಹರಾಗಿದ್ದಾರೆ ಎಂಬ ಸಾರ್ವತ್ರಿಕ ವಾದವನ್ನೇ ಕಣ್ಣು ಮುಚ್ಚಿ ನಂಬಿದ್ದ ಸರ್ವೋಚ್ಚ ನ್ಯಾಯಾಲಯವು ಆಕೆಯ ಬೇಡಿಕೆಯಿಂದ ತೀರಾ ಮುಜುಗರಕ್ಕೆ ಒಳಗಾಯಿತು . ನ್ಯಾಯಾಲಯದ ಸಂದಿಗ್ಧ ಪ್ರಕ್ರಿಯೆ ಮತ್ತು ರಣರಂಗದ ದೈಹಿಕ ಹಣಾಹಣಿಗಾಗಿ  ಮಹಿಳೆಯನ್ನು ಪ್ರಕೃತಿಯು  ರೂಪಿಸಿಲ್ಲ ಬದಲಿಗೆ ಆಕೆಯನ್ನು ಇನ್ನಷ್ಟು ಸೌಮ್ಯ ಹಾಗೂ ಉತ್ತಮ ಕಾರ್ಯಗಳಿಗಾಗಿ ಮೀಸಲಿಡಬೇಕಾಗಿದೆ ಎಂದು ಅಭಿಪ್ರಾಯವನ್ನು ಪಟ್ಟ ನ್ಯಾಯಾಲಯವು ಆಕೆ ಉತ್ತಮ ತಾಯಿ ಹಾಗೂ ಸಂಸ್ಕಾರವಂತಳಾಗಿ ಮನೆಯಲ್ಲಿ ಉಳಿಯಲಿ ಎಂದು ಆದೇಶವನ್ನು ನೀಡಿತು . ಅಷ್ಟೇ ಅಲ್ಲದೆ ಆಕೆಯ ಅರ್ಜಿಯನ್ನು ತಿರಸ್ಕರಿಸಿತು .
    ಇಲಿನಾಯ್ಸಿನ ಸವೋಚ್ಚ ನ್ಯಾಯಾಲಯವು 1872ರಲ್ಲಿ ಮೈರಾ ಬ್ರಾಡ್‍ಮನ್‍ಳ ಅರ್ಜಿಯನ್ನು ತಿಸ್ಕರಿಸುತ್ತಾ ಮಹಿಳೆಯು ಯಾಕೆ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಲು ಅನರ್ಹಳಾಗಿದ್ದಾಳೆ ಎಂಬುದನ್ನು ಸಕಾರಣಗಳಿಂದ ನಿರೂಪಿಸಿದೆ . ಅಲ್ಲಿನ ವಿವಾಹಿತ ಮಹಿಳೆಯರು , ಆಗಿನ ಸಾಮಾಜಿಕ ಸಂದರ್ಭದಲ್ಲಿ ಪತಿಯ ಅಪ್ಪಣೆಯ ವಿನಾ ಮಾಡಿ ಕೊಂಡ ಯಾವುದೇ ಕರಾರು ಅಸಿಂಧುವಾಗುತ್ತಿತ್ತು . ಹೀಗಾಗಿ ಮಹಿಳೆಯು ವಕೀಲಳಾಗಿ ತನ್ನ ಕಕ್ಷಿದಾರರೊಂದಿಗೆ ಮಾಡಿಕೊಂಡ ಕರಾರು ಕೂಡಾ  ಅಸಿಂಧುವಾಗುತ್ತಿತ್ತು ಎಂಬ ಕಾರಣವನ್ನು ನೀಡಿ ಆಕೆಯ ಅರ್ಜಿಯನ್ನು ತಿರಸ್ಕರಿಸಾಯಿತು . ಕೊನೆಗೂ ಈ ನಿಟ್ಟಿನಲ್ಲಿ ಮಹಿಳೆಯರ ಹೋರಾಟವು ಮುಂದುವರೆಯುತ್ತಲೇ ಬಂದಿತು . ಅಂತೂ 1873ರಲ್ಲಿ ಬೆಲ್ವಾ ಲಾಕ್‍ವುಡ್ ನಡೆಸಿದ ದೀರ್ಘ ಹೋರಾಟವು ಫಲ ಕೊಟ್ಟಿತು ಮತ್ತು ವಾಷಿಂಗ್‍ಟನ್ ಡಿಸಿಯ ಬಾರ್ ಅವಳನ್ನು ವಕೀಲಳೆಂದು ಮಾನ್ಯತೆ ನೀಡಬೇಕಾಯಿತು . ಭಾರತದ ಮೊತ್ತ ಮೊದಲ ಮಹಿಳಾ ನ್ಯಾಯವಾದಿಯಾಗಿ ನಿರಾಕರಣೆಯ ಅಬೇಧ್ಯ ಗೋಡೆಯನ್ನು ಒಡೆದ ಕೀರ್ತಿ ಸಲ್ಲುವುದು ರಾಮೋ ದೇವಿ ಗುಪ್ತಾಗೆ . ಈ ಅದ್ಭುತ ಚೇತನಗಳು ನಮ್ಮಂತಹವರಿಗಾಗಿ ನಡೆಸಿದ ಹೋರಾಟ ಆ ಮೂಲಕ ನಮಗೆ ಸಿಕ್ಕಿರುವ ಅವಕಾಶಗಳು ಕಾನೂನೀ ಚರಿತ್ರೆಯ ಅವಿಭಾಜ್ಯ ಅಂಗಗಳಾಗಿ  ದಾಖಲಾಗಿವೆ . ಕಾನೂನೀ ಕ್ಷೇತ್ರದ ನನ್ನ ಹಲವಾರು ಅನುಭವಗಳು ಇನ್ನೂ ನಾಚಿಕೆಮುಳ್ಳುಗಳಂತೆ ಮುದುಡಿ ಮರೆಯಾಗಿವೆ .       
   

ಬೆಳಗೋಡಿನ ಶಾಲೆಗೆ ಮುಷ್ತಾಕ್ ನನ್ನನ್ನು ಮೋಟಾರ್ ಬೈಕಿನಲ್ಲಿ ಕರೆದೊಯ್ದಿದ್ದರು . ಮರಳಿ ಬರುವಾಗ ಬೆಳಗೋಡನ್ನು ಬಿಟ್ಟ ಕೂಡಲೇ ನಾನು ತಡೆದಿದ್ದ ದುಃಖವೆಲ್ಲಾ ಧುಮ್ಮಕ್ಕಿತು . ನಾನು ತೀರಾ ಅಸಹಾಯಕಳಾದಂತೆ , ನನ್ನ ಬದುಕೇ ಮುಕ್ತಾಯವಾದಂತೆ ನನ್ನದುರಿಗೆ ಇನ್ನು ಯಾವ ಆಯ್ಕೆಗಳೇ ಇಲ್ಲದಂತೆ . .. . ಹೀಗೆ ನಿರಾಶೆಯ ಮಡುವಿನಲ್ಲಿ ನಾನು ಮುಳುಗಿ ಹೋದೆ . ನನ್ನ ಅಳುವಿಗೆ ಅಂಕೆಯೇ ಇರಲಿಲ್ಲ . ಮುಷ್ತಾಕ್‍ಗೆ ಅಪಾರ ಗಾಬರಿ . ಮೊದಲನೆಯದಾಗಿ ನನ್ನನ್ನು ಸಂತೈಸಲು ಅವರ ಬಳಿ ಪದಗಳಿರಲಿಲ್ಲ . ಎರಡನೆಯದಾಗಿ ನನ್ನ ಕೊನೆಯಿಲ್ಲದ ಭೀಕರ ಅಳುವಿನ ನಡುವೆ ನಾನು ಬೈಕಿನಿಂದ ಬಿದ್ದರೆ ಏನು ಗತಿ ಎಂಬ ಚಿಂತೆ . ಬೈಕ್  ನಿಲ್ಲಿಸೋಣವೆಂದರೆ ಸುತ್ತಾ ಜನ ಸೇರಿದರೆ ಎಂಬ ಗಾಬರಿ . ಮುಷ್ತಾಕ್ ಮದುವೆಗಿಂತಲೂ ಹಿಂದಿನಿಂದ ನನ್ನ ಸಂಬಂಧಿ . ಮತ್ತು ನಾವಿಬ್ಬರೂ ಅನೇಕ ವರ್ಷಗಳ ಕಾಲ ಪ್ರೇಮಿಸಿ ಮದುವೆಯಾದವರು . ಮತ್ತು ನನ್ನನ್ನು ಮೆಚ್ಚಲು ಅವರಿಗೆ ಇದ್ದ ಕಾರಣಗಳೆಂದರೆ ನಾನು ಅತಿ ಧೈರ್ಯವಂತೆ ಎಂಬುದೂ ಕೂಡಾ ಒಂದು . ಆ ಪ್ರೀತಿ ಮತ್ತು ಪ್ರೇಮದ ಕಾಲದಲ್ಲಿ ಯಾವೊತ್ತೂ ಅವರು ನನ್ನ  ಈ ಭೀಭತ್ಸ, ಭಾವನಾತ್ಮಕ ಮತ್ತು ಭೀಕರ ಸ್ವರೂಪವನ್ನು ನೋಡಿರಲಿಲ್ಲ . ಆ ಕಾಲದಲ್ಲಿ ನಾನು ತೀರಾ ಸಂಭಾವಿತತನ ಮತ್ತು ನಯ ನಾಜೂಕಿನ ಸದ್ಗುಣಗಳನ್ನೇ ಮೆರೆದಿದ್ದೆ . ನನ್ನ ಈಪರಿಸ್ಥಿತಿಯಲ್ಲಿ ಹಾಸನಕ್ಕೆ ಅಂದರೆ  ಅವರ ಮನೆಗೆ ನನ್ನನ್ನು ಕರೆದುಕೊಂಡು ಹೋಗದೆ , ಆಗ ಬೇಲೂರಿನಲ್ಲಿ ವಾಸವಾಗಿದ್ದ ನನ್ನ ತಂದೆ ತಾಯಿಯರ ಬಳಿ ನನ್ನನ್ನು ಕರೆದುಕೊಂಡು ಬಂದರು ಹಾಗೂ ಒಂದು ವಾರ ಕಳೆದ ನಂತರ ನಾನು ಸ್ವಲ್ಪ ನಾರ್ಮಲ್ ಆಗಿದ್ದೇನೆ ಎಂದು ಅವರಿಗೆ ಖಾತರಿಯಾದಾಗ ತಮ್ಮ ಮನೆಗೆ ಕರೆದುಕೊಂಡು ಹೋದರು . ಅವರ ಮನೆ ಎಂದರೆ ಆಗ ನನ್ನ ಅತ್ತೆ ಮಾವ  ಮೈದುನಂದಿರು , ನಾದಿನಿಯರು ಎಲ್ಲಾ ಸೇರಿದಂತೆ ಸುಮಾರು 20-25 ಮಂದಿಯಿಂದ ಕೂಡಿದ ಒಟ್ಟು ಕುಟುಂಬವಾಗಿತ್ತು ಮತ್ತು ನಾನು ಹಿರಿಯ ಸೊಸೆಯಾಗಿದ್ದೆ .

     ಕನಸು ಮನಸ್ಸಿನಲ್ಲಿಯೂ ನಾನು ವಕೀಲಳಾಗಲು ಸಿದ್ಧತೆ ನಡೆಸಿದವಳಲ್ಲ .ಬದಲಿಗೆ ವೈದ್ಯಳಾಗಲು ಆರಂಭದಿಂದಲೂ ನನಗೆ ಉತ್ತೇಜನವನ್ನು ನೀಡಲಾಗಿತ್ತು . ನನ್ನ ತಂದೆ ಹೆಲ್ತ್ ಇನ್Àಸ್ಪೆಕ್ಟರ್ ಆಗಿದ್ದು  ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು , ಅಪಾರ ಸಾಮಾಜಿಕ ಕಾಳಜಿಯನ್ನು ಹೊಂದಿದವರಾಗಿದ್ದರು .ಹೀಗಾಗಿ ನಾನು ವೈದ್ಯಳಾಗಿ ನನ್ನ ಬದುಕನ್ನು ರೂಪಿಸಿಕೊಂಡು ರೋಗಿಗಳ ಸೇವೆಯನ್ನು ನಿಷ್ಠೆಯಿಂದ ಮಾಡಬೇಕೆಂದು ಅವರ ಅಭಿಲಾಷೆಯಾಗಿತ್ತು . ಆದರೆ , ನಾನು ನನ್ನ ಪಿಯುಸಿ ಪರೀಕ್ಷೆಯಲ್ಲಿ ಸಾಕಷ್ಟು ಅಂಕಗಳನ್ನು ಪಡೆಯಲಿಲ್ಲ . ಆದಕಾರಣ ಬಿಎಸ್ಸಿ ಪದವಿಗೆ ಪ್ರವೇಶವನ್ನು ಪಡೆದೆ . ತದನಂತರ ಸ್ನಾತಕೋತ್ತರ ಪದವಿಯನ್ನು ಹೊಂದಿ , ಕಾಲೇಜಿನಲ್ಲಿ ಬೋಧನೆ ಮಾಡಬಹುದೆಂದು ನಾನು ಅಂದುಕೊಂಡಿದ್ದೆ.

No comments:

Post a Comment