Monday 27 April 2015

ಸ್ವರ್ಗವೆಂದರೆ


                                                                                                                 * ಬಾನುಮುಷ್ತಾಕ್
         ಶಮೀಮ್ ಬಾನುವಿನ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಅತ್ಯಂತ ಕಠಿಣ ಕೆಲಸ ಎಂಬುದು ಆಕೆಯ ಕುಟುಂಬದವರ ಅಭಿಪ್ರಾಯವಾಗಿತ್ತು .ಆಕೆ ಮೊದಲು ಹೀಗಿರಲಿಲ್ಲಾ  ಈಗೇಕೆ ಹೀಗಾದಳು ಎಂದು ಸಾದತ್ ಚಿಂತಿತನಾಗಿದ್ದ . ಸರ್ಕಾರಿ ಪ್ರೌಢ ಶಾಲೆಯಲ್ಲಿ ಉರ್ದು ಭಾಷೆಯ  ಅಧ್ಯಾಪಕನಾಗಿದ್ದ ಆತ ತನ್ನ ಬಿಡುವಿನ ವೇಳೆಯನ್ನೆಲ್ಲಾ ಅವಳ ವರ್ತನೆಯ ಬಗ್ಗೆ  ವಿಶ್ಲೇಶಸಲು ಮೀಸಲಾಗಿಟ್ಟಿದ್ದು , ಆಕೆಗೆ ಜಿನ್ ಏನಾದರೂ ಮೆಟ್ಟಿರಬಹುದೇ  ಎಂಬ ತೀವ್ರ ಆಲೋಚನೆಗೂ ಗುರಿಯಾಗಿದ್ದ . ಅಷ್ಟೇನೂ ಓದುವ ಹವ್ಯಾಸವಿಲ್ಲದ ಆತನ ಕಣ್ಣಿಗೆ ಸ್ಟಾಫ್ ರೂಮಿನಲ್ಲಿ ದಿನಪತ್ರಿಕೆಯೊಂದರ ಲೇಖನವೊಂದು ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದು , ಈ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಅವನ ಪ್ರಯತ್ನಕ್ಕೆ  ಫಲ ದೊರಕಿದಂತಾಯಿತು . ಹೀಗಾಗಿ  ಅವಳು ಮೆನೋಪಾಸ್‍ನ ಸ್ಥಿತ್ಯಂತರಗಳಿಂದ ತೊಂದರೆಗೀಡಾಗಿದ್ದಾಳೆ ; ಮತ್ತು ಅವಳಿಗೆ ತನ್ನ ಎಲ್ಲಾ ನೆರವಿನ ಅಗತ್ಯವಿದೆಯೆಂದು ತನ್ನ ಅನುಕೂಲಕ್ಕೆ ತಕ್ಕಂತೆ  ಏಕಪಕ್ಷೀಯವಾಗಿ ತೀರ್ಮಾನ ಮಾಡಿದ ಮೇಲೆ  ಅವನಿಗೆ ತುಸು ನೆಮ್ಮದಿ ಎನಿಸಿತು . ಹೀಗಾಗಿ ಮನೆಯಲ್ಲಿ ಅವಳು ನಡೆಸುವ ಆರ್ಭಟ , ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ನಡೆಸುವ ರಂಪ , ಮಕ್ಕಳ ಮೇಲೆ ಎರಗಿ ಬೀಳುವ ಅವಳ ನಡವಳಿಕೆಯನ್ನು ಕಂಡೂ ಕಾಣದಂತೆ ಇರುವಸ್ವಭಾವವನ್ನು ಮೈಗೂಡಿಸಿಕೊಂಡ . ಮತ್ತು ಸರಳವಾಗಿ ಅವಳನ್ನು ಅರ್ಥೈಸಿಕೊಳ್ಳವುದು ಅವನಿಗೂ ಬೇಕಾಗಿತ್ತು .ಅವನು ಕಂಡು ಕೊಂಡ ಬಿಡುಗಡೆಯ ಸುಲಭ ಹಾದಿ ಅದಾಗಿತ್ತು .     
 ಅವಳ  ಮೂವರು ಮಕ್ಕಳ ಪೈಕಿ ಹಿರಿಯವನು ಅಜೀಮ್ . ಹಿರಿಯವನು ಎಂತಲೋ ಅಥವ ಮಗ ಎಂತಲೋ ಅವಳಿಗೆ ಅವನ ಮೇಲೆ ವಿಶೇಷ ಪ್ರೀತಿ ; ‘ ಸಾತ್ ಖೂನ್ ಮಾಫ್ ” ಅಂತಾರಲ್ಲಾ ಹಾಗೆ ! ಹೀಗಾಗಿ ಅವನ ಬೆನ್ನಿಗಿದ್ದ ಅವನ ತಂಗಿಯರಾಗಿದ್ದ ಆಸಿಮಾ ಮತ್ತು ಸನಾ ದಿನವೊಂದಕ್ಕೆ ಹತ್ತು ಸಾರಿಯಾದರೂ ‘ ಅಮ್ಮಿ ಪಾರ್ಶಿಯಾಲಿಟಿ ಮಾಡಿದರು ’ಎಂದು ದೂರುವುದು ಸಾಮಾನ್ಯ ನೋಟವಾಗಿತ್ತು  . ಹಾಗೆ ಎದ್ದು ಕಾಣುವಂತಹ ವರ್ತನೆ ಆಕೆಯದು . ಆದರೆ ಅವಳಿಗೆ    ಕೋಪ ಬಂದಾಗ ಮತ್ತು ಆ ಕೋಪ ಆಗಾಗ್ಗೆ ಬರುತ್ತಲೇ ಇತ್ತು. . .. . ಹಾಗಾದಾಗ ಆ ಮೂವರನ್ನೂ ಒಂದೇ ತಕ್ಕಡಿಯಲ್ಲಿ ತೂಗಿ , ಶೈತಾನೀ ಕೂಟವೆಂದು ಬ್ರಾಂಡ್ ಮಾಡಿ ಕೈಗೆ ಸಿಕ್ಕಿದವರನ್ನು ಹಿಗ್ಗಾ ಮುಗ್ಗಾ ಬಾರಿಸಿ ತನ್ನ ಕೋಪವನ್ನು ತಣಿಸುವುದಿತ್ತು .
     ಆಕೆಯ ಈ ಪರಿಕ್ರಮದಿಂದ ಅಜೀಮ್‍ಗೆ ವಿನಾಯತಿ ಇತ್ತು . ಸನಾ ಕೊನೆಯವಳಾದರೂ ವಿಶೇಷ ಚಾಲಾಕಿಯಾಗಿದ್ದು ಆಕೆಯ ಮೂಡನ್ನು ಗ್ರಹಿಸಿ , ನಿರೀಕ್ಷಣಾ ನಾಪತ್ತೆಯಾಗುತ್ತಿದ್ದಳು . ಅಂತೂ ಇಂತೂ ತಪ್ಪಿರಲಿ ಇಲ್ಲದಿರಲಿ ಸಿಕ್ಕಿ ಬೀಳುತ್ತಿದ್ದವಳೇ ಆಸಿಮಾ . ಆಕೆಯ ಕೋಪಕ್ಕೆ ಒಡ್ಡಿಕೊಳ್ಳಲು ಆಸಿಮಾ ಸನ್ನದ್ಧಳಾಗಿರಲು ಇನ್ನೊಂದು ವಿಚಿತ್ರ ಕಾರಣವೂ ಇತ್ತು . ಕೋಪವಿಳಿದ ಕೂಡಲೇ ಶಮೀಮ್‍ಗೆ ವಿಪರೀತ ಪಶ್ಚಾತ್ತಾಪವಾಗುತ್ತಿತ್ತು .ತನ್ನ ಕೋಪಕ್ಕೆ ಬಲಿಯಾದವಳ ಬಗ್ಗೆ ಇನ್ನಿಲ್ಲದ ಮಮತೆ ಮೂಡುತ್ತಿತ್ತು . ಹೀಗಾದಾಗ ಹೊಸ ಡ್ರೆಸ್ ,ಹೊಸ ಚಪ್ಪಲಿ ಅಥವ. ..  ಮತ್ತು ಒಂದಿಷ್ಟು ಪಾಕೆಟ್‍ಮನಿ , ಒಳ್ಳೆಯ ಸಿಹಿಯಡಿಗೆ ಮೊದಲಾದ ಆಸಿಮಾಳ ಬಹು ದಿನಗಳ ಬಾಕಿ ಬೇಡಿಕೆ ಈಡೇರುತ್ತಿತ್ತು.
     ತಂದೆಯ ವಿಶೇಷ ಸಂಯಮ ಆ ಮಕ್ಕಳಿಗೆ ಆಶ್ಚರ್ಯದ ವಿಷಯವಾಗಿದ್ದಂತೆಯೇ ಆತ ‘ಹೆಂಡತಿಬುರುಕ’ ಎಂದು  ತೀರ್ಮಾನಕ್ಕೆ  ಬರಲು ಕಾರಣೀಭೂತವಾಗಿತ್ತು . ಸಾದಾತ್ ಮತ್ತು  ಅವನ  ತಂಗಿಯರು  ಆಕೆಯ ಬಗ್ಗೆ ಹೇಳುತ್ತಿದ್ದ ವಿಷಯಗಳ  ಆಧಾರದ ಮೇಲೆ   ಅವಳ ಈ ನಡವಳಿಕೆಯ ಬಗ್ಗೆ  ಮೂವರು ಮಕ್ಕಳೂ ಒಟ್ಟುಗೂಡಿ ತಮ್ಮದೇ  ಆದ ವಿವರಣೆಯನ್ನು  ಸಿದ್ಧ ಪಡಿಸಿಕೊಂಡಿದ್ದು  ಪರಸ್ಪರ ಸಾಂತ್ವನ , ಅನುಕಂಪ ಮೊದಲಾದುವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು . ಮೂವರು ಗಂಡು ಮತ್ತು ಮೂವರು ಹೆಣ್ಣುಮಕ್ಕಳಿದ್ದ ಮನೆಗೆ ಹಿರಿಸೊಸೆಯಾಗಿ ಬಂದ  ಆಕೆ ನಿರೀಕ್ಷೆಗಳ ಅಪರಿಮಿತ ಆಕಾಶವನ್ನು ತನ್ನ ಕಣ್ಣಿನಲ್ಲಿರಿಸಿಕೊಂಡು ಆ ಮನೆಗೆ ಕಾಲಿಟ್ಟಿದ್ದಳು . ಮೆಹಂದಿಯ ಚಿತ್ತಾರದ ಕೈಯನ್ನು ಗಂಧದಲ್ಲಿ ಅದ್ದಿ , ಮನೆಯ ಪಶ್ಚಿಮದ ಗೋಡೆಯ ಮೇಲೆ  ಅಂಗೈಯ ಅಚ್ಚನ್ನು ಮೂಡಿಸಿದಾಗ ಅವಳಿಗೇ ಆಶ್ಚಯವಾಗುವಂತೆ , ಅದರ ಬದಿಯಲ್ಲಿ ಪುಟ್ಟಪುಟ್ಟ ಅಂಗೈಗಳು ಮೂಡಿ ಬಂದವು . ಹಿಂದಿರುಗಿ ನೋಡಿದಾಗ ನಾದಿನಿಯರು , ಮೈದುನಂದಿರು . . . . .  ಅವರ ಖರ್ಚು ವೆಚ್ಚ, ಊಟೋಪಚಾರ , ಬಟ್ಟೆಬರೆ , ಸದಾ ಕಾಯಿಲೆಯ ಅತ್ತೆ . . . . ಆಕೆಯ ಪಥ್ಯದಡಿಗೆ , ಮಾವನ ಅಸಂಖ್ಯ ನೆಂಟರಿಷ್ಟರು ಮತ್ತು ಸ್ನೇಹಿತರು . . . . . ಆಕೆಯ ಕನಸುಗಳು ಕಮರಿ ಹೋದವು . ಅದೆಲ್ಲವನ್ನೂ ಆಕೆಯು ಮೊದಮೊದಲು ನಗುತ್ತಲೇ ಸಂಭಾಳಿಸಿದಳಂತೆ . ಆದರೆ , ದಿನಗಳೆದಂತೆ ಆ ಮದುವೆಗಳು , ಹೆರಿಗೆಗಳು , ಬಾಣಂತನ  ,ರೋಗಗಳು , ಅತ್ತೆ ಮಾವಂದಿರ ಸಾವು . . .ನಡುವೆ ತನ್ನ ಬಸಿರು ಬಾಣಂತನ ಎಳೆ ಮಕ್ಕಳ ಆರೈಕೆ – ಇವುಗಳೆಲ್ಲಾ ಆಕೆಗೆ ರೇಜಿಗೆ ಹುಟ್ಟಿಸತೊಡಗಿದವು . ಆದರೂ ಆಕೆ ಹೀಗೆ ತಾಳ್ಮೆ ಕಳೆದುಕೊಂಡಿದ್ದ ಪ್ರಸಂಗವಿರಲಿಲ್ಲ  ಇವೆಲ್ಲದರ ನಡುವೆ ಓರಗಿತ್ತಿಯರು ಬಂದು ತನ್ನ ಜವಾಬುದಾರಿ ಸ್ವಲ್ಪವಾದರೂ ಕಡಿಮೆಯಾದೀತೆಂಬ ನಿರೀಕ್ಷೆಯ ಎಳೆಯೂ ಒಂದಿಷ್ಟು ಜಿನುಗುತ್ತಿತ್ತು ಜಲದ ಕಣ್ಣಿನೊಡನೆ .
     ಅದರೆ ನಡೆದಿದ್ದಂತೂ ತದ್ವಿರುದ್ಧ ; ಅವಳ ಮೊದಲನೆಯ ಓರಗಿತ್ತಿಯಂತೂ ಮದುವೆಯಾದ ಒಂದು ವರ್ಷದೊಳಗೆ ನಯವಾಗಿ ನಗು ನಗುತ್ತಲೇ ಗಂಡನೊಡನೆ ದುಬಾಯಿಗೆ ಹೋದ ನಂತರ ಅವಳ ಹತಾಶೆ ಮಿತಿ ಮೀರಿತು . ತಾನು ತನ್ನ ಗಂಡ ಮತ್ತು ಮಕ್ಕಳು ಯಾವಾಗ ನೆಮ್ಮದಿಯಿಂದಿರುವುದು? ತಾನು ಸತ್ತ ಮೇಲಾ . . . ಎಂದು ರಾಜಾ ರೋಷವಾಗಿ ಯಾರ ಮುಲಾಜೂ ಕೂಡಾ ಇಲ್ಲದೆ ಭುಸುಗುಡತೊಡಗಿದಳು . ಹೀಗಾಗಿ ಸಾದಾತ್‍ನ ತಂಗಿಯರು ಮತ್ತು ಇತರೆ ಬಂಧು ಬಳಗದವರು ಅವಳಿಂದ ಒಂದಿಷ್ಟು ಅಂತರವನ್ನು ಕಾಪಾಡಿಕೊಳ್ಳಲೇ ಬೇಕಾಯಿತು .
     ತಂದೆ ತಾಯಿ ಇಲ್ಲದ ಅನಾಥ ಎಂದು ಅವಳ ಕೊನೆಯ ಮೈದುನನಾದ ಆರಿಫ್ ನನ್ನು ಪ್ರೀತಿಯಿಂದಲೇ ನೋಡಿಕೊಂಡಳು . ಆದರೆ ಅವನ ಮದುವೆಯಾದದ್ದೇ ತಡ ಮಲ ತಾಯಿಯಾಗಿಬಿಟ್ಟಳು . ಸಾದಾತ್‍ಗೆ ಕೂಡಾ  ಆಶ್ಚರ್ಯವಾಗುವಂತೆ , ಆರಿಫ್‍ನ ಮದುವೆಯಾದದ್ದೇ ತಡ ಬೇರೆ ಮನೆಗೆ ಹೋಗು ಎಂದು ಮುಲಾಜಿಲ್ಲದೆ ಹೇಳಿ ಬಿಟ್ಟಳು .  ಸಾದತ್ ಪರಿತಪಿಸಿ ಹೋದ . ಆದರೆ ಅವಳು ಬಿಡಬೇಕಲ್ಲಾ. . ..  .. ಹಿಂದಿನದು ಮುಂದಿನದು ಎಲ್ಲಾ  ಜಾಲಾಡಿಸಿ , ಸಾದತ್‍ನನ್ನೂ ಕೂಡಾ ಮನಸೋಇಚ್ಛೆ  ದೂರಿ , ಅತ್ತು ಕರೆದು ರಂಪಾಟ ಮಾಡಿ ಧಡಾರೆಂದು ತನ್ನ ಕೋಣೆಯ ಬಾಗಿಲನ್ನು ಬಡಿದುಕೊಂಡಾಗ  ಆರಿಫ್ ಮತ್ತು ಅವನ ಹೆಂಡತಿ ಇಬ್ಬರೂ ಕೂಡಾ ವಿಪರೀತ ಸಂಕಷ್ಟಕ್ಕೆ ಒಳಗಾದರು .ಆರಿಫ್ ಪಾಪ! ‘ನಾನ್ಯಾಕೆ ಹೊರಹೋಗಲಿ , ನಮ್ಮಪ್ಪನ ಮನೆಯಲ್ಲವಾ . . . . .  ಬೇಕಾದರೆ ನೀವೇ ಹೋಗಿ  ’  ಎಂದು ಹೇಳಲಿಲ್ಲಾ . ಆದರೆ ಕೊನೆಗೆ ಆರಿಫ್ ಮತ್ತು ಸಾದತ್ ಒಳಗೊಳಗೇ ಅದೇನು ಮಾತನಾಡಿಕೊಂಡರೋ ತಿಳಿಯದು . ಹೆಂಡತಿಯೆದುರು ಆದ ಮುಖಭಂಗ , ಅವಮಾನ ವೆಲ್ಲವನ್ನೂ ಸಹಿಸಿಕೊಂಡು ಮೂರು ದಿನಗಳೊಳಗೆ ಮನೆ ಬಿಟ್ಟು ಅದೇ ಮೊಹಲಾದ್ಲ ಎರಡನೇ ತಿರುವಿನಲ್ಲಿ ಬಾಡಿಗೆ ಮನೆಯೊಂದನ್ನು ಹಿಡಿದ .
     ಆರಿಫ್‍ನ ಪ್ರಸಂಗ ಆ ಮನೆಯ ಒಬ್ಬೊಬ್ಬ ವ್ಯಕ್ತಿಯ ಮೇಲೂ ವಿಭಿನ್ನ ಪರಿಣಾಮವನ್ನು ಬೀರಿತು .ಮೂವರು ಮಕ್ಕಳು ಕೂಡಿ ತಮ್ಮ ತಾಯಿಯ ವರ್ತನೆಯ ಬಗ್ಗೆ ಮೆಲುದನಿಯಲಿ ಚರ್ಚಿಸಿದರು . ಅವರಿಗೆ ಆರಿಫ್ ಚಿಕ್ಕಪ್ಪನ ಬಗ್ಗೆ ತುಂಬಾ ಪ್ರೀತಿ ಇತ್ತು . ಹೀಗಾಗಿ , ಅವಳ ವರ್ತನೆಯ ಬಗ್ಗೆ ತೀವ್ರ ಅಸಮಾಧಾನವು ಕೂಡಾ ಸಹಜವಾಗಿಯೇ ಇತ್ತು .  ಸನಾಳ ಕಿಡಿಗೇಡಿ ಬುದ್ಧಿಗೆ ಹೊಳೆದ ಮಾತನ್ನು ಅವಳು ಆಡಿಯೇ ಬಿಟ್ಟಳು ,
“ ಇನ್ನೇನು . . .ನಿನ್ನ ಮದುವೆಯಾದ ಮೇಲೆ ನೀನೂ ಕೂಡಾ ನಿನ್ನ ಹೆಂಡತಿಯ ಜೊತೆಯಲ್ಲಿ ಹೀಗೆಯೇ ಮೂಟೆ ಕಟ್ಟಬೇಕು ”   ಅಜೀಮ್‍ಗೆ ಒಳಾಂತರದಲ್ಲಿ ಭಯಮಿಶ್ರಿತ ವಿಷಾದ ಮೂಡಿದ್ದು , ಏನನ್ನೂ ಪ್ರತಿಕ್ರಿಯಿಸಲಿಲ್ಲ . ಬದಲಿಗೆ ಅವಳತ್ತ ದೀರ್ಘ ದೃಷ್ಟಿಯೊಂದನ್ನು ಬೀರಿದ. ಆದರೆ ಆಸಿಮಾ ಆತನ ನೆರವಿಗೆ ಬಂದಳು  
“ಬಿಡ್ತು ಅನ್ನು ; ಆಮೆನ್‍ನ ಫರಿಶ್ತಗಳು . . . . ಆಮೆನ್ ಅಂದರೆ ಕಷ್ಟ . ಇಂತಹ ದುರ್ದಿನ ಯಾರಿಗೂ ಬರುವುದು ಬೇಡ  ” ಎಂದು ವಯಸ್ಸಿಗೆ ಮೀರಿದ ಬುದ್ಧಿವಾದವನ್ನು ಹೇಳಿದಳು . ನಂತರ ಅಜೀಮ್ ಮೌನವನ್ನು  ಮುರಿದು ಅವರೊಡನೆ ಗುಸುಗುಸು ನಡೆಸಿದ . ಕೊನೆಗೆ ಅವರ ಸೋದರತ್ತೆಯಂದಿರು ಸಿದ್ಧ ಪಡಿಸಿದ ರಾಜಿ ಸೂತ್ರದಂತೆ ‘ ಪಾಪ ! ಭಾಬಿಗೆ ಹೈ ಬಿ.ಪಿ . ಅದಕ್ಕೆ ಒಮ್ಮೊಮ್ಮೆ  ಹೀಗಾಡ್ತಾರೆ ; ಆದರೆ ಹೃದಯ ತುಂಬಾ ಒಳ್ಳೆಯದು ’ಎಂಬ ಉಕ್ತಿಯನ್ನು ಅನ್ವಯಿಸಿ ,  ‘ಪಾಪ ! ಅಮ್ಮಿ ಒಳ್ಳೆಯವರು . . . . . ’ ಮುಂತಾಗಿ ಪೂರ್ತಾ ವಾಕ್ಯವನ್ನು ಹೇಳಿ ಆಕೆಯ ಹೃದಯದ ಬಗ್ಗೆ ಸರ್ಟಿಫಿಕೇಟ್ ನೀಡಿ ,  ಇನ್ನೇನೂ ದಾರಿ ಕಾಣದೆ  ಆಕೆಯನ್ನು ಮಾಫಿ ಮಾಡಿ ರಾಜಿಯಾಗಿ ಬಿಟ್ಟಿದ್ದರು .ಅಷ್ಟೇ ಅಲ್ಲದೆ.    ಆರಿಫ್ ಚಿಕ್ಕಪ್ಪನ ಮೋರೆಯನ್ನು ನೋಡಲು ಅವರಿಗೆ ಅತೀವ ನಾಚಿಕೆ ಎನಿಸಿದರೂ ಅವನು ಬೇರೆ ಮನೆಯಲ್ಲಿ ಹಾಲುಕ್ಕಿಸಿದ ಸಂದರ್ಭದಲ್ಲಿ ಅವನು ಕರೆದಿದ್ದ ಊಟಕ್ಕೆ ಅವರೆಲ್ಲಾ ಹೋಗಿದ್ದರು. ಶಮೀಮ್ ಬಾನು ಮಾತ್ರ ಹೋಗಿರಲಿಲ್ಲಾ . ವಿನಾ ಕಾರಣ ಆಕೆ ಹಲವಾರು ದಿನ ಆರಿಫ್ ಮತ್ತವನ ಹೆಂಡತಿಯೊಡನೆ ಮಾತು ಕಥೆಯನ್ನು ನಿಲ್ಲಿಸಿದ್ದು , ಮತ್ತೆ ಏನೂ ನಡೆದೇ ಇಲ್ಲವೇನೋ ಎನ್ನುವಷ್ಟು ನಿರಾಳವಾಗಿ ಅವರೊಡನೆ ಸಾಮರಸ್ಯವನ್ನು ಸಾಧಿಸಿಕೊಂಡು ಬಿಟ್ಟಳು .
     ಆದರೆ , ಈ ಬಗ್ಗೆ ತೀರಾ ನೊಂದವನು ಮಾತ್ರ ಸಾದತ್ . ಅವನು ತನ್ನನ್ನು ತಾನೇ ನೂರಾ ಒಂದನೆಯ ಬಾರಿ ಹಳಿದುಕೊಂಡ . ತಾನು ಕೈಲಾಗದವನು ಎಂದು ತನ್ನ ಮೇಲೆ ತಾನೇ ದೋಷವನ್ನು ಹೊರಿಸಿ ಕೊಂಡ . ಅವಳ ಮೆನೋಪಾಸ್ ಎಂಬ ನೆಪವನ್ನು ತಾನೇ ಸೃಷ್ಟಿಸಿಕೊಂಡು ಅದರಡಿಯಲ್ಲಿ ಎಲ್ಲಾ ಸಂಬಂಧಗಳನ್ನು ಮತ್ತು ಮಾನವೀಯತೆಯನ್ನು ಗಾಳಿಗೆ ತೂರಿ , ತನ್ನ ದೌರ್ಬಲ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಹೇಡಿ ಎಂದು ತನ್ನನ್ನು ತಾನೇ ಜರಿದುಕೊಂಡ . ಆರಿಫ್‍ನ ಮತ್ತು ಅವನ ಪತ್ನಿಯ ಎದುರಿಗೆ ತಾನು ಕುಬ್ಜನಾದೆ ಮತ್ತು ಅu್ಣ ಎಂಬ ತನ್ನ ಪಾತ್ರ ನಿರ್ವಹಣೆಯಲ್ಲಿ ತಾನು ಸೋತು ಹೋದೆ  ಎಂಬ ನಿರಂತರ ಸೋಲಿನ ಭಾವದೊಡನೆ ಅವನು ಅಪಾರ ಅವಮಾನವನ್ನು  ಅನುಭವಿಸಿದ .  ಈ ನಿರ್ವೀಣ್ಯತೆಯ ಹಿನ್ನೆಲೆಯಲ್ಲಿ ಗತ ವೈಭವದ ಪುರುಷಾಧಿಕಾರವನ್ನು ಮರಳಿ ಪಡೆಯಬೇಕೆಂಬ ಹಟ ಹುಟ್ಟಿ , ಅವಳನ್ನು ಹಿಂದಿನಂತೆ ತನ್ನ  ಆಜ್ಞಾ ಧಾರಕಳನ್ನಾಗಿ ಮಾಡಿಯೇ ತೀರಬೇಕೆಂದು ತೀರ್ಮಾನಿಸಿದ . ಆದರೆ ತೀರ್ಮಾನವನ್ನು ಕಾರ್ಯಗತಗೊಳಿಸುವ ಅವಕಾಶಗಳನ್ನು ಬೇಕೆಂತಲೇ ಕಳೆದುಕೊಂಡ . ಹೀಗಾಗಿ ,ತನ್ನ ಬಗ್ಗೆ ಇನ್ನಷ್ಟು ಜಿಗುಪ್ಸೆಯನ್ನು ಬೆಳೆಸಿಕೊಂಡ . 
     ಈ ಹಿಂಸೆಯನ್ನು ತಾನು ಸಹಿಸಲು ಸಾಧ್ಯವೇ ಇಲ್ಲ ಎಂದು ಅವನಿಗೆ ಅಂತಿಮವಾಗಿ ಮನದಟ್ಟು ಆಗುವ ವೇಳೆಗೆ , ತಾನು ಯಾವುದೋ ಭಯದಿಂದ ಅವಳಿಗೆ ಮುಖಾಮುಖಿಯಾಗಲು ಹೆದರುತ್ತಿದ್ದೇನೆ ಎಂದು ಅರಿವಾಗತೊಡಗಿತು .   ಆದರೆ , ಯಾವ ಭಯ. . . . ಎಂಬ ಪ್ರಶ್ನೆಗಳಿಗೆ ಅವನಿಗೆ ಉತ್ತರ ದೊರಕಲಿಲ್ಲಾ . ಭಯದ ಕಾರಣದ ಅನ್ವೇóಣೆಗೆ ತೊಡಗಿದ ಅವನು  ವಿಷಾದದ ಚೌಕಟ್ಟನ್ನು ತನ್ನ ಸುತ್ತಲೂ ಕಟ್ಟಿಕೊಂಡ . ಆ ಕೃತ್ರಿಮ ಗೋಡೆಗಳನ್ನು  ತಾನು ಎಂದು ಒಡೆಯಲು  ಸಾಧ್ಯವೋ ಅಂದೇ ತನಗೆ ಈ ಹಿಂಸೆಯಿಂದ ಬಿಡುಗಡೆಯಾಗುವುದು ಎಂದು ತನಗೆ ತಾನೇ ನಿಬಂಧನೆಗಳನ್ನು ಒಡ್ಡಿಕೊಂಡ . ಅವನ ಬದುಕಿನ ಸೂರ್ಯ ಕಾವನ್ನು ಕಳೆದುಕೊಂಡು  ಅವನು  ಒಳಗೊಳಗೇ ಕುಸಿಯಲಾರಂಭಿಸಿದ .
    ಸಂಜೆಯ ನಮಾಜಿಗೆ ಹೊರಡಲೆಂದು ಅದೊಂದು ಸಂಜೆ ಅವನು ಟೋಪಿಗಾಗಿ ಹುಡುಕಾಟ ನಡೆಸಿದ್ದ . ಸಾಮಾನ್ಯವಾಗಿ ಅವನ ಟೋಪಿ ಅವನ ಕಣ್ಣೆದುರಿಗೆ ಕಾಣುವಂತೆ ಇರುತ್ತಿತ್ತು . ಇಂದು ಅದೆಲ್ಲಿ ಬಿದ್ದಿತ್ತೋ . . . . . ಅವನ ಅಸಹನೆ ಹೆಚ್ಚುತ್ತಿತ್ತು .ಮಸೀದಿಯಿಂದ ಅಜಾನ್ ( ನಮಾಜಿನ ಹೊತ್ತಿಗೆ ಮಸೀದಿಯಿಂದ ಮಾಡುವ ಕರೆ ) ಇನ್ನೇನು ಮುಗಿಯುವ ಹಂತದಲ್ಲಿತ್ತು . ಅವನು ಟೋಪಿಯನ್ನು ತಲೆಯ ಮೇಲಿಟ್ಟು , ಓಡಿದಲ್ಲಿ ಮಾತ್ರ ಜಮಾತ್‍ನೊಡನೆ ನಮಾಜ್ ಮಾಡುವ ಅವಕಾಶ ಸಿಗುತ್ತಿತ್ತು . ಆದರೆ ಈ ಟೋಪಿ . . . . . ‘ನನ್ನ ಟೋಪಿ ಎಲ್ಲಿ ? ’ ತನಗೆ ತಾನೇ ಎಂಬಂತೆ ಅವನು ಜೋರಾಗಿ ಕೂಗು ಹಾಕಿದ . ಅವನಿಗೆ ಉತ್ತರಿಸುವವರ್ಯಾರು . . .. . ಯಾರಾದರೂ ಉತ್ತರಿಸಬೇಕಿತ್ತು ಎಂದು ಅವನಿಗನ್ನಿಸಿತು . . . . ಕೊನೆಗೆ ಅವಳು ಬಯ್ದು ಟೋಪಿಯನ್ನು ತಂದು ಬಿಸಾಕಿದ್ದರೂ ಅವನಿಗೆ ಒಂದಿಷ್ಟು ನೆಮ್ಮದಿಯೆನಿಸುತ್ತಿತ್ತು . ಉಳಿದ ಎಲ್ಲಾ ಹೊತ್ತಿನ ನಮಾಜಿನಲ್ಲಿ ಅಜಾನ್ ಆದ ನಂತರ ನಮಾಜಿಗೆಂದು ಜನರು ಸೇರಲು ಒಂದರ್ಧ ಗಂಟೆಯಾದರೂ ಕಾಲಾವಕಾಶ ಇರುತ್ತದೆ . ಸಂಜೆಯ ನಮಾಜಿಗೆ ಈ ರೀತಿಯ ಕಾಲಾವಕಾಶ ಇರುವುದಿಲ್ಲ . ಇತ್ತ ಅಜಾನ್ ಆದ ಕೂಡಲೇ ನಮಾಜ್‍ಗೆ ಜನರು  ಸೇರಿಯೇ ಬಿಡುತ್ತಾರೆ  ಮುಸ್ಸಂಜೆಯ ಆ ಪವಿತ್ರ ಹೊತ್ತಿನಲ್ಲಿ ಅವನಿಗೆ ಪ್ರಾರ್ಥನೆಯ ಅವಕಾಶವೂ ಇಲ್ಲ ಎಂದರೆ  . . . . ಅವನಿಗೆ ಮೈ ಪರಚಿಕೊಳಬೇಕೆನಿಸಿತು . ಅವಳು ಅವನೆದುರಿಗೇ ಹಾಯಾಗಿ ಕಾಲು ನೀಡಿಕೊಂಡು ಕುಳಿತಿದ್ದು , ಟಿವಿಯಲ್ಲಿ ಮೈ ಮರೆತಿದ್ದಳು .
     ‘ ಆ ದರಿದ್ರ ಟೀವಿಯನ್ನು ಬಂದ್ ಮಾಡ್ತೀಯಾ ? .. ಅಜಾನ್ ಆಗುತ್ತಿದ್ದರೂ ಒಂದಿಷ್ಟೂ ವಾಲ್ಯೂಮ್ ಕಡಿಮೆ ಮಾಡ್ತಿಲ್ಲವಲ್ಲಾ . . . . . ’  ಎಂದವನು ‘ ನಿನಗಾಗಿ ಅಲ್ಲಾಹನು ವಿಶೇಷ ನರಕವನ್ನು ಸೃಷ್ಟಿಸಿದ್ದಾನೆ ’ ಎಂದು  ನುಡಿಯಲು ನಾಲಿಗೆಯ ತುದಿಯವರೆವಿಗೂ ಬಂದಿದ್ದ ಮಾತನ್ನು ಹಾಗೆಯೇ ತಡೆ ಹಿಡಿದ .  ಅವಳಾದರೋ ಅವನತ್ತ ತಿರುಗಲೂ ಇಲ್ಲ ಕ್ಯಾರೇ ಅನ್ನಲೂ ಇಲ್ಲ . ತನ್ನ ತಲೆಯ ಮೇಲಿನ ಟೋಪಿಗಾಗಿ ಪರದಾಡುತ್ತಿರುವ ಅವನ ವರಸೆಯನ್ನು ನೋಡಿ ಅವನ ಮೇಲೆ ದಯೆ ತೋರುವಂತೆ  ಮೌನವಾಗಿ ತನ್ನ ಕಾಯಕದಲ್ಲಿ ಮಗ್ನಳಾದಳು .ಇನ್ನೇನು ಅವನು ಆಸ್ಫೋಟಗೊಳ್ಳಬೇಕು . . . .ಅವಳ ಕಪಾಳಕ್ಕೆ ಒಂದು ಬಾರಿಸಬೇಕು . . . . ಆದರೆ ಸಾಧ್ಯವಾಗುತ್ತಿಲ್ಲ . . . . ಯಾಕೆ ಸಾಧ್ಯವಾಗುತ್ತಿಲ್ಲ  . . . ಅಗೋಚರ ಭಯದ ಎದುರಿನಲ್ಲಿ ಅವನು ಹಿಂಡಿ ಹಿಪ್ಪೆಯಾದಂತೆನಿಸಿ . . . . ವಿಪರೀತವಾಗಿ ಬೆವರುತ್ತಾ ಇನ್ನೇನು  ಕುಸಿದು ಬೀಳಬೇಕು . . . ಎಂದು ಹಾಗೆ ಕುಸಿದು ಬೀಳಬೇಕಾದರೆ ಆಸರೆಗೆ ಕುರ್ಚಿಯೊಂದಾದರೂ ದೊರಕಿದರೆ ಸಾಕೆಂದು ಅವನು ಕಣ್ಣಾಡಿಸುತ್ತಿರುವಾಗಲೇ . . . . . ಅವನ ಅಗೋಚರ ಭಯವು ಅವನ ಕಣ್ಣಿಗೆ  ನಿಧಾನವಾಗಿ ಗೋಚರವಾಯಿತು . ಬಾಗಿದ ಬೆನ್ನು , ಸುಕ್ಕುಗಟ್ಟಿದ ಚರ್ಮ , ಒಣಗಿದ ಕೈಕಾಲು ಗಳು ಆದರೂ ಮೋರೆಯ ಮೇಲೆ ವಿಲಕ್ಷಣವಾದ ಹೊಳಪು , ನೆರೆಗಟ್ಟಿದ ಕೂದಲು . . . . ತಲೆಯ ಮೇಲೆ  ಬಿಳಿ ಸೆರಗನ್ನು  ಹೊದ್ದ ಹಿರಿಯ  ಜೀವವೊಂದು ಸಂಜೆಗತ್ತಲ ಕೋಪೋದ್ರಿಕ್ತ ವಾತಾವರಣದಲ್ಲಿ ಮೆಲ್ಲನೆ ಅಡಿಯಿಡುತ್ತ ಬಂದು ಅವನೆದುರಿಗೆ ಟೋಪಿಯನ್ನು  ಚಾಚಿದಾಗ ಅವನು ಅಚೇತನನಾದ .
          ಹ್ಹಾ . . . ಈ ಕಾರಣಕ್ಕಾಗಿ ತಾನೇ ತಾನು ಶಮೀಮ್ ಬಾನುವಿನ ಎಲ್ಲಾ ಹಿಂಸಾಚಾರವನ್ನು ಸಹಿಸುತ್ತಿರುವುದು  . .. . ಓ ಅಲ್ಲಾಹನೇ ನನ್ನನ್ನು ಎಂತಹ ಪರೀಕ್ಷೆಯಲ್ಲಿ ಕೆಡವಿದೆ . . .
    ‘ಇದೇ ತಾನೇ ನಿನ್ನ ಟೋಪಿ . . . . ತಗೋಪ್ಪಾ  ನಮಾಜಿಗೆ ಹೋಗು ಬೇಗ. . . . ನಾನೂ ಕೂಡಾ ನಮಾಜಿಗೆ ಹೋಗಬೇಕು ’ ಬಲಗೈಯಲ್ಲಿ ಅವನ ಹಳೆಯ ಟೋಪಿಯನ್ನು ಮುಂಚಾಚಿದವಳ ಎಡಗೈಯಲ್ಲಿ ಅವಳಷ್ಟೇ ಜೀರ್ಣವಾದ ಜಾನಮಾಜ್ ( ನಮಾಜ್ ಮಾಡುವಾಗ ಹಾಸಿಕೊಳ್ಳುವ ಚಾಪೆ )ಇತ್ತು .
    ‘ಅಯ್ಯೋ !  ಅಮ್ಮಾಜಿ  ನೀವು ಯಾಕೆ ತೊಂದರೆ ತಗೊಂಡಿರಿ ನಾನು ಹುಡುಕಿ ಕೊಳ್ಳುತ್ತಿದ್ದೆ’  ಎಂದು ಹೇಳಿದರೂ ಅವಳನ್ನು ಸಮೀಪಿಸಿ ಅವಳ ಕೈಯಿಂದ ಇಸಿದುಕೊಂಡ ಹಳೆಯ ಟೋಪಿಯನ್ನೇ ತನ್ನ ತಲೆಗೇರಿಸಿದ .ಬಿಳಿಯ ಬಣ್ಣ ಕಳೆದು  ಮಾಸಲು ಹಳದಿ ಬಣ್ಣಕ್ಕೆ ತಿರುಗಿದ್ದ ಆ ಟೋಪಿ ಅವನ ತಲೆಗೇರಿತು . ಆಕೆ ಮಮತೆಯಿಂದ ಅವನ ತಲೆಯ ಮೇಲೆ ಕೈ ಇಟ್ಟು , ಅವನಿಗೆ ಆಶೀರ್ವಚನಗಳನ್ನು ಹೇಳುತ್ತಾ  , ನಿಧಾನವಾಗಿ ಕೋಣೆಯತ್ತ ನಡೆದಳು .
    ದಾಪುಗಾಲನ್ನಿಟ್ಟ ಸಾದತ್ ಮಸೀದಿಯತ್ತ ಓಡತೊಡಗಿದ .ಮೊದಲು ಆಕೆಯನ್ನು ಅವನು ಅಮ್ಮಾಜಿ ಎಂದು ಕರೆಯುತ್ತಿದ್ದ . ಆದರೆ , ಅವನ ಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಅವರು ಆಕೆಯನ್ನು ಬೀ ದಾದಿ ಎಂದು ಕರೆಯಲಾರಂಭಿಸಿದರು . ಯಾರು ಹೇಳಿಕೊಟ್ಟರೋ ಏನೋ  . . . . ಮುಂದೆ ಎಲ್ಲರೂ ಸಾದತ್ ಕೂಡಾ ಬೀದಾದಿ ಎಂತಲೇ ಕರೆಯತೊಡಗಿದ . ಅವಳು ಅವನ ಸೋದರತ್ತೆ . ಬೀದಾದಿಗೆ ಬಾಲ್ಯ ವಿವಾಹವಾಗಿತ್ತು . ಮದುವೆಯಾದ ಒಂದು ತಿಂಗಳಿಗೇ ಆಕೆಯ ಪತಿಯ ಮರಣವಾಯಿತಂತೆ . ಹಾವು ಕಡಿಯಿತು ಎಂದು ಯಾರು ಯಾರೋ ಕಾರಣವನ್ನು ನೀಡುತ್ತಿದ್ದರು . ಆದರೆ , ಅವ ಹೇಗೆ ಸತ್ತ ಎಂದು ಅವಳಿಗೆ ಕೊನೆಯವರೆವಿಗೂ ಗೊತ್ತಾಗಿರಲಿಲ್ಲ .ಗಂಡ ಸತ್ತ ಒಂದು ವರ್ಷಕ್ಕೆ ಅವಳು ಮೈನೆರೆದಳು . . . . . ತನ್ನ ತವರು ಮನೆಯಲ್ಲಿ . ಮುಸ್ಲಿಮರಲ್ಲಿ ನಿರ್ಬಂಧವೇನೂ ಇರದಿದ್ದರೂ ಅವರ ಕುಟುಂಬದಲ್ಲಿ ಮರುಮದುವೆಯ ಸಂಪ್ರದಾಯವಿರಲಿಲ್ಲ .ಹೀಗಾಗಿ ಪ್ರತಿ ಮಾಸಿಕದಲ್ಲಿಯೂ ಅವಳ ದೇಹ ಪೊರೆಕಳಚಿ . . . ಮಣ್ಣು ಪಾಲಾಯಿತು . ಅವಳ ದೇಹ, ಮನಸ್ಸು ,ಕನಸು ಯಾವುದೂ ಫಲಿಸಲಿಲ್ಲ. ಅವಳು ಚಿರಕನ್ಯೆಯಾಗಿ ಉಳಿದಳು . ನೆರಳಿನಂತೆ ಬದುಕಿ ಅಣ್ಣನ ಕುಟುಂಬಕ್ಕೆ ನೆರಳಾದಳು . ಅವಳ ಅತ್ತಿಗೆಯ ಅಂದರೆ , ಸಾದತ್‍ನ ತಾಯಿಯ  ಕಾಯಿಲೆ – ಕಸಾಲೆಗೆ ಒದಗುತ್ತಾ ಒಂದಿನಿತೂ ಬೇಸರಿಸದೆ ಮಲ ಮೂತ್ರವನ್ನು ಬಳಿದಳು . . . ಅವನು ಒಮ್ಮೊಮ್ಮೆ ಆಲೋಚಿಸುವುದಿತ್ತು. .. .. .ತಾಯಿಯ ಕಾಯಿಲೆಗಾಗಿಯೇ ಅವಳು ಸೃಷ್ಟಿಯಾದಳೇ ಅಥವಾ ಅವಳನ್ನು ಕಂಡು ತನ್ನ ತಾಯಿ  ಕಾಯಿಲೆ ಬಿದ್ದಳೇ . ತನ್ನ ಅಮ್ಮಿ ಹೇಳಿದ ಕೆಲಸವನ್ನು , ಹೇಳದೆ ಹೊರೆ ಬಿದ್ದ ಕೆಲಸಗಳನ್ನು ಹುಡುಕಿ ಹುಡುಕಿ ಮಾಡಿದಳು . ರಾಶಿ ರಾಶಿ ಕಸ ಮುಸುರೆಯನ್ನು ಎಂದೂ ದಿಟ್ಟಿಸಲಿಲ್ಲ . . . ತಲೆ ಬಗ್ಗಿಸಿ ತೊಳೆದಳು.  ಆಮನೆಗೆ ಎಂದೂ ಬೀಗವನ್ನು ಹಾಕಿದ್ದ ನೆನಪೇ ಇರಲಿಲ್ಲ ಅವನಿಗೆ. . . . ಅವಳೇ ಬೀಗವಾದಳು . ಯಾವಾಗ ಬಂದು ಬಾಗಿಲು ತಟ್ಟಿದರೂ ಅವನಿಗೆ ಬಾಗಿಲನ್ನು ತೆರೆಯುತ್ತಿದ್ದವಳು ಅವಳೇ . ರಂಜಾನಿನಲ್ಲಿ ಕೊಡಿಸಿದ ಒಂದು ಜೊತೆ ಬಟ್ಟೆಯನ್ನು ಶುಭ್ರವಾಗಿ ಒಗೆದು ನೀಟಾಗಿ ಮಡಚಿ ತನ್ನ ಕಬ್ಬಿಣದ ಟ್ರಂಕಿನಲ್ಲಿಟ್ಟಳು . ಆ ಟ್ರಂಕಿನ ಮೇಲೆ ತನ್ನ ಮದುವೆಯಲ್ಲಿ ಕೊಟ್ಟಿದ್ದ ಜಾನಮಾಜನ್ನು ಮತ್ತು ನಮಾಜಿನ ಚಾದರವನ್ನು ಮಡಚಿ ಇಡುತ್ತಿದ್ದಳು . ನಮಾಜಿನ ಚಾದರದಲ್ಲಿ ಆಗಾಗ್ಗೆ ಕೆಲವು ಮಲ್ಲಿಗೆ ಹೂವುಗಳು ಬಿರಿಯುತ್ತಿದ್ದವು .

      ಇದರೊಟ್ಟಿಗೆ ಅವಳು ಹುಳ ಹುಪ್ಪಟೆಯನ್ನು ಒಂದಿಷ್ಟೂ ಕರುಣೆ ಇಲ್ಲದೆ ಬಡಿದು ಸಾಯಿಸುತ್ತಿದ್ದಳು . ಹೀಗಾಗಿ ಹೆಂಗಸರು ಮತ್ತು ಮಕ್ಕಳಿಗೆ ಆಕೆ ಆಪದ್ಬಾಂಧವಳಾಗಿದ್ದು , ಬಹಳ ಜನಾನುರಾಗಿಯಾಗಿದ್ದಳು . ಯಾರಾದರೂ ‘ಬೀದಾದಿ’ ಎಂದು ಆರ್ತ ನಾದ ಹೊರಡಿಸಿದರೆ ಸಾಕು . . . .ಕ್ಷಣಾರ್ಧದಲ್ಲಿ ಅವಳು ಪೊರಕೆಯೊಂದಿಗೆ ಹಾಜರಾಗುತ್ತಿದ್ದಳು . ಹೀಗೆ ಹುಳು ಹುಪ್ಪಟೆಗಳನ್ನು ಬಡಿಯುತ್ತಾ . . . ಸಾಯಿಸುತ್ತಾ ಅವಳು ಒಂದು ಸಾರಿ ತನ್ನ ಪೊರಕೆಯನ್ನು ಬದಿಗೆ ಸರಿಸಿ ಸೀಳಿದ್ದ ಸೌದೆಯನ್ನು ಕೈಗೆತ್ತಿಕೊಂಡು ಒಂದು ಹಾವನ್ನು ಬಡಿದು ಸಾಯಿಸಿಯೇ ಬಿಟ್ಟಳು . ರಕ್ತ ಸಿಕ್ತವಾಗಿ ಗಾಯಗೊಂಡು  ಸತ್ತು ಬಿದ್ದಿದ್ದ ಹಾವನ್ನು ಕಂಡು ಅನೇಕ ಗಂಡಸರು ಕೂಡ ಹೆದರಿದ್ದರು . ನಾರಹಾವು ಎಂದು ಕೆಲವರು , ಕೊಳಕುಮಂಡಲ ಎಂದು ಕೆಲವರು ಅ ಸತ್ತ ಹೆಸರಿಗೆ ನಾಮಕರಣ ಮಾಡುತ್ತಿದ್ದರೆ , ಅವಳು ಮಾತ್ರ ‘ಈ ಹಾವುಗಳಿಗ್ಯಾಕೆ ಕಚ್ಚುವ ಕೆಲಸ . . . . . ಗಂಡಸರನ್ನು ಸಾಯಿಸುವ ಕೆಲಸ. . .’ ಎಂದು ರೊಚ್ಚಿನಿಂದ ಇನ್ನೂ ನಾಲ್ಕಾರು    ಸಾರಿ ಬಡಿದಿದ್ದಳು . ಆಗ ಅವಳ ಕಣ್ಣು ತುಂಬಾ ನೀರಿತ್ತು ಎಂದು ಕೆಲವರು ತರ್ಕಿಸಿದ್ದರು  .
    ಅಂತಹ ಬೀದಾದಿಯ  ನೇರ ಮೇಲ್ವಿಚಾರಣೆಯಲ್ಲಿ ಶಮೀಮ್ ಬಾನು  ಪಳಗಿದ್ದು . ಮೊದ ಮೊದಲು ಬೀದಾದಿಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದ ಆಕೆ ಕಾಲ ಕಳೆದಂತೆ , ಉಚಾಯಿಸಿ ಮಾತನಾಡುವುದನ್ನು ಆರಂಭಿಸಿದ್ದಳು . ಸಾದತ್‍ನ ಚಿಂತೆ ಕೂಡಾ ಆರಂಭವಾದದ್ದು ಇಲ್ಲಿನಿಂದಲೇ . ತಮಗಾಗಿ ಜೀವ ತೆಯ್ದ ಬೀದಾದಿಯನ್ನು ಶಮೀಮ್ ಎಲ್ಲಿ ನಿಂತ ಕಾಲಲ್ಲಿಯೇ ಹೊರಡಿಸಿ  ಅಟ್ಟುವಳೋ . .. . .  ಆರಿಫ್‍ನಂತೆ . …. ಅಟ್ಟುವುದಾದರೂ ಎಲ್ಲಿಗೆ ?  ಅವನಿಗಾದರೋ ಪರವಾಗಿಲ್ಲ ... ಉದ್ಯೋಗವಿದೆ ,ಹೆಂಡತಿ ಇದ್ದಾಳೆ . ಬೀದಾದಿಯ ಜೊತೆಯಲ್ಲಿ ತಾನಲ್ಲದೆ ಇನ್ಯಾರಿದ್ದಾರೆ ?  ಆಕೆ ಹಾಗೇನಾದರೂ ನಡೆದುಕೊಂಡರೆ . . . . ಅದನ್ನು ನೆನಸಿಕೊಂಡೇ ಅವನಿಗೆ ನಡುಕ ಬಂದಂತಾಗುತ್ತಿತ್ತು . ‘ಎಲ್ಲಾ ಅಲ್ಲಾಹನಿಚ್ಛೆ ’ಎಂದು ಹೇಳಿಕೊಂಡು ಸಮಾಧಾನ ಪಟ್ಟರೂ , ನೆಮ್ಮದಿ ಅವನಿಂದ ದೂರವಾಗಿತ್ತು .
    ಅದೊಂದು ದಿನ . . . . ಅಜೀಮ್ ಹೊರಗಿನಿಂದ ಕೂಗು ಹಾಕಿದ , ‘ ಏ. . . ಸನಾ . . . ಸನಾ . ..ಎಲ್ಲಿದ್ದೀಯಾ ’
‘ಬಂದೆ . . .ಬಂದೆ . . . ಏನಾಗಬೇಕೂ ?’
‘ನೀನು ಬರದೇ ಹೋದರೂ ಪರವಾಗಿಲ್ಲ . . . ಒಂದು ಹಳೆ ಬಟ್ಟೆಯನ್ನು ತೆಗೆದುಕೊಂಡು ಬಾ . . . ಬೈಕ್ ಒರೆಸಲು ಬೇಕು ’
‘ಒಂದೇ ನಿಮಿಷ’ಎಂದವಳೇ ಅವಳು ಓಡಿ ಬಂದು ಅವನ ಕೈಗೆ ಒಂದು ಹಳೆ ಬಟ್ಟೆಯನ್ನಿಟ್ಟು ಮಾಯವಾದಳು . ಕೈಯಲ್ಲಿ ಆ ಬಟ್ಟೆಯನ್ನು ಹಿಡಿದ ಅಜೀಮ್‍ಗೆ ಯಾಕೋ ಅನುಮಾನ ಬಂದಿತು . ಆದರೆ , ಅವನು ಕೂಡಾ ಅರ್ಜೆಂಟಿನಲ್ಲಿದ್ದುದರಿಂದ ಮತ್ತು  ಮನಸ್ಸಿಗೆ ಹೆಚ್ಚು ದಣಿವು ಮಾಡಿಕೊಳಬಾರದೆಂಬ ಆಲಸ್ಯದ ಭಾವವೂ ಕೂಡಾ ತಲೆದೋರಿದ್ದರಿಂದ  ಚಕಚಕನೆ ತನ್ನ ಬೈಕನ್ನು ಒರೆಸಿದ ಶಾಸ್ತ್ರವನ್ನು ಮಾಡಿ , ಆ ಬಟ್ಟೆಯನ್ನು   ಬಾಗಿಲ ಬಳಿ ಎಸೆದು ಹೋದ . ಆದರೆ , ಅವನು ಮಧ್ಯಾಹ್ನ ಮನೆಗೆ ಬಂದಾಗ ಗಂಭೀರ  ಅನಾಹುತವೊಂದು ನಡೆದು ಹೋಗಿದೆ ಹಾಗೂ ಆ  ಅವಘಡಕ್ಕೆ  ತಾನೇ ನೇರ ಕಾರಣ ಎಂದರಿವಾಗಲು  ಅವನಿಗೆ ತಡವಾಗಲಿಲ್ಲ .
     ಅಂಗಳದಲ್ಲಿ ನಿಂತಿದ್ದ  ಬೀದಾದಿ ಮತ್ತು ಆಕೆಯೆದುರಿಗೆ ತನ್ನ ತಾಯಿ . ಎಂದೂ ಅಳದ ಬೀದಾದಿ ಅತ್ತೂ ಅತ್ತೂ ಕಣ್ಣ ಕೋಡಿ ಹರಿದಿತ್ತು . ಆಕೆಯ ಕೈಯಲ್ಲಿ ಅವನು ಬಿಸಾಡಿ ಹೋಗಿದ್ದ ಹಳೆ ಬಟ್ಟೆ . . . ಆ ಹಳೆ ಬಟ್ಟೆಗೆ ತಗುಲಿದ್ದ ಬೈಕಿನ ಕೊಳೆಯನ್ನು ಮತ್ತು ಕಲೆಗಳನ್ನು ಹೋಗಲಾಡಿಸಲು   ಆಕೆ ತನ್ನ ಅಶಕ್ತ ಕೈಗಳಿಂದ ಉಜ್ಜಿ ಉಜ್ಜಿ ಇನ್ನಿಲ್ಲದ ಪ್ರಯತ್ನವನ್ನು ಪಡುತ್ತಿದ್ದಳು . ಅವಳ ಬದಿಯಲ್ಲಿ ವಿಷಣ್ಣಳಾಗಿ ನಿಂತಿದ್ದ ಶಮೀಮ್ ಬಾನು ಅತೀವ ದುಃಖದಿಂದ ಅವಳೆದುರಿಗೆ ಹೊಸದಾದ ರೇಷ್ಮೆಯ ಚಾಪೆಯನ್ನು  ಹಿಡಿದುಕೊಂಡು ನಿಂತಿದ್ದು , ಆಕೆಗೆ ಸಮಾಧಾನ ಮಾಡುತ್ತಿದ್ದಳು .
     ‘ ಇಗೋ. . . ಇದು ಹೊಸದಾದ  ಜಾನಮಾಜ್ . ..ಇದನ್ನು ತಗೋಳಿ ಬೀದಾದಿ’
ಬೀದಾದಿ ಇನ್ನಷ್ಟು ಕಣ್ಣೊರೆಸಿಕೊಳ್ಳುತ್ತಾ   ಬಿಕ್ಕಳಿಸುತ್ತಿದ್ದಳು ,’ ಬೇಡಾ . . .ನನಗೆ ಬೇಡಾ . ..  ಸಾಯೋ  ಮುದುಕಿಗೆ ಅದೆಲ್ಲಾ ಯಾಕೆ ’
‘ಬಿಡ್ತು ಅನ್ನಿ . . ಸಾಯಲಿ ನಿಮ್ಮ ದುಷ್ಮನ್‍ಗಳು. . . . ಇದು ಅಂತಿಂತಹ ಜಾನಮಾಜ್ ಅಲ್ಲಾ . . .ನನ್ನ ಅಕ್ಕ ಹಜ್‍ಗೆ ಹೋಗಿದ್ದಾಗ ನನಗೋಸ್ಕರವಾಗಿ ಹುಡುಕಿ ತಂದಿರೋದು . ಅಲ್ಲಿಯೇ ಝಮ್ ಝಮ್ ನೀರನ್ನು ಪ್ರೋಕ್ಷಣೆ ಮಾಡಿ ತಂದಿರೋದು . ನಿಮ್ಮ ದಮ್ಮಯ್ಯ . . . ಈಗ ಇದನ್ನು ತಗೋಳಿ . ..  ಇದರ ಮೇಲೆ ನಮಜ್ ಮಾಡಿ  ’
    ಅಜೀಮ್‍ಗೆ ತನ್ನ ತಪ್ಪಿನ ಅರಿವಾಯಿತು . ಕಳ್ಳ ಮಾಲು ಸಮೇತ ಸಿಕ್ಕಿ ಬಿದ್ದಂತಾಗಿತ್ತು . ಜಾನಮಾಜಿನ ಮೇಲಿನ ಆಯಿಲ್‍ನ ಕಲೆಗಳು ಎಲ್ಲಾ ಕಥೆಯನ್ನು ಹೇಳುತ್ತಿದ್ದವು .
     ಅವನು ಮಧ್ಯೆ ಪ್ರವೇಶಿಸಿ ‘ಅಮ್ಮೀ ’ಎಂದು ಏನನ್ನೋ ಹೇಳಲು ಪ್ರಯತ್ನ ಪಟ್ಟ . ಅವಳ ತೀಕ್ಷ್ಣ ನೋಟದೆದುರು ತತ್ತರಿಸಿ ಸುಮ್ಮನಾದ . ಸನಾ ಎಲ್ಲಿ ಎಂದು ಹುಡುಕಾಟ ನಡೆಸಿದವನಿಗೆ ಎಂದಿನಂತೆ ಅವಳು ಅವಘಡದ ಮುನ್ಸೂಚನೆಯನ್ನು ಪಡೆದು ನಾಪತ್ತೆಯಾಗಿರುವಳೆಂದು ಅನಿಸಿದ ಹಿನ್ನೆಲೆಯಲ್ಲಿಯೇ ಬೆದರಿದ ಆಸಿಮಾಳ ಭಣ ಭಣ ನೋಟ. . . . . ಬೇಕಾದರೆ ತಾನು ಹರಕೆಯ ಕುರಿಯಾಗಲು ಸಿದ್ಧವೆಂಬ ಸಂದೇಶವನ್ನು ನೀಡಿದ್ದು , ಅವನು ಇನ್ನಷ್ಟು ಅಸ್ತವ್ಯಸ್ತನಾದ.
      ‘ಬೇಡಾ ... ..  . ಬೇಡಾ ಅಂತ ಹೇಳಲಿಲ್ಲವೇ ನಾನು?. . . . ನಿನ್ನ ಅಕ್ಕ ತಂದಿದ್ದರೆ ನೀನೇ ಇಟ್ಕೋ ನನಗೆ ಯಾಕೆ ಕೊಡ್ತೀಯಾ ನನ್ನ ಜಾನಮಾಜ್ ನನಗೆ ಸಾಕು ’
ಅದೇನೋ ಅತೀವ ತಾಳ್ಮೆ ಒದಗಿ ಬಂದಿತ್ತು ಶಮೀಮ್ ಬಾನುವಿಗೆ . ‘ನಾನು ನಮಾಜ್ ಮಾಡಿದರೇನು ನೀವು ನಮಾಜ್ ಮಾಡಿದರೇನು . . . . . ಯಾರು ಈ ಕೆಲಸ  ಮಾಡಿದ್ದಾರೋ ತಿಳಿಯದು . . .ಮಕ್ಕಳು ಗೊತ್ತಿಲ್ಲದೆ ಮಾಡಿರಬಹುದು . . .ತೀರಾ ಹಳೆಯದಾಗಿದೆ .. .. . .’
     ‘ ಹೌದೇ  . . ಹೌದೇ ..  ತೀರಾ ಹಳೆಯದಾಗಿದೆಯೇ . . . . ನಾನೂ ಕೂಡಾ ತೀರಾ ಹಳೆಯದಾಗಿದೀನಲ್ಲಾ .’ ಬೀದಾದಿ ಹಟಕ್ಕೆ ಬಿದ್ದವಳಂತೆ ಜಗಳವಾಡತೊಡಗಿದಳು . ಯಾವ ಕಾರಣಕ್ಕೂ ಇದುವರೆವಿಗೂ ಜಗಳವಾಡಿದವಳಲ್ಲಾ . . . ಆ ತುಂಬಿದ ಮನೆಯಲ್ಲಿ ನೆಂಟರಿಷ್ಟರು ಬಂದರು ಎಂದು ಮೂರು ಕೋಳಿಗಳನ್ನು ಕೊಯ್ದರೂ ಶ್ರದ್ಧೆಯಿಂದ ಆಕೆಯೇ ಕ್ಲೀನ್ ಮಾಡಿ  ಗಮ ಗಮ ಸಾರನ್ನು ಕುದಿಸಿದ್ದಾಗ್ಯೂ ಆಕೆಗೆ ಒಂದೇ ಒಂದು ಪೀಸ್  ಸಿಗದಿದ್ದರೂ ಆಕೆ ಜಗಳವಾಡಿದ್ದಿಲ್ಲ ; ಪಾತ್ರೆ ತುಂಬಾ ಪಾಯಸವನ್ನು ಮಾಡಿ ಕೊನೆಗೆ ಒಂದು ಟೀ ಸ್ಪೂನಿನಷ್ಟು ಪಾಯಸ ಕೂಡಾ ಉಳಿಯದಿದ್ದಾಗಲೂ ಬೇಸರಗೊಂಡವಳಲ್ಲ . ಮದುವೆಗಳಲ್ಲಿ ಅಸಂಖ್ಯ ಜರತಾರಿ ,ರೇಷ್ಮೆ ಸೀರೆಗಳು ಸೂರೆ ಹೋದಾಗಲೂ ಆಸೆಪಟ್ಟವಳಲ್ಲಾ . . .ಯಃಕಶ್ಷಿತ್ ಹಳೆಯ ಜೂಲು ಜೂಲಾದ ಜಾನಮಾಜಿನ ಸಲುವಾಗಿ ಅವಳು ಹರಿಸುತ್ತಿರುವ ಕಣ್ಣೀರನ್ನು ನೋಡಿ ಶಮೀಮ್ ಬಾನುವಿಗೆ ಆಘಾತವಾಗತೊಡಗಿತು . 
     ‘ ಬೇಡಾ ಬೀದಾದಿ ಅಳಬೇಡಿ . ..  ಅಜೀಮ್‍ಗೆ ಗೊತ್ತಾಗಲಿಲ್ಲ. . .ಅದು ನಿಮ್ಮ ಜಾನಮಾಜ್ ಅಂತ. ಅವನೇನೂ ಕೆಟ್ಟ ಹುಡುಗನಲ್ಲ ; ಅವನನ್ನು ಕ್ಷಮಿಸಿ . ಈ ಜಾನಮಾಜ್ ತಗೋಳಿ  ’ಅವಳು ಬೇಡಿಕೊಂಡಷ್ಟೂ ಬೀದಾದಿಯ ದುಃಖ ಜಾಸ್ತಿಯಾಗುತ್ತಿತ್ತು .
     ಅವಳ ತಾಳ್ಮೆಯ ಎಲ್ಲೆಗಳು ಕೂಡಾ ಕುಸಿದು ಬಿದ್ದವು .‘ ಛೇ ! ಇದೊಳ್ಳೆ ಗ್ರಹಚಾರವಾಯಿತಲ್ಲಾ ..  ದರಿದ್ರ ಜಾನಮಾಜ್ . . . ಒಂದು ಹಳೆ ತುಂಡಿನ ಸಲುವಾಗಿ ಮಕ್ಕಳಂತೆ ಇಷ್ಟೊಂದು  ಹಟ ಹಿಡೀತಿದೀರಲ್ಲಾ . . . ನಿಮಗೇನಾದರೂ ತಲೆ ಕೆಟ್ಟಿದೀಯಾ ? ’
ಅವಳು ಆ ಮಾತುಗಳನ್ನು ಸಿಡಿಸುವ ವೇಳೆಗೆ ಸಾದತ್ ಮುಂಬಾಗಿಲಿನಿಂದ ಪ್ರವೇಶಿಸಿದ .ಅವನ ಕೈಕಾಲುಗಳು ತಣ್ಣಗಾದೆಂತೆನಿಸಿತು . ಬಹು ದಿನಗಳ ನಿರೀಕ್ಷೆಯ ಮೃತ್ಯು ದರ್ಶನವಾದಂತೆನಿಸಿ ಅವನು ಅಸ್ವಸ್ಥನಾದ . ಅವನು ಇನ್ನೂ ಆ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತರುವಂತೆಯೇ ಬೀದಾದಿ ಬಿಳಿಚಿಕೊಂಡು ಕೆಳಗೆ ಬಿದ್ದಳು . ಹಳೆಯ ಜಾನಮಾಜ್ ಅವಳ ಕೈಯಿಂದ ಜಾರಿ ಬಿದ್ದಿತು . ಸಾದತ್ ಕೂಡಲೇ ಅವಳನ್ನು ಮಗುವಿನಂತೆ ಎದೆಗವಚಿದ . ಅವಳನ್ನು ಯಾವ ಶಬ್ದಗಳಮೂಲಕ ಸಾಂತ್ವನ ನೀಡಬೇಕೆಂದು ಅವನಿಗೆ ತಿಳಿಯಲಿಲ್ಲ . ಅಜೀಮ್ ನೀರಿನ ಲೋಟವನ್ನು ಹಿಡಿದು ಬಂದ. ಒಂದೆರಡು ಗುಟುಕು ನೀರನ್ನು ಕುಡಿದ ಮೇಲೆ ಅವಳು ಸಾವರಿಸಿಕೊಂಡು  ಅವನನ್ನು ದಿಟ್ಟಿಸಿ ನೋಡಿದಳು ಮತ್ತು ಸಾಬೀತುಗೊಳಿಸುವ ಧ್ವನಿಯಲ್ಲಿ ‘ನಿನಗೆ ಗೊತ್ತಿದೆಯಲ್ಲವಾ ಅದು ಯಾವ ಜಾನಮಾಜ್ ಅಂತಾ’ ಎಂದು ಕೇಳಿದಳು .
    ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವನಿಗೇನೂ ಗೊತ್ತಿರಲಿಲ್ಲ ,  ಅವಳು ತವರು ಮನೆಗೆ ಹಿಂದಿರುಗಿದ ಹತ್ತು ವರ್ಷಗಳ ನಂತರ ಅವನ ತಂದೆತಾಯಿಯ ಮದುವೆಯಾಗಿದ್ದು ಮತ್ತು ಅವನು ತನ್ನ ತಂದೆತಾಯಿಯರ ಆರನೇ ಮಗ ; ಅವನಿಗಾದರೂ ಹೇಗೆ ತಿಳಿಯಲು ಸಾಧ್ಯ ಅವಳ ಮದುವೆಯ ಸಂಗತಿಗಳು ! ಆದರೆ  ಅವನು ಸುಮ್ಮನೆ ತಲೆಯಾಡಿಸಿದ . ‘ನನ್ನ ಮದುವೆಗೆಂದು ನಮ್ಮಪ್ಪ ಅದನ್ನು ಗುಜರಾತಿನಿಂದ ತರಿಸಿದ್ದರು .ನಾನು ನನ್ನ ಅತ್ತೆಯ ಮನೆಗೆ ಹೋದಾಗ ಮೊದಲ ನಮಾಜ್ ಇದೇ ಜಾನಮಾಜಿನ ಮೇಲೆ ಮಾಡಿದ್ದು . ಮತ್ತೆ . . .ಮತ್ತೆ ’ ಒಂದಿಷ್ಟು ತಡೆದು ಅವಳೆಂದಳು ‘ನಾನು ಆವಾಗ ನನ್ನ ಕೋಣೆಯ ಕಿಟಕಿಯ ಬಳಿ ಸಂಜೆಯ ನಮಾಜಿಗೆಂದು ಈ ಜಾನಮಾಜನ್ನು ಹರವಿದ್ದೆ . . . ಆಗ ಕಿಟಕಿಯಿಂದ ಯಾರೋ ಕೈತುಂಬ ಆ ಮಲ್ಲಿಗೆ ಮೊಗ್ಗುಗಳನ್ನು ನನ್ನ ಜಾನಮಾಜಿನ ಮೇಲೆ ಎಸೆದರು . ನಾನು ಹೆದರಿ ಹೋದೆ . . .  ಆಗ ಚಿಮಣಿ ದೀಪಗಳಿದ್ದದ್ದು. .. . . ಹಾಗೆಯೇ ಗಾಬರಿಯಿಂದ ನಾನು ಎದ್ದು ಕಿಟಕಿಯಿಂದಾಚೆ ನೋಡಿದಾಗ ಅವರು ನಗುತ್ತಾ ನಿಂತಿದ್ದರು ’  ಈ ಲೋಕದ ಹಂಗು ತನಗೆ ಇಲ್ಲವೇ ಇಲ್ಲವೆಂಬಂತೆ ಅವಳು ಯಾವುದೋ ಲೋಕದಲ್ಲಿ ತೇಲಿ ಹೋಗುತ್ತಿದ್ದಳು . ಅವಳ ದಾಂಪತ್ಯದ ಗುಟ್ಟುಗಳು . . . ದೇವರೇ ! ಸಾದಾತ್‍ಗೆ ಗಂಟಲು ಹಿಡಿದಂತಾಯಿತು , ಮುಂದೆ ಮಾತನಾಡಲಿಲ್ಲ .  ಬೇಡ. . .ಬೇಡವೆಂದು ಮನದ ಮೂಲೆಯಲ್ಲಿ ಎಚ್ಚರಿಕೆಯ ಗಂಟೆ ಮೊಳಗುತ್ತಿದ್ದರೂ ಅದನ್ನು  ಕಡೆಗಣಿಸಿ ಹೆಂಡತಿಯತ್ತ ದೂಷಿಸುವ ನೋಟವನ್ನು ಬೀರಿದ . ಅವಳು ಇದ್ಯಾವುದನ್ನೂ ಗಮನಿಸದಂತೆ ಸ್ಥಬ್ಧಳಾಗಿದ್ದಳು .ಅವಳ ಕಣ್ಣಂಚಿನಲ್ಲಿಯೂ ಕಂಡೂ ಕಾಣದಂತೆ
     ಇಡೀ ಕುಟುಂಬವು ಚಿತ್ತಾರ್ಪಿತ ಪ್ರತಿಮೆಗಳಂತೆ:  ತಮ್ಮ ತಮ್ಮ ಲೋಕದಲ್ಲಿ ಮುಳುಗಿದ್ದ ಅವರೆಲ್ಲರೂ ತಮ್ಮ ಆತ್ಮದ ಕಟಕಟೆಯಲ್ಲಿ ಆರೋಪಿಗಳಾಗಿ ನಿಂತಿದ್ದರು .  ಅನುದ್ದೇಶಿತವಾಗಿ ನಡೆದು ಹೋದ ಈ ಘಟನೆ ಆ ಕುಟುಂಬವನ್ನು ತಲ್ಲಣಗೊಳಿಸಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ . ಎಲ್ಲರೂ ತಮ್ಮತಮ್ಮ ನೆಲೆಯಲ್ಲಿ ಸಮರ್ಥನೆ ಮಾಡಿಕೊಳ್ಳುವ ಸನ್ನಿವೇಶದಲ್ಲಿದ್ದರು . ಬೀದಾದಿ ತನ್ನ ಹಳೆಯ ಜಾನಮಾಜನ್ನು ನಾಜೂಕಾಗಿ  ಒಗೆದು  , ಮಲ್ಲಿಗೆ ಹೂವಿನ ಸುವಾಸನೆಯು ಅಳಿಯದಂತೆ ಎಚ್ಚರಿಕೆಯಿಂದ ತಂತಿಯ ಮೇಲೆ ಹರವಿದ್ದು ತಪ್ಪೆಂದು ಯಾರು ಹೇಳಲು ಸಾಧ್ಯ?  ಅಜೀಮ್‍ನ ತುರ್ತುಕರೆಗೆ ವೇಗವಾಗಿ ಸ್ಪಂದಿಸಿದ ಸನಾ ಅದೊಂದು ಹಳೆಯ ಬಟ್ಟೆ .  . . ..  ಬೈಕ್ ಒರೆಸಲು ಬಳಸಬಹುದೆಂದು ತೀರ್ಮಾನಿಸಿ , ಅವನ ಕೈಗೆ ವರ್ಗಾಯಿಸಿದ್ದು ಕೂಡಾ ಅವಳ ತಪ್ಪಾಗಿರಲಿಲ್ಲ . ಆ ಬಟ್ಟೆಯ ಸ್ವರೂಪವೇ ಅಂತಹದಾಗಿತ್ತು . ಅಜೀಮ್‍ದು ಪಾಪ ಮೊದಲೇ ತಪ್ಪಿರಲಿಲ್ಲ . ಈ ಮುದುಕಿಯಿಂದ ಅರಿಯದ ತನ್ನ ಮಕ್ಕಳಿಗೆ ಯಾವ ಶಾಪ ತಟ್ಟುತ್ತದೆಯೋ ಅದೂ ಆಕೆ ವರ್ಷಾಂತರಗಳಿಂದ ನಮಾಜ್ ಮಾಡಿದ ಜಾನಮಾಜಿನ ಅಪಚಾರದ ದೆಸೆಯಿಂದ ಎಂದು ತಾಯಿಯ ರಕ್ಷಣಾತ್ಮಕ ನಡವಳಿಕೆಯ ಶಮೀಮ್ ಬಾನು ಅಂತಿಮವಾಗಿ ತಾಳ್ಮೆ ಕಳೆದುಕೊಂಡಿದ್ದಕ್ಕೆ .. . . ಹೀಗೆ ಯಾರೊಬ್ಬರೂ ಕೂಡಾ ಯಾರ ಮೇಲೂ  ತಪ್ಪನ್ನು ವರ್ಗಾಯಿಸಲು ಸಾಧ್ಯವಾಗದಿದ್ದುದು ಒಂದು ಆಯಾಮವಾದರೆ ಎಲ್ಲರಿಗೂ ಈ ವಿಷಯದ ಬಗ್ಗೆ ದುಃಖವಾಗಿತ್ತು  . ಅಸಲಿಗೆ ಈ ಯಾವ ಸಂಗತಿಯನ್ನೂ ಕೂಡಾ ತಿಳಿಯುವ ಗೊಡವೆಗೆ ಹೋಗದ ಸಾದಾತ್ ತನ್ನ ಹೆಂಡತಿಯ ಬಗ್ಗೆ ತನಗೆ ಬೇಕಾದಂತೆ ಕಲ್ಪಿಸಿಕೊಂಡ . ತನ್ನ ಹೆದರಿಕೆ ಹೀಗೆ ನಿಜಸ್ವರೂಪ ಪಡೆಯಬಹುದೆಂಬ  ಆತಂಕ ಅದರ ಬೆನ್ನೆಲ್ಲೇ ಬೀದಾದಿಯ ಮುಂದಿನ ಬದುಕಿನ ವ್ಯವಸ್ಥೆಯ ಬಗ್ಗೆ ಅಪಾರವಾದ ಚಿಂತೆಗೀಡಾದ .ಅಂತೂ ಆಕೆಯನ್ನು ಸಮಾಧಾನ ಪಡೆಸಿ , ಅವಳನ್ನು ನಿಧಾನವಾಗಿ ನಡೆಸಿಕೊಂಡು ಬಂದು ಮಲಗಿಸಿದ ಮೇಲೆ ಕೂಡಾ ಅವನು ಬಹಳ ಹೊತ್ತು ಆಕೆಯ ಕೈಯನ್ನು ಹಿಡಿದುಕೊಂಡು ಕುಳಿತೇ ಇದ್ದ . ಶಮೀಮ್ ಬಾನು  ಆ ಜಾನಮಾಜನ್ನು ಏನು ಮಾಡುವುದೆಂದು ತಿಳಿಯದೆ ಇನ್ನಷ್ಟು ಒಗೆದು ಸಾಧ್ಯವಾದಷ್ಟು ಕಲೆಗಳನ್ನು ಹೋಗಲಾಡಿಸಿ , ತಂತಿಯ ಮೇಲೆ ಹರವಿ ಒಳ ನಡೆದಳು .
  ಜಾನಮಾಜ್ ಪ್ರಕರಣವು ಸುಸೂತ್ರವಾಗಿ ಬಗೆ ಹರಿಯುವ ಯಾವ ಲಕ್ಷಣಗಳೂ ಕಂಡು ಬರಲಿಲ್ಲ . ಬದಲಿಗೆ ಅತ್ಯಂತ ಆಶ್ಚರ್ಯಕರವಾಗಿ ವಿಚಿತ್ರ ತಿರುವನ್ನು ಪಡೆದುಕೊಳ್ಳತೊಡಗಿತು . ಈ ಘಟನೆಯಾದ ಮೇಲೆ ಬೀದಾದಿಯ ದಿನಚರಿಯು ಸಂಪೂರ್ಣವಾಗಿ ಬದಲಾವಣೆಯಾಯಿತು .  ಹೊರಗಡೆ ತಂತಿಯಲ್ಲಿ ತೂಗಾಡುತ್ತಿದ್ದ ತನ್ನ ಜಾನಮಾಜನ್ನು ಅವಳು ಮತ್ತೆ ಮುಟ್ಟಲಿಲ್ಲ . ಅದು ಹಾಗೆಯೇ ತಂತಿಯ ಮೇಲೆ ಬಿಸಿಲಲಿಗೆ ಮೈಯೊಡ್ಡಿಕೊಂಡಿತ್ತು . ನಿಯಮಿತವಾಗಿ ನಮಾಜ್ ಮಾಡುತ್ತಿದ್ದ ಬೀದಾದಿ ಕೆಲವು ದಿನಗಳವರೆಗೆ ನಮಾಜ್ ಮಾಡಲಿಲ್ಲ . ನಮಾಜಿನ ಹೊತ್ತು ಆಗುತ್ತಿದ್ದಂತೆಯೇ ಶಮೀಮ್ ತನ್ನಲ್ಲಿದ್ದ ನಾಲ್ಕಾರು ಜಾನಮಾಜುಗಳ ಪೈಕಿ ಯಾವುದಾದರೊಂದನ್ನು ಅವಳು ಕಾಣುವಂತೆ ಇಡುತ್ತಿದ್ದಳು . ಆದರೆ ಬೀದಾದಿ ಅವುಗಳತ್ತ ತಿರುಗಿಯೂ ನೋಡಲಿಲ್ಲ .
 ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದ  ಬೀದಾದಿ ಎಲ್ಲೆಂದರಲ್ಲಿ ಕಣ್ಣೀರು ಹಾಕತೊಡಗಿದಳು ಅವಳ ಮೌನ ರೋದನಕ್ಕೆ ಹೊತ್ತು-ಗೊತ್ತು ನೀತಿ -ನಿಯಮ ಯಾವುದೂ ಅನ್ವಯವಾಗುವಂತಿರಲಿಲ್ಲ .ಅಕಾರಣವಾಗಿ ಕಣ್ಣೀರು ಸುರಿಸುವ ಅವಳ ಈಸ್ವಭಾವದಿಂದ ಮಕ್ಕಳ ಮೇಲೆ ಯಾವ ಪರಿಣಾಮವೂ ಆಗಲಿಲ್ಲ ಆದರೆ , ಶಮೀಮ್ ಬಾನು ಮತ್ತು ಸಾದತ್‍ನ ಮೇಲೆ ಅಗಾಧ ಪರಿಣಾಮವುಂಟಾಯಿತು . ಬೀದಾದಿಯ ದುಃಖಕ್ಕೆ ಮೂಲ ಕಾರಣ ತನ್ನ ಹೆಂಡತಿಯೇ ಎಂದು ಅವನು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದು , ಪ್ರಕ್ರಿಯಾತ್ಮಕವಾಗಿ ತಾನೇನೂ ಮಾಡಲು ಸಾಧ್ಯವಿಲ್ಲದ ದಯನೀಯ ಪರಿಸ್ಥಿತಿಯಲ್ಲಿ  ಅವನು ಇನ್ನಷ್ಟು ಕುಗ್ಗಿ ಹೋದ ; ಮತ್ತು ಅಪಾಯಕರ ಮಟ್ಟಕ್ಕೆ ಮೌನಕ್ಕೆ ಶರಣಾದ ಹಾಗೂ ಎಲ್ಲಾ ತಪ್ಪುಗಳನ್ನೂ ರಿಪೇರಿ ಮಾಡುವ ಸಂಕಲ್ಪದೊಡನೆ ಬೀದಾದಿಯತ್ತ ಹೆಚ್ಚು ಹೆಚ್ಚು ಗಮನ ಕೊಡತೊಡಗಿದ .
 ಶಮೀಮ್ ಬಾನುವಿಗೆ ಅವಳ ಕಣ್ಣೀರಿನಿಂದ ವಿಪರೀತ ಕಿರಿಕಿರಿಯಾಗತೊಡಗಿತು . ಸಂಸಾರ ಅಂದ ಮೇಲೆ ಎಲ್ಲೋ ಒಂದಿಷ್ಟು ಹೆಚ್ಚು ಕಡಿಮೆಯಾಗುತ್ತದೆ ; ಅದನ್ನೇ ಇಷ್ಟೊಂದು ಬೆಳಸುವುದೆಂದರೆ . . . ತಾನು ಹೊಸ ನಮಾಜನ್ನು ನೀಡಿದರೂ ಅದನ್ನು ಒಪ್ಪದ ಈ ಮುದುಕಿ ಕೆಟ್ಟ ಹಟವನ್ನು ಮುಂದುವರೆಸುತ್ತಿದೆ ಹಾಗೂ ತನ್ನ ಗಂಡ ಅದನ್ನು ಬೆಳೆಸುವುದರಲ್ಲು ಮುಖ್ಯ ಪಾತ್ರನ್ನು ವಹಿಸುತ್ತಿದ್ದಾನೆ ಎಂದು ಅವಳು ಕೂಡಾ ತಿಮಾನಕ್ಕೆ ಬಂದಿದ್ದು , ಗಂಡನೊಡನೆ ಮಾತನಾಡುವುದನ್ನು ಬಿಟ್ಟಿದ್ದಳು . ಯಾವ ಜಾನಮಾಜ್ ಆದರೆ ಏನು . . . ಮುಖ್ಯ ನಮಾಜ್ ಮಾಡುವುದಲ್ಲವೇ . . . ಅದನ್ನೇ ಈ ಮುದುಕಿ ಬಿಟ್ಟು ಕೂತಿದೆ ಎಂದು ಅವಳಿಗೆ ಅಸಮಾಧಾನವೂ ಜೊತೆಯಲ್ಲಿ ಬೇಸರ ಮತ್ತು ಮಗನಿಗೆ ಆಕೆಯ ಶಾಪ ಎಲ್ಲಿ ತಟ್ಟುತ್ತದೆಯೋ ಎಂಬ ಆತಂಕಗಳ ನಡುವೆ ಅವಳು ಬೇಯುತ್ತಿದ್ದಳು .   ಯಾವ ಶಾಪವು ಕೂಡಾ ತಗುಲದಂತೆ ಅವಳು  ನಿಯಮಿತವಾಗಿ ನಮಾಜ್ ಮಾಡುತ್ತಾ ಮಗನ ರಕ್ಷಣೆಗಾಗಿ ಪ್ರಾರ್ಥನೆ ಮಾಡತೊಡಗಿದಳು , ಬೆಳಗಿನ ನಮಾಜ್ ಮುಗಿದ ಕೂಡಲೇ ಶ್ರದ್ಧೆಯಿಂದ ಯಾಸೀನ್ ಸೂರಃವನ್ನು ಪಠಿಸಿ ,ಅರ್ಧ ಲೋಟ ನಿರ್ಮಲವಾದ ನೀರಿನ ಮೇಲೆ ಉರುಬಿ ,ಮಗನಿಗೆ ಕುಡಿಸಲಾರಂಭಿಸಿದಳು .ಕುಟುಂಬದಲ್ಲಿ ತೀರಾ ಬಡವರಾಗಿರುವವರನ್ನು ಕಂಡು ಅವರಿಗೆ  ಅಕ್ಕಿ ,ಗೋಧಿ ಬೇಳೆಮೊದಲಾದ ಧಾನ್ಯ, ಮೊಟ್ಟೆ ಮತ್ತು ಹೊಸ ಬಟ್ಟೆ ಬರೆಯನ್ನು ವಿತರಣೆ ಮಾಡಿದಳು .  ಕರಿ ಕೋಳಿಯೊದನ್ನು ತರಿಸಿ ಮಗನಿಗೆ ಗೊತ್ತಾಗದಂತೆ ಅವನ ತಲೆಯ ಮೇಲಿನಿಂದ ನಿವಾಳಿಸಿ ಮನೆಯ ಮೇಲಿನಿಂದ ಜೀವಂತವಾಗಿ ಹಾರಿಸಿದಳು ಅಲ್ಲಿಗೂ ಸಮಾಧಾನವಾಗದೆ , ಮೂರು ದಿನಗಳ ಉಪವಾಸವನ್ನು ಮಾಡಿ , ಮಗನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದಳು .
 ಆದರೆ ಇದ್ಯಾವುದೂ ಕೂಡಾ ತನಗೆ ಸಂಬಂಧಿಸಿದ್ದಲ್ಲವೆಂದು ಬೀದಾದಿ ಅನ್ಯಮನಸ್ಕಳಾಗಿದ್ದು ನಿರಂತರವಾಗಿ ಕಣ್ಣೀರುಗರೆಯುವ ಕಾರ್ಯ ಕ್ರಮವನ್ನು ಮುಂದುವರೆಸಿದ್ದಳು . ಅದೆಷ್ಟು ಮಡುಗಟ್ಟಿತ್ತೋ . . . . ಯಾವ ಯಾವ ನೋವುಗಳ ಋಣತೀರಿಸುತ್ತಿದ್ದಳೋ . . . ವರ್ಷಾಂತರಗಳ ನಿರಾಕರಣೆ ಎಲ್ಲಿ ಹೆಪ್ಪುಗಟ್ಟಿತ್ತೋ . . . ಆಗಾಗ್ಗೆ ನಿಟ್ಟುಸಿರು ಬಿಡುತ್ತಾ ‘ಅಲ್ಲಾಹ್ . . . ಅಲ್ಲಾಹ್  . .ನೀನೇ ನೋಡ್ಕೊಳಪ್ಪ’ ಎಂದು ಅಲ್ಲಾಹನಿಗೆ ನೇರವಾಗಿ  ಅಹವಾಲನ್ನು ಸಲ್ಲಿಸುವ ಹೊಸ ವರಸೆ ಕೂಡಾ ಆರಂಭವಾಯಿತು . ಅಲ್ಲಿಗೆ ಶಮೀಮ್ ಬಾನುವಿಗೆ ಇದ್ದ ಬದ್ದ ಸೈರಣೆಯೂ ಕೂಡಾ ತಪ್ಪಿ ಹೋಯಿತು .
 ಮಕ್ಕಳು ಎಷ್ಟೇ ಪ್ರಯತ್ನ ಪಟ್ಟರೂ  ಬೀ ದಾದಿಯ ದುಃಖವನ್ನು ಶಮನಗೊಳಿಸಲು ಸಾಧ್ಯವಾಗಲಿಲ್ಲ . ಅಜೀಮ್ ತಂಗಿಯರೊಡನೆ ಒಳಸಂಚನ್ನು ಮಾಡಿ , ಆ ಜಾನಮಾಜನ್ನು  ಕೊಂಡೊಯ್ದು ಡ್ರೈ ಕ್ಲೀನಿಂಗ್  ಮಾಡಿಸಿ ತಂದ  .ಕಲೆಗಳೇನೋ ಒಂದಿಷ್ಟು ಮಾಯವಾಗಿದ್ದವು . ಆದರೆ ಅದು ಇನ್ನಷ್ಟು ಹಿಂಜಿದಂತಾಗಿ ಜೂಲು ಜೂಲಾಯಿತು . ಅವನು  ಬೆದರಿ  ಅದರ ಸಹವಾಸ ಬೇಡವೆಂದು ಅದನ್ನು ತಂತಿಯ ಮೇಲೆ ನೇತು ಹಾಕಿದ.
    ಹೀಗೆ ಸುಮಾರು ಹದಿನೈದು ಇಪ್ಪತ್ತು ದಿನಗಳ ಕಾಲ ಯಾವುದೋ ದುರ್ವಿಧಿಯಂತೆ ಆ ಜಾನಮಾಜ್ ಪ್ರಕರಣವು  ಸಾದತ್‍ನ ಕುಟುಂಬವನ್ನು ತನ್ನ ಅನಿಷ್ಟ ಸುಳಿಯಲ್ಲಿ ಸಿಲುಕಿಸಿಕೊಂಡಿತು .ಆದಿನ  . . . ಆಸಿಮಾ ಬೀದಾದಿಯ ಎದುರಿಗೆ ತಿಂಡಿಯ ತಟ್ಟೆಯನ್ನು ನೀರಿನ ಲೋಟವನ್ನು ಇಟ್ಟು ಅಲ್ಲಿಯೇ ನಂತು ಉಪಚರಿಸಿದಳು ತಿಂಡಿಯ ತಟ್ಟೆಯನ್ನು ಕೂಡಾ ಗಮನಿಸದೆ ಬೀದಾದಿ ತನ್ನದೇ ಯಾವುದೋ ಲೋಕದಲ್ಲಿ ಮಗ್ನಳಾಗಿದ್ದಳು . ಆಸಿಮಾ ಒಂದು ಚೂರು ದೋಸೆಯನ್ನು ಮುರಿದು ಆಕೆಯ ಬಾಯಲ್ಲಿಟ್ಟಾಗ ಬೀದಾದಿ ಅದನ್ನು ಥೂ . .  ಥೂ . .. ಎಂದು ಉಗಿದದ್ದೂ ಅಲ್ದೆ , ‘ಅಲ್ಲಾಹ್. . . ಅಲಾಹ್   .. ನೀನೇ ನೋಡ್ಕೊಳಪ್ಪ’ ಎಂಬ ಉದ್ಗಾರವನ್ನು ಹೊರಡಿಸಿದಳು . ಅಡುಗೆ ಮನೆಯಲ್ಲಿ ಮಗುಚುಕಾಯಿಯೊಡನೆ ಸನ್ನದ್ಧಳಾಗಿದ್ದ ಶಮೀಮ್‍ಗೆ ರೇಗಿ ಹೋಯಿತು . ದಡಬಡನೆ ಬಂದವಳೇ ಬೀದಾದಿಯ ಟ್ರಂಕನ್ನು ಒಂದುಕೈಯಲ್ಲಿ ಎತ್ತಿಕೊಂಡು ಬಂದವಳೇಯಾವುದೇ ಮುಲಾಜಿಲ್ಲದೆ ಬೀದಾದಿಯನ್ನು ಕೂಡಾ ಎಳೆದುಕೊಂಡು ಬಾಗಿಲ ಹತ್ತಿರ ಬಂದಳು . ಆಸಿಮಾ ಕೂಡಲೇ ಮಧ್ಯ ಬಂದು ‘  ಅಮ್ಮಿ . . . ಅಮ್ಮಿ… ಬೇಡಾ . .  ಅವರನ್ನು ಬಿಟ್ಟು ಬಿಡಿ ’ ಎಂದು ಗೋಗರೆಯುತ್ತಿದ್ದರೂ ಲೆಕ್ಕಿಸದೆ ರಸ್ತೆಯಲ್ಲಿ ಹೋಗುತ್ತಿದ್ದ ಆಟೋವನ್ನು ಕೂಗಿ ಕರೆದು , ಬೀದಾದಿಯನ್ನ ಜೊತೆಯಲ್ಲಿ ಟ್ರಂಕನ್ನು ಏರಿಸಿ , ಆಟೋದವನ ಕೈಯಲ್ಲಿ ಹಣವನ್ನು ಇರಿಸಿ ‘ಇವರನ್ನು ಆರಿಫ್‍ನ ಮನೆಗೆ ಬಿಡಪ್ಪಾ ’ಎಂದು ಹೇಳಿದವಳೀ ಒಳ ನಡೆದಳು .
    ಆ ಮನೆಯವರನ್ನು ಬಲ್ಲ     ಪರಿಚಯದ ಆಟೋಚಾಲಕನಾಗಿದ್ದ ಅವನು ಶಮೀಮ್ ಬಾನುವಿನ ಕೋಪೋದ್ರಿಕ್ತ ಮುಖವನ್ನು   ಒಮ್ಮೆ ನೋಡಿ ತನ್ನ ಆಟೋವನ್ನು ಓಡಿಸಿ ಆರಿಫ್‍ನ ಮನೆಯತ್ತ ನಡೆದ .ಹೀಗೆ ಬೀದಾದಿಯನನು ತನ್ನ ಓರಗಿತ್ತಿಯ ಮನೆಗೆ ಸಾಗ ಹಾಕಿದರೂ ಆಕೆಗೆ ನೆಮ್ಮದಿಯಂತೂ ದೂರವೇ ಉಳಿಯಿತು . ವಿನಾ ಕಾರಣ ಮಕ್ಕಳ ಮೇ ಸಿಡುಕಲಾರಂಭಿಸಿದಳು . ಎಂದಿನಂತೆ ಅವಳ ಕೋಪಕ್ಕೆ ಈಡು ಮಾಡಿಕೊಳ್ಳುತ್ತಿದ್ದ ಆಸಿಮಾಗೆ ಯಾವುದೇ ಸಾಂತ್ವನ ಪೂರಿತ ಉಡುಗೊರೆಗಳು ದೊರಕುತ್ತಿರಲಿಲ ಬದಿಗೆ ಇನ್ನಷ್ಟು ಒದೆಗಳು ಬೀಳಲಾರಂಭಿಸಿದವು ಮಕ್ಕಳೆಲ್ಲಾ ಕಂಗಾಲಾದರೂ , ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ ಸಂಕಲ್ಪವೂ ಮೂಡಿತು . ಮತ್ತು ಅವರೆಲ್ಲರೂ ಸಮಯ ಸಿಕ್ಕಿದಾಗಲೆಲಾ ಆರಿಫ್‍ನ ಮನೆಗೆ ಹೋಗಲಾರಂಬಿಸಿದರು . ಬೀದಾದಿಯೊಡನೆ ಮಾತನಾಡಲು ಪ್ರಯತ್ನ ನಡೆಸಿದರು . ಆಶ್ಚರ್ಯಕರವಾಗಿ ಆಮನೆಯಲಿ ಬೀದಾದಿ ಸ್ವಲ್ಪ ಸುಧಾರಿಸಿದ್ದಾಳೆ ಎಂದು ಅವರೆಲ್ಲರೂ ತೀರ್ಮಾನಕ್ಕೆ ಬಂದರು .ಎಂದಿನಂತೆ ಆರಿಫ್‍ನ ಜೊತೆಯಲ್ಲಿ ಕುಳಿತು ಊಟ ಮಾಡುತ್ತಾಳೆ ಮತ್ತು ಎಂದಿನಂತೆ ನಮಾಜನ್ನು ನಿಯಮಿತವಾಗಿ ಮಾಡುತ್ತಿದ್ದಾಳೆ ಎಂಬುದನ್ನು ಗಮನಿಸಿ. ಒಳಗೊಳಗೇ ಮಸಲತ್ತನ್ನು ಮಾಡಿದರು .
ಸುಮಾರು ಹದಿನೈದು ದಿನಗಳ ನಂತರ , ಅಜೀಮ್ ಆಟೋದಲ್ಲಿ ಬಿದಾಧಿಯನನು ಕೂರಿಸಿ , ತಮ್ಮನೆಗೆ ಕರೆ ತಂದ . ಶಮೀಮ್ ಬಾನು ದುರುಗುಟ್ಟಿ ಅವನನ್ನು ನೋಡಿದಳಷ್ಟೇ . . . ಏನನ್ನೂ ನುಡಿಯಲಿಲ್ಲ .ತಾಯಿಯ  ಮೋರೆಯ ಮೇಲೆ ನೆಮ್ಮದಿಯ ಕುರುಹುಗಳನ್ನು ಕಂಡ ಅಜೀಮ್ ಸದ್ಯ ಬಚಾವಾದೆ ಎಂದು ನಿಸೂರಾದ . ಆಮೇರೆಗೆ ಬೀದಾದಿಯನ್ನು ಮತ್ತು ಆಕೆಯ ಕಬ್ಬಿಣದ ಟ್ರಂಕನ್ನು ಒಳ ಕೋಣೆಗೆ ಸಾಗಿಸಿದ , ಆದರೆ ದುರದೃಷ್ಟವಶಾತ್ , ಆಮನೆಗೆ ಬಂದ ಕೂಡಲೇ ಬೀದಾದಿಯ ದೈನಂದಿನ ಕ್ರಮ ತಪ್ಪತೊಡಗಿತು . ಬೆಳಗಿನ ಜಾವದ ನಮಾಜಿಗೆ ಕುಳಿತವಳು ಮಧ್ಯಾಹ್ನ 12 ಗಂಟೆಯವರೆವಿಗೂ ಕುಇತೇ ಇರುತ್ತಿದ್ದಳು . ಯಾವ ನಮಾಜ್ ಮಾಡುತ್ತಿದ್ದಾಳೆ . . . ಯಾವ ಹೊತ್ತಿನ ನಮಾಜ್.. .. .  . ಯಾವ ಸೂರಃವನ್ನು ಪಠಿಸುತ್ತಿದ್ದೇನೆ  ಎಂಬುದು ಅವಳಿಗೆ ನೆನಪಿನಲ್ಲಿ ಉಳಿಯುತ್ತಿರಲಿಲ್ಲ . ಊಟ ಮಾಡಿದ ಕೂಡಲೇ ‘ಅಲ್ಲಾಹ್ . . ಅಲ್ಲಾಹ್ .  ನನಗೆ ಊಟವನ್ನೇ ಕೊಟ್ಟಿಲ್ಲ .. ನೀನೇ   . .  ನೋಡಿಕೊಳ್ಳಪ್ಪಾ ’ ಎಂದು ನೇರವಾಗಿ ಅಲ್ಲಾಹನಿಗೆ ಅಹವಾಲನ್ನು ಸಲ್ಲಿಸಲಾರಂಭಿಸಿದಳು . ಮತ್ತೆ ತಾಪತ್ರಯ ಶುರುವಾಯಿತು .
          ಇನ್ನು, ಸುಮ್ಮನಿದ್ದರೆ ಆಗದು    ಈ ಸಮಸ್ಯೆಗೆ ಪರಿಹಾರವನ್ನು ಹುಡುಕಲೇ ಬೇಕು ಎಂದು ಅಜೀಮ್ ಆಲೋಚಿಸಿದ. ಆ ದಿನ ಶಮೀಮ್ ಬಾನು ಹೊರಹೋಗಿದ್ದಳು. ಸಾದತ್ ಎಂದಿನಂತೆ ಮನೆಯಿಂದ ಹೊರಗಿದ್ದ. ಅಜೀಮ್ ತನ್ನ ಇಬ್ಬರು ತಂಗಿಯರನ್ನು ಸೇರಿಸಿಕೊಂಡು ಮೀಟಿಂಗ್ ಮಾಡಲು ಆರಂಭಿಸಿದ. ಆದರೆ ಎಂದಿನಂತೆ ಕಿಡಿಗೇಡಿ ಬುದ್ದಿಯ ಸನಾ ತಕರಾರನ್ನು ಆರಂಭಿಸಿದಳು.ಊಟ ತಿಂಡಿ ಇಲ್ಲದ ಮೀಟಿಂಗ್ ಅದೆಂತಹುದು  . . . . .? ಬೀದಿಯ ಕೊನೆಯಲ್ಲಿರುವ ಪಾನಿಪುರಿ ಮಾರುವಾತನಿಂದ ಅವನು ಪಾನಿಪುರಿ ತಂದು ಕೊಟ್ಟರೆ ಮಾತ್ರ ತಾನು ಅವನ ಮೀಟಿಂಗ್‍ನಲ್ಲಿ ಭಾಗವಹಿಸುವುದಾಗಿಯೂ ಇಲ್ಲವಾದಲ್ಲಿ ತಾಯಿಗೆ ಸವಿವರ ವೃತ್ತಾಂತವನ್ನು ಅರಹುವುದಾಗಿಯೂ ಅವಳು ಬ್ಲಾಕ್‍ಮೇಲ್ ತಂತ್ರಕ್ಕೆ ಉದ್ಯುಕ್ತಳಾದಳು. ಸಭೆಯನ್ನು ಪ್ರಾರಂಭವಾಸುವುದಕ್ಕಿಂತ ಮುಂಚೆಯೇ ಬರಖಾಸ್ತುಗೊಳಿಸಿ ಅಜೀಮ್ ಹೊರನಡೆದ. ಮತ್ತು ಚಿಕನ್ ಕಬಾಬ್ ಹಾಗೂ ಪೆಪ್ಸಿ ಬಾಟ್ಲಿಯೊಡನೆ ಮರಳಿ ಬಂದ. ಸನಾ ಸಂತುಷ್ಟಳಾದಳು. ಆಸಿಮಾ ಪ್ಲೇಟಿನಲ್ಲಿ ಚಿಕನ್ ತುಂಡುಗಳನ್ನಿಟ್ಟು ಅವರಿಬ್ಬರಿಗೂ ನೀಡಿ ತಾನೂ ಕೂಡಾ ಚಿಕನ್ನನ್ನು ಬಾಯಿಗಿಡುವಷ್ಟರಲ್ಲಿಯೇ ಎಡತಾಕುತ್ತಾ ಬೀದಾದಿ ಅಲ್ಲಿಗೆ ಬಂದಳು. ಅಜೀಮ್ ನಕ್ಕ. ‘ಓಹೋ ಅಧ್ಯಕ್ಷರೇ ಇಲ್ಲದೆ ಸಭೆ ಹೇಗಾಗುತ್ತದೆ’ ಎಂದು ಸ್ವಲ್ಪ ಸರಿದು ಬೀದಾದಿಯನ್ನು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡ. ಮತ್ತು ಅವಳಿಗೆ ತಿನ್ನಲು ಚಿಕನ್ ಕೊಡಬಹುದೇ ಬೇಡವೇ ಎಂದು  ಆಲೋಚಿಸುತ್ತಾ ಆಸೀಮಾಳತ್ತ ನೋಟ ಬೀರಿದ. ಅವರಿಬ್ಬರ ಸಂಜ್ಞಾ ಭಾಷೆಯನ್ನು ಗಮನಿಸುತ್ತಿದ್ದ ಸನಾ ಯಾವ ಮುನ್ಸೂಚನೆಯನ್ನೂ ನೀಡದೇ ತನ್ನ ಕೈಯಲ್ಲಿದ್ದ ಗ್ಲಾಸಿನಲ್ಲಿ ನೊರೆ ಏಳುತ್ತಿದ್ದ ಪಾನೀಯವನ್ನು ಬೀದಾದಿಯ ಕೈಗಿತ್ತು’ ಕುಡಿಯಿರಿ.. . .. ಕುಡಿಯಿರಿ’ ಎಂದು ಪ್ರೋತ್ಸಾಹಿಸಿದಳು. ಎಲ್ಲರೂ ನೋಡನೋಡುತ್ತಿದ್ದಂತೆಯೇ ಬೀದಾದಿ ಆ ಪಾನೀಯವನ್ನು ತುಟಿಗಿಟ್ಟಳು. ಮತ್ತು ಅದರ  ಸ್ವಾದವನ್ನು ಆನಂದದಿಂದ ಅನುಭವಿಸುತ್ತಾ ಪೂರ್ಣ ಲೋಟವನ್ನು ಒಂದೇ ಗುಟುಕಿನಲ್ಲಿ ಖಾಲಿ ಮಾಡಿದಳು.
           ತುಟಿಗಳ ಮೇಲೆ ನಾಲಿಗೆಯನ್ನಾಡಿಸುತ್ತಾ ಅಜೀಮ್‍ನ ಲೋಟದತ್ತ ಕಣ್ಣನ್ನು ನೆಟ್ಟು ‘ಅದೇನೂ. . . .’ಎಂದು ರಾಗವಾಗಿ ಕೇಳಿದಳು. ಅಜೀಮ್ ಉತ್ತರಿಸುವುದಕ್ಕಿಂತ ಮುಂಚೆಯೇ ಸನಾ ತುಂಟ ನಗೆ ಬೀರುತ್ತಾ  ‘ ಈಗಾಗಲೇ ಏರಿ ಬಿಟ್ಟಿದೆ. . . . ಅದು ಆಬ್-ಎ-ಕೌಸರ್ ‘ಎಂದಿ ಬಿದ್ದಿ ಬಿದ್ದು ನಕ್ಕಳು .ಉಳಿದವರಿಬ್ಬರಿಗೂ ಅವಳ ಈ ಪರಿಯ ಹಾಸ್ಯ ಒಂದಿಷ್ಟೂ ಇಷ್ಟವಾಗಲಿಲ್ಲ . ಬೀದಾದಿಯ ಮುಖ ಊರಗಲವಾಯಿತು.’ ಆಬೆ ಕೌಸರ್ . .. .ಹೌದಾ? ಅದು ಸ್ವರ್ಗದಲ್ಲಿಯಲ್ಲವಾ ಸಿಗುವುದು ‘ ಎಂದು ಬೀದಾದಿ ತರ್ಕಬದ್ಧವಾಗಿ ಪ್ರಶ್ನಿಸಿದಳು.
     ‘ಹೌದು-ಹೌದು ಇದು ಸ್ವರ್ಗದ ಪಾನೀಯ. ಪುಣ್ಯವಂತರಿಗೆ ಮಾತ್ರ ಸಿಗುವುದು . ಈಗ ನೀವು ಸ್ವರ್ಗದಲ್ಲಿದ್ದೀರಿ. ಮತ್ತೆ ನಾನು ನಿಮ್ಮ  ಸೇವೆಗೆ ಸಿದ್ಧವಿರುವ  ಹೂರ್( ಗಂಧರ್ವ ಕನ್ಯೆ) ’ಎಂದು ಅವಳು ನಾಟಕೀಯವಾಗಿ ಉತ್ತರಿಸಿದಳು. ಈಗ ಬೀದಾದಿಗೆ ನಿಜವಾದ ಸಮಸ್ಯೆ ಆರಂಭವಾಗಿತ್ತು.
‘ ಹಾಗಾದರೆ ನಾನು ಸ್ವರ್ಗದಲ್ಲಿದ್ದರೆ. . . . ಅವರು ಎಲ್ಲಿ? ’ ಎಂದು ವಿಚಾರಮಗ್ನಳಾದಳು . ಸನಾ  ತನ್ನ ಕಿಡಿಗೇಡಿತನವನ್ನು   ಬಿಡದೇ ತನ್ನ ಜಡೆಯಲ್ಲಿದ್ದ ಮಲ್ಲಿಗೆಯ ಮಾಲೆಯನ್ನು ಹರಿದು,  ಬೀದಾದಿಯ ಹಿಂದಿನಿಂದ ಬಂದು ಅವರ ಮಡಿಲಲ್ಲಿ ಬೀಳುವಂತೆ ಮಲ್ಲಿಗೆ ಹೂವನ್ನು ಎಸೆದು
        ‘ನೋಡಿ, ನೋಡಿ ನಿಮ್ಮ ಹಿಂದೆಯೇ ಇದ್ದಾರೆ, ಮಲ್ಲಿಗೆ ಹೂವನ್ನು ಎಸೆಯುತ್ತಿದ್ದಾರೆ. ಆದರೆ ನೀವು ಮಾತ್ರ ಹಿಂದಿರುಗಿ ನೋಡಬಾರದು’ ಎಂದು ಆದೇಶ ಮಾಡಿದಳು. ಬೀದಾದಿಯ ಮೋರೆ ಸಂತಸದಿಂದ ಬಿರಿಯುತ್ತಿತ್ತು. ಆದರೆ ಆಕೆ ಹಿಂದಿರುಗಿ ನೋಡಲಿಲ್ಲ. ತಡವರಿಸುತ್ತಾ ತನ್ನ ಮಡಿಲಲ್ಲಿ ಬಿದ್ದಿದ್ದ ಮಲ್ಲಿಗೆ ಹೂವನ್ನು ಸ್ಪರ್ಷಿಸುತ್ತಿದ್ದಳು. ಕೆಲ ಹೊತ್ತು ಕುಳಿತವಳು ನನಗೆ ಇನ್ನಷ್ಟು ‘ ಆಬ್-ಎ_ಕೌಸರ್ ಬೇಕು ಎಂದಳು ’ ಅವರಿಬ್ಬರನ್ನು ಗಮನಿಸುತ್ತಿದ್ದ ಅಜೀಮ್ ಸನಾಳನ್ನು ತಡೆಯಲೂ ಇಲ್ಲಾ , ಅವಳ ಮೇಲೆ ಕೋಪಿಸಲೂ ಇಲ್ಲ . ಬದಲಿಗೆ ಬೀದಾದಿಗೆ ಅತ್ಯಂತ ಖುಷಿ ಕೊಡುತ್ತಿರುವ ಈ ಪ್ರಸಂಗದಲ್ಲಿ ಬೀದಾದಿ ನಿಜವಾಗಿಯೂ  ಸಂತೋಷವನ್ನು ಅನುಭವಿಸುತ್ತಿದ್ದಾಳೆಯೋ ಅಥವಾ ಆಕೆಯೂ ಸನಾಳಂತೆ ನಾಟಕವಾಡುತ್ತಿದ್ದಾಳೆಯೋ  ಎಂದು ನಿರ್ಧರಿಸಲಾಗದೆ  ತನ್ನ ಲೋಟದಲ್ಲಿ ಉಳಿದಿದ್ದ ಪಾನೀಯವನ್ನು ಅವಳ ಕೈಗಿತ್ತ. ಅವಳು ಲೋಟವನ್ನು ತನ್ನ ಬಾಯಿಗಿಟ್ಟು ಸಂತುಷ್ಟಳಾದಳು.
       ಹೊರಗೆ ಬೆಲ್ ಆದದ್ದೇ ತಡ ಆಸಿಮಾ ತಟ್ಟೆ ಲೋಟಗಳನ್ನು ಎತ್ತಿಕೊಂಡು ಅಡುಗೆ ಮನೆಗೆ ದೌಡಾಯಿಸಿದಳು.  ಅವರೆಲ್ಲರೂ ತಮ್ಮ ಕೈ ಬಾಯನ್ನು ಒರೆಸಿಕೊಂಡು ಕುಳಿತರು. ಅಜೀಮ್ ಕೂಡಾ ಎಚ್ಚರಿಕೆಯಿಂದ ಬಾಗಿಲ ಕಡೆ ಕಣ್ಣು ಹಾಯಿಸಿದ. ಶಮೀಮ್ ಬಾನು ಮನೆಯೊಳಗಡೆ ಪ್ರವೇಶಿಸಿದ್ದರಿಂದ ಅವರ ನಾಟಕಕ್ಕೆ ತೆರೆ ಬಿತ್ತು.
          ಆಬ್-ಎ-ಕೌಸರ್ ಕುಡಿದ ನಂತರ ಬೀದಾದಿಯ ಸುಮಾರು ಸಂಕಷ್ಟಗಳು ದೂರವಾದವು. ಸ್ವರ್ಗದಲ್ಲಿರುವವರಿಗೆ ಯಾವ ಕಷ್ಟಗಳಿರುತ್ತವೆ  ? ಅವಳು ಸುತ್ತ ಮುತ್ತಲು ತನ್ನ ಗಂಡನನ್ನು ಕಾಣುತ್ತಿದ್ದಳು. ಅನುಭವಿಸುತ್ತಿದ್ದಳು. ಮತ್ತು ಸ್ವರ್ಗದರಮನೆಯಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದಳು. ಅವಳು ಒಮ್ಮೆ ಆ ಪಾನೀಯವನ್ನು ಕುಡಿದ ನಂತರ  ತನ್ನ ಸ್ವರ್ಗ ಲೋಕದಿಂದ ಮರಳಿ ಬರಲೇ ಇಲ್ಲ . ಯಾವ ಮತ್ತು ಕೂಡ ಇಲ್ಲದ ಆಪಾನೀಯವು ಬೀದಾದಿಗೆ ಹೇಗೆ ಮತ್ತನ್ನು ತರಿಸಿದೆ ಎಂದು ಸನಾ ಕಂಗಾಲಾದಳು . ಬೀದಾದಿ ಆಗಾಗ್ಗೆ ‘ ನನ್ನ ಹೂರ್ ಎಲ್ಲಿ? ‘ಎಂದು ಹುಡುಕುವುದು ಯಾರನ್ನು ಎಂಬುದು ಶಮೀಮ್ ಬಾನುವಿಗೆ ತಿಳಿಯಲೇ ಇಲ್ಲ . ತನ್ನ ಕೆಲಸ ಕಾರ್ಯದ ನಿಮಿತ್ತ ಅವು ಹೊರಹೋದಾಗ , ಸನಾ ಹೂರ್‍ನ ರೂಪಧಾರಣೆ ಮಾಡುತ್ತಿದ್ದಳು . ಹಾಗೆ ಅವಳು ಹೂರ್ ಆದಾಗಲೆಲ್ಲ ಕಡ್ಡಾಯವಾಗಿ ಚಮಕಿಯ ಸೀರೆಯನ್ನು ಉಡಬೇಕಿತ್ತು . ಬೀದಾದಿಯ ಹೂರ್‍ನ ಪರಿಕಲ್ಪನೆ ಹಾಗಿತ್ತು . ಇಲ್ಲವಾದಲ್ಲಿ ತನ್ನ ಹೂರನ್ನು ಕಾಣದೆ ಬೀದಾದಿ ಅಸ್ವಸ್ಥಳಾಗಿ ,ವಿಶೇಷವಾಗಿ ಪರಿತಪಿಸುತ್ತಿದ್ದಳು .ಹೀಗೆ ತನ್ನ ಸ್ವರ್ಗದ ಪಾನೀಯದ ವಿಶೇಷ ಅನುಭೂತಿಯಲ್ಲಿ ಮತ್ತು ತನ್ನ ಖಾಸಗಿ ಹೂರ್‍ನ ಓಲೈಕೆಯಲ್ಲಿ ಈ ಪ್ರಪಂಚದ ಎಲ್ಲಾ ನಂಟನ್ನು ಕಳೆದುಕೊಂಡು , ತನ್ನ ಪತಿಯ ಸಾಂಗತ್ಯದಲ್ಲಿ ನೆಮ್ಮದಿಯಾಗಿಬಿಟ್ಟಳು . ತನ್ನಲ್ಲಿ ತಾನೇ ಮಾತನಾಡುತ್ತಾ ನಗುತ್ತಾ ಇರುತ್ತಿದ್ದ ಬೀದಾದಿಯನ್ನು ಕಂಡು ಶಮೀಮ್ ಬಾನು ವ್ಯಥೆ ಪಟ್ಟುಕೊಳ್ಳುತ್ತಿದ್ದರೂ . ಅವಳ ಇನ್ನಿತರೆ ರೇಜಿಗೆಗಳು ಇಲ್ಲವಲ್ಲ ಎಂದು ನೆಮ್ಮದಿಯಾಗಿಟ್ಟಳು .ಮತ್ತೆ ಯಾವತ್ತೂ  ಕೂಡ  ಆರಿಫ್ ಮನೆಗೆ ಕಳುಹಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಸಾದತ್‍ಗೆ  ಕೂಡ ಶಮೀಮ್ ಬಾನು  ಬೀದಾದಿಯನ್ನು ಹೊರ ಹಾಕುತ್ತಿಲ್ಲವಲ್ಲ  ಎಂಬುದು ನೆಮ್ಮದಿಯ ಸಂಗತಿಯಾಗಿತ್ತು .
  ಕಷ್ಟ ಒದಗಿ ಬಂದದ್ದು ಮಾತ್ರ ಅಜೀಮ್‍ಗೆ. ಯಾವುದೇ ಮುನ್ಸೂಚನೆಯನ್ನು ನೀಡದೆ ಬಂದೆರಗಿದ  ಸ್ವರ್ಗದ ನಾಟಕವನ್ನು ಅವನು ಮುಂದುವರೆಸಬೇಕಿತ್ತು.  ಕೋಪತಾಪ ಅಳು, ಮತ್ತು ಹಟಮಾರಿತನ ಬೀದಾದಿಯಿಂದ ದೂರವಾಗಿತ್ತು. ಆದರೆ ಅವಳು ಊಟ-ತಿಂಡಿಯನ್ನು ಮಾತ್ರ ಮತ್ತೆ ಮುಟ್ಟಲಿಲ್ಲ. ಆಬ್-ಎ-ಕೌಸರ್‍ನ ವಿನಃ ಅವಳಿಗೆ ಬೇರೆ ಯಾವ ಊಟೋಪಚಾರದ ಅಗತ್ಯವೂ ಇರಲಿಲ್ಲ. ಅವಳಿಗೆ ಆಬ್ –ಎ-ಕೌಸರ್‍ನ್ನು ಸರಬರಾಜು ಮಾಡುವುದರಲ್ಲಿ ಅಜೀಮ್ ಸೋತು ಹೋದ. ಅವಳಿಗೆ ಬೇಕೆನಿಸಿದಾಗಲೆಲ್ಲಾ ಅವಳು ಸ್ವರ್ಗದ ಪಾನೀಯಕ್ಕೆ ಬೇಡಿಕೆ ಸಲ್ಲಿಸಲಾರಂಭಿಸಿದಳು. ಎಳೆನೀರು, ಪಾನಕ , ಅಥವಾ ಇನ್ಯಾವುದೇ ಪಾನೀಯವನ್ನು ಕೊಟ್ಟರೂ ಮುಲಾಜಿಲ್ಲದೇ ಎಸೆದು ಬಿಡುತ್ತಿದ್ದಳು. ಅವಳ ನಾಲಿಗೆಗೆ ಒಗ್ಗಿ ಹೋಗಿದ್ದು, ವಿಶೇಷ ಆನಂದಾನುಭವವನ್ನು ನೀಡುತ್ತಿದ್ದ ಪಾನೀಯದ ಹಿಂದ ಅಜೀಮ್‍ನ ಪಾಕೆಟ್ ಮನಿ ಎಲ್ಲವೂ ಖಾಲಿಯಾಗುತ್ತಿತ್ತು. ಸಾದತ್ ಮತ್ತು ಶಮೀಮ್ ಬಾನು ಎದುರಿಗೂ ಆಕೆ ನಿರಂತರವಾಗಿ ಆಬ್ –ಎ-ಕೌಸರ್‍ನ ಬಗ್ಗೆಯೇ ಮಾತಾಡುತ್ತಿದ್ದಳು. ಅವರಿಬ್ಬರೂ ಈಕೆಗೆ ಸಾಕಷ್ಟು ಬುದ್ದಿ ಭ್ರಮಣೆಯಾಗಿದೆ ಎಂದು ತೀರ್ಮಾನಿಸಿದರು.
         ಪೇಚಿಗೆ ಬಿದ್ದ ಅಜೀಮ್ ತನ್ನ ಸ್ನೇಹಿತರ ಬಳಿ ಸಾಲ ಮಾಡಿದ. ದಿನಸಿ ಅಂಗಡಿಯ ಮನೆ ಲೆಕ್ಕದಲ್ಲಿ ಒಂದಿಷ್ಟು ಸುಳ್ಳು ಲೆಕ್ಕ ಬರೆಸಿದ. ಕೊನೆಗೆ ಬೀದಾದಿಯ ವರಾತ ಹೆಚ್ಚಿದಾಗ ಆರಿಫ್‍ನ ಬಳಿ ಹೋಗಿ ಶರಣಾದ. ಆರಿಫ್ ನಕ್ಕು  ನಕ್ಕು ಸಾಕಾಗಿ, ಅವನ ಬೆನ್ನಿಗೆ ಎರಡೇಟು ಬಿಗಿದರೂ ದಿನವೊಂದಕ್ಕೆ ಒಂದು ಬಾಟಲಿ ಪಾನೀಯವು ಅವನಿಗೆ ಸಿಗುವಂತೆ ವ್ಯವಸ್ಥೆ ಮಾಡಿದ. ಸ್ವರ್ಗದ ಪಾನೀಯದ ಹಿನ್ನೆಲೆಯಲ್ಲಿ ಮನೆಯಲ್ಲಿ ಸ್ವಲ್ಪ ನೆಮ್ಮದಿ ಮೂಡಿದಂತಾಯಿತು. ಬರಿ ಪಾನೀಯವನ್ನೇ ಕುಡಿದು, ಬೀದಾದಿ ಸತ್ತರೆ ಏನು ಮಾಡುವುದು ಎಂದು ತೀವ್ರ ಚಿಂತಿತನಾಗಿದ್ದ ಅಜೀಮ್‍ನ ಭಯವನ್ನು ಸುಳ್ಳು ಮಾಡುವಂತೆ ಬೀದಾದಿ ಕಳೆದ ಆರು ತಿಂಗಳಿನಿಂದ ಊಟೋಪಚಾರವಿಲ್ಲದೇ ಬದುಕುತ್ತಿದ್ದಾಳೆ. ಶಮೀಮ್ ಬಾನುವಿಗೆ ಆಶ್ಚರ್ಯದ ಮೇಲೆ ಆಶ್ಚರ್ಯ! ಅನ್ನಾಹಾರವಿಲ್ಲದೇ ಈ ಮುದುಕಿ ಬರೀ ನೀರಿನ ಮೇಲೆ ಬದುಕಿರುವುದಾದರೂ ಹೇಗೆ. . .. ಎಂಬುದು. ಈ ರೀತಿ ಪವಾಡವನ್ನು ಕಂಡ ಶಮೀಮ್ ಬಾನು ಮತ್ತೆ ಅವಳನ್ನು ಆರಿಫ್‍ನ ಮನೆಗೆ ಸಾಗಿಸುವ ಪ್ರಯತ್ನ ಮಾಡಲಿಲ್ಲ. ಸಾದತ್ ಕೂಡಾ ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತಾ ಹಿಂದೆ ನಡೆದ  ಜಾನಮಾಜ್ ಪ್ರಕರಣದ ಆಘಾತವನ್ನು ಮರೆಯುವ ಪ್ರಯತ್ನ ಮಾಡುತ್ತಾ ಹೆಂಡತಿಯ ಬಗ್ಗೆ ಆಲೋಚಿಸುತ್ತಲೇ ´’ಪಾಪ ಶಮೀಮ್ ಒಳ್ಳೆಯವಳೇ, ಏನೋ ಈ ಮೆನೋಪಾಸ್ ಎಂಬ ಜಿನ್ ಮೆಟ್ಟಿ ಒಮ್ಮೊಮ್ಮೆ ಹೀಗಾಡ್ತಾಳೆ  ‘ಎಂಬ ಅನುಕೂಲಸಿಂಧು ತೀರ್ಮಾನಕ್ಕೆ ಬಂದ .ಆದರೆ ಆರಿಫ್ ಮಾತ್ರ ಬೀದಾದಿ ಯ ಸಾವನ್ನು ಒಮ್ಮೆ ಬಯಸುತ್ತಾ . . . ಆ ಸಾವು  ಪೌಷ್ಟಿಕಾಂಶದ ಕೊರತೆಯಿಂದ ಮಾತ್ರ ಸಂಭವಿಸಬಾರದು . . . ಸಹಜ ಸಾವಾಗಿದ್ದರೆ ಮಾತ್ರ ತನ್ನ ಆತ್ಮದ ಗ್ಲಾನಿಯಿಂದ ತಾನು ಬಚಾವಾಗಬಹುದು ಇಲ್ಲವಾದರೆ ತಾನೇ ಕೊಲೆಗಾರನಾಗುವವನೇನೊ ಎಂಬ ಆತಂಕದಲ್ಲಿ. . . . . .


No comments:

Post a Comment